ಜಿಲ್ಲಾಸುದ್ದಿ

384 ಕೆಎಎಸ್ ಪರೀಕ್ಷಾ ಅಕ್ರಮ: ಶಾಂತಾ ಹೊಸಮನಿ ಕಿಂಗ್‌ಪಿನ್? ಬಂಧನಕ್ಕೆ ಸಿಐಡಿ ತೀವ್ರ ಶೋಧ

ಕಲಬುರಗಿ, ಸೆ.12- ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶುವೈದ್ಯಾಧಿಕಾರಿ ಅಕ್ರಮ ನೇಮಕಾತಿ ಪ್ರಕರಣದ ಬೆನ್ನಲ್ಲೇ 2023–24ನೇ ಸಾಲಿನ 384 ಕೆಎಎಸ್ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಪ್ರಕರಣದಲ್ಲಿ ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ ಅವರ ಪಾತ್ರದ ಕುರಿತು ಸಿಐಡಿ ತನಿಖೆ ತೀವ್ರಗೊಂಡಿದೆ.

ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮದ ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿ 2023–24ನೇ ಸಾಲಿನ 384 ಕೆಎಎಸ್ ಪರೀಕ್ಷೆಗಳಲ್ಲಿ ಡೀಲ್ ನಡೆದಿದೆ ಎಂಬ ದೂರು ದಾಖಲಾಗಿದ್ದು, ಬೆಂಗಳೂರಿನಲ್ಲಿ ದೂರು ದಾಖಲಾದ ಬೆನ್ನಲ್ಲೇ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ಕೆಎಎಸ್ ನೇಮಕಾತಿಯ ಅಂತಿಮ ಪಟ್ಟಿಗಾಗಿ ಕಾಯುತ್ತಿದ್ದ ಕಲಬುರಗಿ ಮೂಲದ ಮಮತಾ ಮನೆ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿ, ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಈ ವೇಳೆ ಕೆಎಎಸ್ ಪರೀಕ್ಷಾ ಅಕ್ರಮದ ಕುರಿತು ಮಹತ್ವದ ಸುಳಿವುಗಳು ಲಭ್ಯವಾಗಿವೆ ಎನ್ನಲಾಗಿದೆ.

ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ ಅವರು ಅಭ್ಯರ್ಥಿಗಳೊಂದಿಗೆ ಡೀಲ್ ಮಾಡಿಕೊಂಡಿದ್ದು, ಪ್ರತಿ ಹುದ್ದೆಗೆ ಒಂದೂವರೆ ಕೋಟಿಯಿಂದ ಎರಡು ಕೋಟಿವರೆಗೆ ಹಣ ಪಡೆದಿರುವ ಬಗ್ಗೆ ಸಿಐಡಿ ತಂಡಕ್ಕೆ ಮಹತ್ವದ ದಾಖಲೆಗಳು ಲಭ್ಯವಾಗಿವೆ ಎಂದು ಆರೋಪಿಸಲಾಗಿದೆ.

384 ಕೆಎಎಸ್ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಶಾಂತಾ ಹೊಸಮನಿ ಕಿಂಗ್‌ಪಿನ್ ಆಗಿರುವ ಶಂಕೆಯ ಹಿನ್ನೆಲೆಯಲ್ಲಿ ಅವರ ಬಂಧನಕ್ಕಾಗಿ ಸಿಐಡಿ ಅಧಿಕಾರಿಗಳು ಕಲಬುರಗಿ, ಬೆಂಗಳೂರು ಸೇರಿದಂತೆ ವಿವಿಧೆಡೆ ತೀವ್ರ ಶೋಧ ನಡೆಸುತ್ತಿದ್ದಾರೆ. ಬಂಧನದ ಬಳಿಕ ಕೆಎಎಸ್ ಅಕ್ರಮ ನೇಮಕಾತಿಯಲ್ಲಿ ಅಭ್ಯರ್ಥಿಗಳ ಮಾಹಿತಿ, ಹಣಕಾಸಿನ ವ್ಯವಹಾರ ಹಾಗೂ ಪರೀಕ್ಷಾ ಅಕ್ರಮದ ಸಂಪೂರ್ಣ ಜಾಲದ ಕುರಿತು ಹೆಚ್ಚಿನ ಮಾಹಿತಿ ಹೊರಬರುವ ಸಾಧ್ಯತೆ ಇದೆ.

ಶಾಂತಾ ಹೊಸಮನಿ ಮೂಲಕ ಕಲಬುರಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳ ಸುಮಾರು ಹತ್ತು ಅಭ್ಯರ್ಥಿಗಳು ಕೆಎಎಸ್ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಮಾಹಿತಿಯೂ ಸಿಐಡಿ ಅಧಿಕಾರಿಗಳ ಕೈ ಸೇರಿದೆ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಆ ಅಭ್ಯರ್ಥಿಗಳ ಮನೆಗಳ ಮೇಲೂ ದಾಳಿ ನಡೆಯುವ ಸಾಧ್ಯತೆ ಇದೆ.

ಒಟ್ಟಾರೆ, ಕೆಪಿಎಸ್‌ಸಿ ನೇಮಕಾತಿಗೆ ಸಂಬಂಧಿಸಿದ ಅಕ್ರಮಗಳ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿದ್ದು, ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮದ ಬೆನ್ನಲ್ಲೇ 384 ಕೆಎಎಸ್ ಪರೀಕ್ಷಾ ಅಕ್ರಮದ ಆರೋಪವೂ ತನಿಖೆಯ ವ್ಯಾಪ್ತಿಗೆ ಬಂದಿದೆ. ಪ್ರಕರಣದ ತನಿಖೆ ಮುಂದುವರಿದಂತೆ ಇನ್ನಷ್ಟು ಮಹತ್ವದ ಮಾಹಿತಿ ಹೊರಬರುವ ಸಾಧ್ಯತೆ ಇದೆ.

Related Articles

Leave a Reply

Your email address will not be published. Required fields are marked *

Back to top button