ಜಿಲ್ಲಾಸುದ್ದಿ

ಹಿಂದುಳಿದ ವರ್ಗಗಳ ಸಮಾವೇಶವನ್ನು ಅಹಿಂದ್ ಸಮಾವೇಶವೆಂದು ಪಟ್ಟಭದ್ರರಿಂದ ಅಪಪ್ರಚಾರ: ಕೌಲಗಿ ಆರೋಪ

ಕಲಬುರ್ಗಿ, ಸೆ.೧೦- ಬೆಂಗಳೂರಿನಲ್ಲಿ ಜರುಗಿದ ಹಿಂದುಳಿದ ವರ್ಗದ ಅಭೂತಪೂರ್ವ ಕಾರ್ಯಕ್ರಮ ಸಹಿಸಲಾಗದೇ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅಹಿಂದ್ ಸಮಾವೇಶವೆಂದು ಬಿಂಬಿಸಿ ಅಹಿಂದ್ ನಾಯಕರ ಮನಸ್ಸು ಒಡೆಯುವ ಹುನ್ನಾರ ಮಾಡಿದ್ದು ಖಂಡನಾರ್ಹ ಎಂದು ಕರ್ನಾಟಕ ರಾಜ್ಯ ಹಿಂದುಳಿದ ಒಕ್ಕೂಟದ ಜಿಲ್ಲಾಧ್ಯಕ್ಷ ಹಾಗೂ ನ್ಯಾಯವಾದಿ ಮಹಾಂತೇಶ್ ಎಸ್. ಕೌಲಗಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಅಹಿಂದಾ ಸಮಾವೇಶವಲ್ಲ. ಇದು ಪಕ್ಕಾ ಹಿಂದುಳಿದ ಜಾತಿಗಳ ಒಕ್ಕೂಟ ಕಾರ್ಯಕ್ರಮ. ಕಾರ್ಯಕ್ರಮಕ್ಕೆ ಕೇವಲ ಹಿಂದುಳಿದ ವರ್ಗದವರನ್ನು ಮಾತ್ರ ಆಹ್ವಾನಿಸಲಾಗಿತ್ತು. ಸರ್ಕಾರದ ಪರವಾಗಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರಿಗೆ ಮಾತ್ರ ಆಹ್ವಾನಿಸಲಾಗಿತ್ತು.

ಹೀಗಿದ್ದರೂ ಕೆಲ ಮುಖಂಡರು ಅಹಿಂದಾ ಸಮಾವೇಶವನ್ನು ಅಹಿಂದಾದಲ್ಲಿ ಬರುವ ನಾಯಕರನ್ನು ಬಿಡಲಾಗಿದೆ ಎಂದು ಸುಳ್ಳು ಪ್ರಚಾರ ಮಾಡಿದ್ದಾರೆ. ಕರ್ನಾಟಕ ರಾಜ್ಯದ ಅಹಿಂದಾ ವರ್ಗ ನೇತಾರ ಸಿದ್ಧರಾಮಯ್ಯ, ಡಾ. ಎಚ್.ಸಿ. ಮಹಾದೇವಪ್ಪ, ಸತೀಶ್ ಜಾರಕಿಹೊಳಿ ಅವರ ಮನಸ್ಸುಗಳನ್ನು ಒಡೆಯುವ ಹುನ್ನಾರ ನಡೆಯುತ್ತಿದೆ. ಆದ್ದರಿಂದ ರಾಜ್ಯದ ಅಹಿಂದಾ ವರ್ಗದವರು ಸುಳ್ಳು ಸುದ್ದಿಗಳಿಗೆ ಯಾವದೇ ರೀತಿಯ ಕಿವಿಕೊಡಬಾರದು ಎಂದರು.

ಸಿದ್ಧರಾಮಯ್ಯ ಅವರು ಎರಡು ಬಾರಿ ಮುಖ್ಯಮಂತ್ರಿಗಳಾದರೂ ಏನೂ ಮಾಡಿಲ್ಲ ಎಂಬ ಟೀಕೆಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಬರುವ ದಿನಗಳಲ್ಲಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಎಲ್ಲ ಅಹಿಂದ್ ಮುಖಂಡರುಗಳನ್ನು ಒಳಗೊಂಡು ಸಮಾವೇಶ ಆಗಲಿ, ಹೋರಾಟವನ್ನಾಗಲಿ ಮಾಡಲಾಗುವುದು. ಹಾಗಾಗಿ ಯಾರೂ ಸಹ ಸುಳ್ಳು ಸುದ್ದಿಗಳಿಗೆ ಹಾಗೂ ಹೇಳಿಕೆಗಳಿಗೆ ಕಿವಿಗೊಡಬಾರದು ಎಂದು ಅವರು ಮನವಿ ಮಾಡಿದರು.

ಸಿದ್ಧರಾಮಯ್ಯ ಅವರು ಮುಖ್ಯಮಂರ‍್ರಿಗಳಾಗಿ ಕಾಂತರಾಜ್ ಅವರ ನೇತೃತ್ವದಲ್ಲಿ. ಹಿಂದುಳಿದ ವರ್ಗಗಳ ಆಯೋಗ ರಚಿಸಿದರು. ವರದಿ ಹಳೆಯದು ಎಂದು ನಿರಾಕರಿಸಿದಾಗ ನ್ಯಾಯವಾದಿ ಮಧುಸೂಧನ್ ನಾಯಕ್ ಅವರ ಆಯೊಗದ ಮೂಲಕ ಮತ್ತೆ ಸಮೀಕ್ಷೆ ಮಾಡಿ ಮತ್ತೊಮ್ಮೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಆ ವರದಿ ಜಾರಿಗೆ ಭರವಸೆಯನ್ನೂ ನೀಡಲಾಗಿದೆ. ಆ ಹಿನ್ನೆಲೆಯಲ್ಲಿ ಹಿಂದುಳಿದ ಜಾತಿಗಳ ಒಕ್ಕೂಟವು ಸ್ಥಾಪನೆಯಾಗಿ ೨೫ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಒಕ್ಕೂಟದ ರಜತಮಹೋತ್ಸವ ಏರ್ಪಡಿಸಲಾಗಿತ್ತು ಎಂದು ಅವರು ಹೇಳಿದರು.

ಸುದ್ದಿಗೋಷ್‌ಠಿಯಲ್ಲಿ ವಿನೋದಕುಮಾರ್ ಜನೇವರಿ, ಹಣಮಯ್ಯ ಆಲೂರ್, ವೆಂಕಟೇಶ್ ನೀರಡಗಿ, ವಿಠಲ್ ಮಡಿವಾಳ್, ಶಂಕರ್ ಕಾಳನುರ್, ಮಲ್ಲೇಶಿ ಯಾದವ್, ಸಾಯಬಣ್ಣ ಹೆಳವರ್, ಚಂದು ಪವಾರ್, ಅರುಣಕುಮಾರ್ ಕಟಬು, ನಿಂಗಪ್ಪ ಸಾಗನೂರ್, ಶರಣು ಸೂರ್ಯವಂಶಿ, ಬಸವರಾಜ್ ನಾಗನ್ ಮುಂತಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button