ಬೋಧಕೇತರ ಸಿಬ್ಬಂದಿಗೂ ಯುಜಿಸಿ ವೇತನ ಶ್ರೇಣಿ ನೀಡಿ: ವೀರಭದ್ರಪ್ಪ ಉಪ್ಪಿನ್

ಬೀದರ್, ಸೆ.12: ದೇಶದ ವಿಶ್ವವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕೇತರ ಸಿಬ್ಬಂದಿಗೂ ಕೂಡಲೇ ಯುಜಿಸಿ ವೇತನ ಶ್ರೇಣಿ ಮಂಜೂರು ಮಾಡಬೇಕು ಎಂದು ಅಖಿಲ ಭಾರತ ವಿಶ್ವವಿದ್ಯಾಲಯಗಳ ನೌಕರರ ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯ ವೀರಭದ್ರಪ್ಪ ಉಪ್ಪಿನ್ ಸರ್ಕಾರವನ್ನು ಒತ್ತಾಯಿಸಿದರು.
ಹೈದರಾಬಾದ್ನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಅಖಿಲ ಭಾರತ ವಿಶ್ವವಿದ್ಯಾಲಯಗಳ ನೌಕರರ ಒಕ್ಕೂಟದ ವತಿಯಿಂದ ಆಯೋಜಿಸಿದ್ದ 15ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸರ್ಕಾರದ ವಿವಿಧ ಯೋಜನೆಗಳು ಹಾಗೂ ಉನ್ನತ ಶಿಕ್ಷಣ ಕ್ಷೇತ್ರದ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನದಲ್ಲಿ ವಿಶ್ವವಿದ್ಯಾಲಯಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದರು.
ಬೋಧಕ ಸಿಬ್ಬಂದಿಗೆ ಯುಜಿಸಿ ವೇತನ ಶ್ರೇಣಿ ನೀಡಲಾಗುತ್ತಿದ್ದರೂ, ಅದೇ ವಿಶ್ವವಿದ್ಯಾಲಯಗಳಲ್ಲಿ ಸಮಾನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿರುವ ಬೋಧಕೇತರ ಸಿಬ್ಬಂದಿಗೆ ರಾಜ್ಯ ಸರ್ಕಾರದ ವೇತನ ಶ್ರೇಣಿ ನೀಡುತ್ತಿರುವುದು ತಾರತಮ್ಯದ ನೀತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಶ್ವವಿದ್ಯಾಲಯಗಳ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಚಟುವಟಿಕೆಗಳ ಯಶಸ್ಸಿಗೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸಮಾನವಾಗಿ ಶ್ರಮಿಸುತ್ತಿದ್ದಾರೆ. ಹೀಗಿರುವಾಗ ಬೋಧಕೇತರ ಸಿಬ್ಬಂದಿಗೆ ಕಡಿಮೆ ವೇತನ ನೀಡುವುದು ತಾರತಮ್ಯಕ್ಕೆ ಕಾರಣವಾಗುತ್ತಿದೆ ಎಂದು ಅವರು ಟೀಕಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ವೇತನ ತಾರತಮ್ಯವನ್ನು ನಿವಾರಿಸಿ, ದೇಶದ ಎಲ್ಲ ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗೂ ಯುಜಿಸಿ ವೇತನ ಶ್ರೇಣಿ ವಿಸ್ತರಿಸಬೇಕು. ಈ ಕುರಿತು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಸಮ್ಮೇಳನದ ಅಧ್ಯಕ್ಷತೆಯನ್ನು ಬಿ.ಎಸ್. ಹೋತಾ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಅಂಜನ್ ಘೋಷ್ ಸಭೆಯನ್ನು ನಿರ್ವಹಿಸಿದರು. ಕಾರ್ಯಾಧ್ಯಕ್ಷ ಎಂ.ಬಿ. ಹೋತಾ, ಜಂಟಿ ಕಾರ್ಯದರ್ಶಿ ರಾಘವೇಂದ್ರ ಸಿಂಗ್, ರಮೇಶ್ವರ, ಬಿರಾಂಚಿ ರಾಯ್ ಹಾಗೂ ಬುದ್ಧಸೇನ ಪಟೇಲ್ ಸೇರಿದಂತೆ ವಿವಿಧ ರಾಜ್ಯಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ನೌಕರರ ಒಕ್ಕೂಟದ ಪ್ರತಿನಿಧಿಗಳು ಹಾಗೂ ನೂರಾರು ಸಿಬ್ಬಂದಿ ಸಮ್ಮೇಳನದಲ್ಲಿ ಭಾಗವಹಿಸಿದ್ದರು.



