ಕಲಬುರಗಿಯಲ್ಲಿ ಸೆ.27ರಂದು ಹಿರಿಯ ಕವಿ ಎ.ಕೆ. ರಾಮೇಶ್ವರ ಅವರಿಗೆ ಅಭಿನಂದನಾ ಸಮಾರಂಭ

ಕಲಬುರಗಿ, ಸೆ.17: ಕನ್ನಡ ಸಾಹಿತ್ಯ ಲೋಕದಲ್ಲಿ ‘ಮಕ್ಕಳ ಕವಿ’ ಎಂದೇ ಖ್ಯಾತಿ ಪಡೆದಿರುವ 93ರ ಹರೆಯದ ಹಿರಿಯ ಚೇತನ ಎ.ಕೆ. ರಾಮೇಶ್ವರ ಅವರಿಗೆ ಆತ್ಮೀಯ ಹಾಗೂ ಬೃಹತ್ ಅಭಿನಂದನಾ ಸಮಾರಂಭವನ್ನು ಸೆಪ್ಟೆಂಬರ್ 27ರಂದು ಕಲಬುರಗಿಯಲ್ಲಿ ಆಯೋಜಿಸಲಾಗಿದೆ ಎಂದು ಎ.ಕೆ. ರಾಮೇಶ್ವರ ಸಾಹಿತ್ಯ-ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರು ತಿಳಿಸಿದರು.
ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಸೆ.27ರಂದು ಬೆಳಿಗ್ಗೆ 10.15ಕ್ಕೆ ನಡೆಯಲಿರುವ ಅಭಿನಂದನಾ ಸಮಾರಂಭದ ಸಾನ್ನಿಧ್ಯವನ್ನು ಸೇಡಂನ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಮಹಾಸ್ವಾಮಿಗಳು ವಹಿಸಲಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಮಾಜಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.
ವಿಕಾಸ ಅಕಾಡೆಮಿ ಸಂರಕ್ಷಕರು ಹಾಗೂ ರಾಜ್ಯಸಭೆಯ ಮಾಜಿ ಸದಸ್ಯ ಡಾ. ಬಸವರಾಜ ಪಾಟೀಲ ಸೇಡಂ ಅಧ್ಯಕ್ಷತೆ ವಹಿಸಲಿದ್ದು, ಈ ಸಂದರ್ಭದಲ್ಲಿ ‘ಕನ್ನಡದಲ್ಲಿ ಮಕ್ಕಳ ಸಾಹಿತ್ಯ’ ಗ್ರಂಥವನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಿಜಯಪುರದ ಮಕ್ಕಳ ಸಾಹಿತಿ ಫ.ಗು. ಸಿದ್ದಾಪುರ ಅವರು ಗ್ರಂಥ ಕುರಿತು ಮಾತನಾಡಲಿದ್ದಾರೆ. ಎ.ಕೆ. ರಾಮೇಶ್ವರ ಅವರನ್ನು ಅಭಿನಂದಿಸುವ ಹಿನ್ನೆಲೆಯಲ್ಲಿ ಸಾಹಿತಿ ಹಾಗೂ ಪತ್ರಕರ್ತ ಮಹಿಪಾಲರೆಡ್ಡಿ ಸೇಡಂ ಅಭಿನಂದನಾ ನುಡಿಗಳನ್ನು ಆಡಲಿದ್ದಾರೆ. ಪ್ರಕಾಶಕ ಸಿವಿಜಿ ಚಂದ್ರು ಬೆಂಗಳೂರು ಉಪಸ್ಥಿತರಿರಲಿದ್ದಾರೆ.
ಮಧ್ಯಾಹ್ನ 2.15ರಿಂದ ನಗರದ ವಿವಿಧ ಶಾಲೆಗಳ ಸುಮಾರು 25 ಮಕ್ಕಳೊಂದಿಗೆ ಮಕ್ಕಳ ಕವಿ ಎ.ಕೆ. ರಾಮೇಶ್ವರ ಅವರು ಸಂವಾದ ನಡೆಸಲಿದ್ದಾರೆ.
ಮಕ್ಕಳ ಸಾಹಿತ್ಯಕ್ಕೆ ಐದು ದಶಕಗಳ ಕೊಡುಗೆ
ಮಕ್ಕಳ ಸಾಹಿತ್ಯ ಲೋಕದ ದಿಗ್ಗಜರಾಗಿರುವ ಎ.ಕೆ. ರಾಮೇಶ್ವರ ಅವರು ಐದು ದಶಕಕ್ಕೂ ಹೆಚ್ಚು ಕಾಲ ಕಲಬುರಗಿ ನೆಲದಲ್ಲಿ ನೆಲೆಸಿದ್ದು, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಕ್ಕಳ ಕವಿಯಾಗಿ ವಿಶೇಷ ಖ್ಯಾತಿ ಗಳಿಸಿದ್ದಾರೆ. ಅವರ ಹೆಸರಿನಲ್ಲಿ ಎ.ಕೆ. ರಾಮೇಶ್ವರ ಸಾಹಿತ್ಯ-ಸಾಂಸ್ಕೃತಿಕ ಪ್ರತಿಷ್ಠಾನ ನೋಂದಣಿಯಾಗಿದ್ದು, ಪ್ರತಿಷ್ಠಾನದ ಉದ್ಘಾಟನಾ ಸಮಾರಂಭವೂ ಸೆ.27ರಂದು ಮಧ್ಯಾಹ್ನ 3.15ಕ್ಕೆ ವಿಶ್ವೇಶ್ವರಯ್ಯ ಭವನದಲ್ಲಿ ನಡೆಯಲಿದೆ.
ಹೊನ್ನಕಿರಣಗಿಯ ಚಂದ್ರಗುಂಡ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ಬೆಳಗಾವಿಯ ಹಿರಿಯ ಲೇಖಕ ಡಾ. ರಾಮಕೃಷ್ಣ ಮರಾಠೆ ಸಮಾರಂಭವನ್ನು ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಎ.ಕೆ. ರಾಮೇಶ್ವರ ಅವರು ರಚಿಸಿರುವ ಮಕ್ಕಳ ಪದ್ಯಗಳ ಗೀತ ಗಾಯನ ಕಾರ್ಯಕ್ರಮವೂ ನಡೆಯಲಿದೆ.
ಇದೇ ಸಂದರ್ಭದಲ್ಲಿ ಮಕ್ಕಳ ಸಾಹಿತ್ಯ ಲೋಕದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗುರುಶಾಂತಯ್ಯ ಭಂಟನೂರು ಅವರಿಗೆ ‘ಶ್ರೀ ಎ.ಕೆ. ರಾಮೇಶ್ವರ ಮಕ್ಕಳ ಸಾಹಿತ್ಯ ನಂದಿಕೋಲು ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ಪ್ರಶಸ್ತಿಯು ₹5,000 ನಗದು ಪುರಸ್ಕಾರ ಹಾಗೂ ಸನ್ಮಾನವನ್ನು ಒಳಗೊಂಡಿರುತ್ತದೆ.
ಇನ್ನೋರ್ವ ಹಿರಿಯ ಮಕ್ಕಳ ಕವಿ ಸಿಂದಗಿಯ ಹ.ಮ. ಪೂಜಾರ ಅವರಿಗೆ ‘ಶ್ರೀ ಎ.ಕೆ. ರಾಮೇಶ್ವರ ಸಾಹಿತ್ಯ ಗೌರವ ಪುರಸ್ಕಾರ’ ನೀಡಿ ಗೌರವಿಸಲಾಗುವುದು.
ಪ್ರತಿಷ್ಠಾನದ ಪದಾಧಿಕಾರಿಗಳಾದ ಡಾ. ಶಿಲ್ಪಾ ಭಂಡಾರಿ, ಸಂಕೇತ್, ಬಿ.ಎಸ್. ದೇಸಾಯಿ, ಸಿದ್ದಪ್ಪ ತಳ್ಳಳ್ಳಿ, ಶಾಂತಾ ಪಸ್ತಾಪೂರ, ಡಾ. ಲಕ್ಷ್ಮೀ ಶಂಕರ್ ಜೋಶಿ, ಡಾ. ಶೈಲಜಾ ಬಾಗೇವಾಡಿ, ಸಿ.ಎಸ್. ಮಾಲಿಪಾಟೀಲ, ಪರ್ವಿನ್ ಸುಲ್ತಾನ್, ಅಪ್ಪಾಸಾಹೇಬ ತೀರ್ಥ, ಕಿರಣ್ ಪಾಟೀಲ, ವೀರೇಶ ಕಂದಗಲ್, ಬಸವರಾಜ ಐನೋಳಿ, ರೇಣುಕಾ ಡಾಂಗೆ ಹಾಗೂ ಚೈತನ್ಯ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪ್ರಶಸ್ತಿಗೆ ಇಬ್ಬರು ಸಾಹಿತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಮಹಿಪಾಲರೆಡ್ಡಿ ಮುನ್ನೂರು ತಿಳಿಸಿದ್ದಾರೆ.



