ವಿವಾಹಿತೆ ಮೇಲೆ ಸಾಮೂಹಿಕ ಅತ್ಯಾಚಾರ: ಇಬ್ಬರು ಪೊಲೀಸರ ಬಂಧನ, ನಾಲ್ವರು ಪರಾರಿ
ಯಾದಗಿರಿ, ಸೆ.19: ಸಹಾಯ ಮಾಡುವ ನೆಪದಲ್ಲಿ ಇಬ್ಬರು ರೈಲ್ವೆ ಪೊಲೀಸರು ಸೇರಿದಂತೆ ಆರು ಮಂದಿ ಆರೋಪಿಗಳು ವಿವಾಹಿತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ರೈಲ್ವೆ ಪೊಲೀಸರಿಬ್ಬರು ಸೇರಿದಂತೆ ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ.
ಕುಟುಂಬ ಕಲಹದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ರೈಲಿನಲ್ಲಿ ಯಾದಗಿರಿಗೆ ಬಂದಿದ್ದ 22 ವರ್ಷದ ಮಹಿಳೆಗೆ ಚಿಗರಹಳ್ಳಿ ಗ್ರಾಮದ ಮಲ್ಲು ಅಲಿಯಾಸ್ ಮಲ್ಲಪ್ಪ ಹೊಸಮನಿ ಪರಿಚಯವಾಗಿದ್ದ. ಬಳಿಕ ಮಲ್ಲು, ರೈಲ್ವೆ ಪೊಲೀಸ್ ಶರಣಪ್ಪ ಹಾಗೂ ರೈಲ್ವೆ ಪೊಲೀಸ್ ಸಿಬ್ಬಂದಿ ಮಹೇಶ್ ಎಲ್ಲೇರಿ, ಆಕಾಶ್, ಹರ್ಷ ಸೇರಿದಂತೆ ಆರು ಮಂದಿ ಎರಡುವರೆ ತಿಂಗಳ ಅವಧಿಯಲ್ಲಿ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತೆ ಯಾದಗಿರಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ಮಲ್ಲು ಹಾಗೂ ಮಹೇಶ್ ಅವರನ್ನು ಬಂಧಿಸಿದ್ದಾರೆ. ಆಕಾಶ್ ಅಲಿಯಾಸ್ ಪಪ್ಪು, ಹರ್ಷ ಅಲಿಯಾಸ್ ಸುಧಾಕರ ಹಾಗೂ ರೈಲ್ವೆ ಪೊಲೀಸ್ ಶರಣಪ್ಪ ಸೇರಿದಂತೆ ನಾಲ್ವರು ಆರೋಪಿಗಳು ಪರಾರಿಯಾಗಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ವಿವಾಹಿತೆ ನೀಡಿದ ದೂರಿನ ಅನ್ವಯ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಬಂಧನಕ್ಕೂ ಕ್ರಮ ಕೈಗೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಆರೋಪಿಯಾಗಿರುವ ರೈಲ್ವೆ ಪೊಲೀಸ್ ಶರಣಪ್ಪ ಕರ್ತವ್ಯಕ್ಕೆ ಗೈರಾಗಿದ್ದು, ತಲೆಮರೆಸಿಕೊಂಡಿದ್ದಾನೆ. ಅಲ್ಲದೆ ಮೊಬೈಲ್ ಫೋನ್ ಸ್ವಿಚ್‌ಆಫ್ ಮಾಡಿಕೊಂಡಿದ್ದಾನೆ ಎಂದು ರೈಲ್ವೆ ಪೊಲೀಸ್ ಠಾಣೆಯ ಪಿಎಸ್‌ಐ ರವಿರಾಜ್ ಚೌಹಾಣ್ ತಿಳಿಸಿದ್ದಾರೆ.



