ಜಿಲ್ಲಾಸುದ್ದಿ

ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ ಸ್ಥಳದಲ್ಲಿ ವಿಠ್ಠಲ್ ಹೇರೂರ್ ಪ್ರತಿಮೆ ಸ್ಥಾಪನೆಗೆ ಆಗ್ರಹ

ಕಲಬುರಗಿ, ಸೆ.19: ನಗರದ ಹೈಕೋರ್ಟ್ ಕ್ರಾಸ್‌ ಬಳಿ ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಅಹಿಂದ ನಾಯಕ ಸಿದ್ದರಾಮಯ್ಯ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಿರುವುದನ್ನು ಖಂಡಿಸಿ, ಅದನ್ನು ತೆರವುಗೊಳಿಸಿರುವ ಸ್ಥಳದಲ್ಲಿ ಮಾಜಿ ವಿಧಾನ ಪರಿಷತ್‌ ಸದಸ್ಯ ಹಾಗೂ ಕೋಲಿ ಸಮಾಜದ ಮುಖಂಡ ದಿ. ವಿಠ್ಠಲ್ ಹೇರೂರ್ ಅವರ ಪ್ರತಿಮೆ ಸ್ಥಾಪಿಸಬೇಕು ಎಂದು ವಿಶ್ವಲ್ ಹೇರೂರ್ ಯುವ ಬ್ರಿಗೇಡ್ ಹಾಗೂ ವಿಶ್ವಲ್ ಹೇರೂರ್ ಅಭಿಮಾನಿ ಬಳಗದ ಪ್ರಮುಖ ಅವಂತಗೌಡ ಪಾಟೀಲ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಹಿಂದ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ ಅಪಾರ ಗೌರವವಿದೆ. ರಾಜ್ಯದ ಯಾವುದೇ ಸ್ಥಳದಲ್ಲಿ ಅವರ ಪ್ರತಿಮೆ ಸ್ಥಾಪಿಸಿದರೂ ಸ್ವಾಗತಿಸುತ್ತೇವೆ. ಆದರೆ, ವಿಠ್ಠಲ್ ಹೇರೂರ್ ಅವರ ಹೆಸರಿನ ನಾಮಫಲಕ ಇರುವ ಸ್ಥಳದಲ್ಲಿ ಸಿದ್ದರಾಮಯ್ಯ ಅವರ ಪ್ರತಿಮೆ ಸ್ಥಾಪಿಸಿರುವುದನ್ನು ವಿರೋಧಿಸುತ್ತೇವೆ ಎಂದರು.

ಹೈಕೋರ್ಟ್ ಕ್ರಾಸ್‌ ಬಳಿ ಹಲವು ವರ್ಷಗಳಿಂದ ಮಾಜಿ ವಿಧಾನ ಪರಿಷತ್‌ ಸದಸ್ಯ ಹಾಗೂ ಕೋಲಿ ಸಮಾಜದ ಮುಖಂಡ ದಿ. ವಿಠ್ಠಲ್ ಹೇರೂರ್ ಅವರ ಹೆಸರಿನ ನಾಮಫಲಕ ಅಳವಡಿಸಲಾಗಿದ್ದು, ಅವರ ಸ್ಮರಣಾರ್ಥ ಸಾರ್ವಜನಿಕರಿಗೆ ಅನುಕೂಲವಾಗುವ ಹಲವು ಸಮಾಜಮುಖಿ ಕಾರ್ಯಗಳನ್ನು ಸಂಘಟನೆಗಳು ನಡೆಸಿಕೊಂಡು ಬರುತ್ತಿವೆ. ಕುಡಿಯುವ ನೀರಿನ ವ್ಯವಸ್ಥೆ, ಪ್ರಯಾಣಿಕರಿಗೆ ಆಸನಗಳ ವ್ಯವಸ್ಥೆ ಹಾಗೂ ಬಿಸಿಲಿನಿಂದ ರಕ್ಷಣೆಗಾಗಿ ಗಿಡಗಳನ್ನು ನೆಡುವಂತಹ ಕಾರ್ಯಗಳನ್ನು ಇಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಈ ಸ್ಥಳಕ್ಕೆ ವಿಠ್ಠಲ್ ಹೇರೂರ್ ಅವರ ಹೆಸರನ್ನಿಟ್ಟು, ಅವರ ಪ್ರತಿಮೆ ಪ್ರತಿಷ್ಠಾಪಿಸಬೇಕು ಎಂದು ಕಳೆದ ಹತ್ತು ವರ್ಷಗಳಿಂದ ಸಂಬಂಧಿಸಿದ ಇಲಾಖೆಗಳು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಆದರೆ, ಯಾವುದೇ ಅಂತಿಮ ಕ್ರಮ ಕೈಗೊಳ್ಳುವ ಮುನ್ನವೇ ಅದೇ ಸ್ಥಳದಲ್ಲಿ ಸಿದ್ದರಾಮಯ್ಯ ಅವರ ಪ್ರತಿಮೆ ಪ್ರತಿಷ್ಠಾಪಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಿದರು.

ವಿಠ್ಠಲ್ ಹೇರೂರ್ ಅವರ ಹೆಸರಿನಲ್ಲಿ ವೃತ್ತವನ್ನು ಅಧಿಕೃತವಾಗಿ ನಿರ್ಮಿಸಿ, ಅವರ ಪ್ರತಿಮೆ ಸ್ಥಾಪಿಸಲು ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಈ ಕುರಿತು ಈವರೆಗೆ ಸಲ್ಲಿಸಿರುವ ಮನವಿಗಳನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಈ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಮನವಿ ಸಲ್ಲಿಸಲಾಗುವುದು ಎಂದರು.

ಈ ವಿಚಾರ ಯಾವುದೇ ಸಮುದಾಯಗಳ ನಡುವೆ ಸಂಘರ್ಷಕ್ಕೆ ಕಾರಣವಾಗದಂತೆ ಎಲ್ಲರ ಭಾವನೆಗಳನ್ನು ಗೌರವಿಸಿ ಬಗೆಹರಿಸಬೇಕು. ಸಿದ್ದರಾಮಯ್ಯ ಹಾಗೂ ವಿಶ್ವಲ್ ಹೇರೂರ್ ಇಬ್ಬರೂ ಸಾರ್ವಜನಿಕ ಜೀವನದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ ನಾಯಕರು. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಸ್ಥಳದ ಕುರಿತು ಸೂಕ್ತ ನಿರ್ಧಾರ ಕೈಗೊಂಡು ವಿವಾದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಅವಂತಗೌಡ ಪಾಟೀಲ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜು ಗುರುಸ್ವಾಮಿ, ಮಲ್ಲಿಕ್ ಪಟೇಲ್, ಪಿತಾಂಬರ ಕೋಲಿ, ಶಿವರಾಜ ತಳವಾರ್, ಮಡಿವಾಳಪ್ಪ ಎಸ್., ಹಣಮಂತಗೌಡ ಗತ್ತಗೋಳ, ಗುರುನಾಥ ಹೇರೂರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button