ಜಿಲ್ಲಾಸುದ್ದಿ

ಕಲಬುರಗಿಯಲ್ಲಿ ಇಂದು ಎಸ್‌ಸಿ, ಎಸ್‌ಟಿ, ಒಬಿಸಿ ಕಾಯ್ದೆ ಜಾರಿ ಕುರಿತು ಕಾರ್ಯಾಗಾರ

ಕಲಬುರಗಿ, ಸೆ.18: ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳಿಗಾಗಿ ಜಾರಿಗೊಳಿಸಲಾಗಿರುವ ಕಾಯ್ದೆಗಳ ಅನುಷ್ಠಾನ ಹಾಗೂ ಪರಿಣಾಮಕಾರಿ ಜಾರಿ ಕುರಿತು ಸೆ.19ರಂದು ನಗರದಲ್ಲಿ ಕಾರ್ಯಾಗಾರ ಹಾಗೂ ವಿಭಾಗೀಯ ಮಟ್ಟದ ಪದಾಧಿಕಾರಿಗಳ ಸಭೆ ಆಯೋಜಿಸಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಭೀಮಶಾ ಖನ್ನಾ ತಿಳಿಸಿದ್ದಾರೆ.

ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಬಳಿಯ ಕನ್ನಡ ಭವನದಲ್ಲಿ ಸೆ.19ರಂದು ಬೆಳಿಗ್ಗೆ 11 ಗಂಟೆಗೆ ಕಾರ್ಯಾಗಾರ ನಡೆಯಲಿದೆ. ನಂತರ ವಿಭಾಗೀಯ ಮಟ್ಟದ ಪದಾಧಿಕಾರಿಗಳ ಸಭೆ ಜರುಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ದಲಿತ ಚಳವಳಿಯು ಕಳೆದ ಐದು ದಶಕಗಳಲ್ಲಿ ಹಲವು ಸರ್ಕಾರಗಳ ಅವಧಿಯಲ್ಲಿ ಹೋರಾಟ ನಡೆಸಿದೆ. ಪ್ರೊ. ಬಿ. ಕೃಷ್ಣಪ್ಪ, ದೇವನೂರ ಮಹಾದೇವ, ಡಾ. ಸಿದ್ದಲಿಂಗಯ್ಯ, ಗುರುಜಿ ಓ. ಶ್ರೀಧರನ್, ಚಂದ್ರಪ್ರಸಾದ್ ತ್ಯಾಗಿ, ಎಂ.ಡಿ. ಗಂಗಯ್ಯ, ಸಿ. ಮುನಿಯಪ್ಪ, ಎನ್. ಮುನಿಸ್ವಾಮಿ, ಗದ್ದಂ ವೆಂಕಟೇಶ್, ಎಂ. ಜಯಣ್ಣ, ಹರಿಹರ ಆನಂದಸ್ವಾಮಿ, ಎನ್. ಶಿವಣ್ಣ, ಉರುಕುಂದಪ್ಪ, ಡಿ.ಜಿ. ಸಾಗರ್, ಕೆ. ನಾರಾಯಣಸ್ವಾಮಿ ಸೇರಿದಂತೆ ಹಲವು ದಲಿತ ಮುಖಂಡರು ನಡೆಸಿದ ನಿರಂತರ ಹೋರಾಟಗಳ ಫಲವಾಗಿ ಹಲವು ಕಾನೂನುಗಳು ಜಾರಿಗೆ ಬಂದಿವೆ ಎಂದು ಭೀಮಶಾ ಖನ್ನಾ ಹೇಳಿದರು.

ಎಸ್‌ಸಿ, ಎಸ್‌ಟಿ ಸಮುದಾಯಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ, ಮಲ ಹೊರುವ ಪದ್ಧತಿ ನಿಷೇಧ ಕಾಯ್ದೆ, ಬಗರ್‌ಹುಕುಂ ಸಮಿತಿ ಸೇರಿದಂತೆ ವಿವಿಧ ಕಾನೂನುಗಳು ಹಾಗೂ ಇತ್ತೀಚಿನ ದಲಿತ ಸಂಘಟನೆಗಳ ಹೋರಾಟದ ಒತ್ತಡದಿಂದ ಹಲವು ಕ್ರಮಗಳು ಜಾರಿಗೆ ಬರಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದರು.

ಇದು ದಲಿತ ಚಳವಳಿಯ ಹೋರಾಟಕ್ಕೆ ಸಂದ ಜಯವಾಗಿದೆ. ವಿವಿಧ ಕಾಯ್ದೆಗಳನ್ನು ರೂಪಿಸಿ ಜಾರಿಗೆ ತಂದ ರಾಜ್ಯ ಸರ್ಕಾರಗಳನ್ನು ಅಭಿನಂದಿಸುತ್ತೇವೆ. ಆದರೆ ಕಾಯ್ದೆಗಳ ಅನುಷ್ಠಾನ ಹಾಗೂ ಜಾರಿ ವಿಚಾರದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ ಎಂಬುದು ಚಳವಳಿಯ ಪ್ರಮುಖ ಆತಂಕವಾಗಿದೆ ಎಂದು ಅವರು ಹೇಳಿದರು.

ಕಾಯ್ದೆಗಳ ಕುರಿತು ಸಮುದಾಯಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಾಗಾರ ಆಯೋಜಿಸಲಾಗಿದೆ. ವಿಭಾಗೀಯ ಮಟ್ಟದ ಸಭೆಗೆ ಸಂಘಟನೆಯ ಎಲ್ಲ ಹಂತದ ಪದಾಧಿಕಾರಿಗಳು ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button