ಯುವ ಸಂಸತ್ತು ಅರ್ಥಪೂರ್ಣವಾಗಿ ಆಯೋಜಿಸಿ: ಡಿಸಿ ಇಕ್ರಂ ಶರೀಫ್

ಕಲಬುರಗಿ, ಸೆ.21: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಯುವಜನರಲ್ಲಿ ಪ್ರಜಾಪ್ರಭುತ್ವದ ವಿಚಾರಧಾರೆ ಮತ್ತು ಸಂಸದೀಯ ವ್ಯವಸ್ಥೆಯ ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ‘ಯುವ ಸಂಸತ್ತು’ ಆಯೋಜಿಸಬೇಕು ಎಂದು ಜಿಲ್ಲಾಧಿಕಾರಿ ಇಕ್ರಂ ಶರೀಫ್ ಸೂಚಿಸಿದರು.
ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಲಬುರಗಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ‘ಯುವ ಸಂಸತ್ತು ರಚನೆ’ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಇದೇ ವಾರದೊಳಗೆ ತಾಲೂಕು ಮಟ್ಟದ ಯುವ ಸಂಸತ್ತು ಸಭೆ ನಡೆಸಿ ವರದಿ ಸಲ್ಲಿಸುವಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯ ವಿಧಾನಸಭೆಯ ಮಾದರಿಯಲ್ಲಿ ಪ್ರೌಢಶಾಲೆ, ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಹಂತದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು, ಸಾಧ್ಯವಾದರೆ 224 ವಿದ್ಯಾರ್ಥಿಗಳನ್ನು ಒಳಗೊಂಡ ಯುವ ಸಂಸತ್ತು ರಚಿಸಬೇಕು. ಉತ್ತಮ ಕಾರ್ಯಕ್ಷಮತೆ ತೋರಿದ ವಿದ್ಯಾರ್ಥಿಗಳ ಹೆಸರನ್ನು ಜಿಲ್ಲಾ ಯುವ ಸಂಸತ್ತು ಸಭೆಗೆ ಶಿಫಾರಸು ಮಾಡಬೇಕು. ಜಿಲ್ಲಾ ಮಟ್ಟದಿಂದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರಂತೆ ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟದ ಯುವ ಸಂಸತ್ತಿಗೆ ಆಯ್ಕೆ ಮಾಡಿ ಕಳುಹಿಸಲಾಗುವುದು ಎಂದರು.
ತಾಲೂಕು ಮಟ್ಟದ ಯುವ ಸಂಸತ್ತು ಸಭೆಗಳ ಬಳಿಕ ಜಿಲ್ಲಾ ಮಟ್ಟದ ಯುವ ಸಂಸತ್ತು ಆಯೋಜಿಸಲಾಗುವುದು. ದೇಶದ ಸಂಸದೀಯ ವ್ಯವಸ್ಥೆಯನ್ನು ಪರಿಚಯಿಸುವ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಯುವ ಸಂಸತ್ತು ಯುವ ಸಮುದಾಯಕ್ಕೆ ಸಹಕಾರಿಯಾಗಲಿದೆ. ಹೀಗಾಗಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಬೇಕು ಎಂದು ಹೇಳಿದರು.
ತಾಲೂಕು ಮಟ್ಟದಲ್ಲಿ ಬಿಇಒ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಕಾರ್ಯಕ್ರಮದ ಯಶಸ್ಸಿಗೆ ಮುಂದಾಳತ್ವ ವಹಿಸಬೇಕು. ಜಿಲ್ಲಾ ಯುವ ಸಂಸತ್ತು ಸಭೆಗೆ ಜಿಲ್ಲಾ ಉಸ್ತುವಾರಿ ಸಚಿವರು, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ವಕೀಲರ ಸಂಘದ ಜಿಲ್ಲಾಧ್ಯಕ್ಷರನ್ನು ಆಹ್ವಾನಿಸಬೇಕು. ತಾಲೂಕು ಮಟ್ಟದ ಯುವ ಸಂಸತ್ತಿಗೆ ಶಾಸಕರು, ಸಂಸದರು ಹಾಗೂ ತಾಲೂಕಿನ ನ್ಯಾಯಾಧೀಶರನ್ನು ಆಹ್ವಾನಿಸುವಂತೆ ಸೂಚಿಸಿದರು.
ಯುವ ಸಂಸತ್ತಿನಲ್ಲಿ ಯಾವುದೇ ವಿವಾದಕ್ಕೆ ಆಸ್ಪದವಿಲ್ಲದ ಮೂರು ಪ್ರಮುಖ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಚರ್ಚೆ ನಡೆಸಬೇಕು. ಸಾಂಕೇತಿಕವಾಗಿ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿ ನಿಯಮಗಳಿಗೆ ಅನುಗುಣವಾಗಿ ಯುವ ಸಂಸತ್ತಿನ ಕಲಾಪ ನಡೆಸಬೇಕು ಎಂದರು.
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವ ಸಂಪುಟ, ವಿಧಾನಸಭಾಧ್ಯಕ್ಷ, ಉಪಸಭಾಧ್ಯಕ್ಷ, ವಿರೋಧ ಪಕ್ಷದ ನಾಯಕ ಹಾಗೂ ಮುಖ್ಯ ಸಚೇತಕರ ಪಾತ್ರಗಳನ್ನು ವಿದ್ಯಾರ್ಥಿಗಳಿಗೆ ವಹಿಸಿ ಯುವ ಸಂಸತ್ತು ರಚಿಸಬೇಕು. ಪ್ರಶ್ನೋತ್ತರ ಅವಧಿ, ಶೂನ್ಯ ವೇಳೆ, ನಿಯಮ 330/343ರಡಿ ತುರ್ತು ವಿಷಯಗಳ ಚರ್ಚೆ, ನಿಯಮ 60ರಡಿ ಗಮನ ಸೆಳೆಯುವ ಸೂಚನೆ, ಗೊತ್ತುವಳಿ ಮಂಡನೆ, ವಿಧೇಯಕಗಳ ಮಂಡನೆ, ವಿಧೇಯಕಗಳ ಮೇಲಿನ ಚರ್ಚೆ ಹಾಗೂ ಅಂಗೀಕಾರ ಸೇರಿದಂತೆ ವಿವಿಧ ಸದನದ ಪ್ರಕ್ರಿಯೆಗಳನ್ನು ಅನುಸರಿಸುವ ಮೂಲಕ ವಿದ್ಯಾರ್ಥಿಗಳಿಗೆ ಶಾಸಕಾಂಗ ವ್ಯವಸ್ಥೆಯ ಬಗ್ಗೆ ಪ್ರಾಯೋಗಿಕ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಮನಿ ಅವರು ಯುವ ಸಂಸತ್ತಿನ ರಚನೆ ಹಾಗೂ ಕಾರ್ಯಕಲಾಪಗಳ ಕುರಿತು ವಿವರಿಸಿದರು.
ಸಭೆಯಲ್ಲಿ ಡಿಡಿಪಿಐ ಶಂಕ್ರೆಮ್ಮ ಡವಳಗಿ ಸೇರಿದಂತೆ ವಿಡಿಯೋ ಕಾನ್ಫರೆನ್ಸ್ ಮೂಲಕ ತಹಶೀಲ್ದಾರರು, ಬಿಇಒಗಳು ಹಾಗೂ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.



