ಕಲ್ಯಾಣ ಕರ್ನಾಟಕ

ಜೇವರ್ಗಿಯಲ್ಲಿ ಗ್ರೌಂಡ್ ಟ್ರುಥಿಂಗ್: ಬರಪೀಡಿತ ಪಟ್ಟಿಗೆ ಸೇರ್ಪಡೆ ವಿಶ್ವಾಸ

ಕಲಬುರಗಿ, ಸೆ.17: ಜಿಲ್ಲೆಯ ಯಡ್ರಾಮಿ ತಾಲ್ಲೂಕನ್ನು ರಾಜ್ಯ ಸರ್ಕಾರ ಈಗಾಗಲೇ ತೀವ್ರ ಬರಪೀಡಿತ ತಾಲ್ಲೂಕು ಎಂದು ಘೋಷಿಸಿದ್ದು, ಇದೀಗ ಜೇವರ್ಗಿ ತಾಲ್ಲೂಕನ್ನು ಬರ ಪರಿಸ್ಥಿತಿಯ ಅಧ್ಯಯನಕ್ಕಾಗಿ ‘ಗ್ರೌಂಡ್ ಟ್ರುಥಿಂಗ್’ಗೆ ಆಯ್ಕೆ ಮಾಡಲಾಗಿದೆ.

ಗ್ರೌಂಡ್ ಟ್ರುಥಿಂಗ್ ಹಾಗೂ ಬೆಳೆ ಹಾನಿಯ ಸಮಗ್ರ ವರದಿ ಆಧರಿಸಿ ಜೇವರ್ಗಿಯನ್ನೂ ಬರಪೀಡಿತ ತಾಲ್ಲೂಕು ಎಂದು ಸರ್ಕಾರ ಪರಿಗಣಿಸಲಿದೆ ಎಂಬ ವಿಶ್ವಾಸವಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯಸಿಂಗ್ ಧರ್ಮಸಿಂಗ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಮಳೆ ಮತ್ತು ಬೆಳೆ ಪರಿಸ್ಥಿತಿಯ ಮರುಪರಿಶೀಲನೆಯ ಭಾಗವಾಗಿ 17 ಜಿಲ್ಲೆಗಳ 53 ತಾಲ್ಲೂಕುಗಳಲ್ಲಿ ಗ್ರೌಂಡ್ ಟ್ರುಥಿಂಗ್ ನಡೆಸಲು ಸರ್ಕಾರ ಸೂಚಿಸಿದೆ. ಕಲಬುರಗಿ ಜಿಲ್ಲೆಯ ಚಿಂಚೋಳಿ, ಜೇವರ್ಗಿ, ಸೇಡಂ, ಕಾಳಗಿ ಹಾಗೂ ಕಮಲಾಪುರ ತಾಲ್ಲೂಕುಗಳು ಈ ಪಟ್ಟಿಯಲ್ಲಿ ಸೇರಿವೆ.

ಗ್ರೌಂಡ್ ಟ್ರುಥಿಂಗ್ ಸಂದರ್ಭದಲ್ಲಿ ಗ್ರಾಮ ಹಾಗೂ ಜಮೀನು ಮಟ್ಟದಲ್ಲಿ ಬೆಳೆಗಳ ಸ್ಥಿತಿ, ಮಳೆಯ ಕೊರತೆ ಮತ್ತು ಬೆಳೆ ಹಾನಿಯ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಲಾಗುತ್ತದೆ. ಸ್ಥಳ ಪರಿಶೀಲನೆಯಿಂದ ಸಂಗ್ರಹವಾಗುವ ಮಾಹಿತಿಯನ್ನು ಆಧರಿಸಿ ಅರ್ಹ ತಾಲ್ಲೂಕುಗಳನ್ನು ಮುಂದಿನ ಹಂತದಲ್ಲಿ ಬರಪೀಡಿತ ಪಟ್ಟಿಗೆ ಸೇರಿಸುವ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಸಚಿವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಮೊದಲ ಹಂತದಲ್ಲಿ 101 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಸೆ.17ರಂದು ಮತ್ತಷ್ಟು 23 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಸಾಧ್ಯತೆ ಇದೆ. ಯಡ್ರಾಮಿ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಬೇಕು ಎಂಬ ರೈತರ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ.

ಇದೀಗ ಜೇವರ್ಗಿ ತಾಲ್ಲೂಕನ್ನೂ ಗ್ರೌಂಡ್ ಟ್ರುಥಿಂಗ್‌ಗೆ ಆಯ್ಕೆ ಮಾಡಿರುವುದರಿಂದ ಸ್ಥಳ ಪರಿಶೀಲನೆಯ ವೇಳೆ ರೈತರು ಎದುರಿಸುತ್ತಿರುವ ನೈಜ ಪರಿಸ್ಥಿತಿ ದಾಖಲೆಯಾಗಲಿದೆ. ಸಮಗ್ರ ವರದಿ ಸಲ್ಲಿಕೆಯಾದ ಬಳಿಕ ಜೇವರ್ಗಿಯನ್ನೂ ಬರಪೀಡಿತ ತಾಲ್ಲೂಕಾಗಿ ಪರಿಗಣಿಸಲಾಗುವುದು ಎಂಬ ವಿಶ್ವಾಸವಿದೆ ಎಂದು ಡಾ. ಅಜಯಸಿಂಗ್ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button