ಸತೀಶ್ ಜಾರಕಿಹೊಳಿ ಮೇಲೆ ಇಡಿ ದಾಳಿ ಖಂಡಿಸಿ ಪ್ರತಿಭಟನೆ

ಕಲಬುರ್ಗಿ, ಸೆ.೧೦- ರಾಜ್ಯದ ಲೋಕೋಪಯೋಗಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಅವರ ಕುಟುಂಬಸ್ಥರ ಮೇಲೆ ಇಡಿ ದಾಳಿ ಮಾಡಿರುವುದನ್ನು ಖಂಡಿಸಿ ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ವಾಲ್ಮಿಕಿ ನಾಯಕರ ಸಂಘದ ಕಾರ್ಯಕರ್ತರು ಪ್ರತಿಭಟನಾ ಪ್ರದರ್ಶನ ಮಾಡಿದರು.
ಸಂಘದ ಅಧ್ಯಕ್ಷ ಹಾಗೂ ಮಾಜಿ ಉಪಮೇಯರ್ ನಂದಕುಮಾರ್ ಮಾಲಿಪಾಟೀಲ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸುನೀಲ್ ಮಾನ್ಪಡೆ, ದಿನೇಶ್ ದೊಡ್ಡಮನಿ, ಪ್ರಶಾಂತ್ ಪಾಟೀಲ್ ನಂದಿಕೂರ್, ಭೀಮಾಶಂಕರ್ ನಾಗನಹಳ್ಳಿ, ಲಕ್ಕಪ್ಪ ಪೂಜಾರಿ, ಪ್ರದೀಪ್ ಚಿಂಚನಸೂರ್, ಮಲ್ಲಿಕಾರ್ಜುನ್ ಇಟಗಿ, ಬಸವರಾಜ್ ಜಮಾದಾರ್ ಮುಂತಾದವರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ನಂದಕುಮಾರ್ ಮಾಲಿಪಾಟೀಲ್ ಅವರು ಮಾತನಾಡಿ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ(ಇ.ಡಿ) ನಡೆಸಿರುವ ದಾಳಿಯು ಅಹಿಂದ ನಾಯಕರನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. ಜಾರಕಿಹೋಳಿ ಅವರು ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ದಲಿತರ ಪರ ಧ್ವನಿ ಎತ್ತುತ್ತಾ ಬಂದಿದ್ದಾರೆ. ರಾಜ್ಯದ ಪ್ರಭಾವಿ ನಾಯಕರಲ್ಲೊಬ್ಬರಾಗಿ ಹೊರ ಹೊಮ್ಮಿದ್ದಾರೆ. ಅವರ ಬೆಳವಣಿಗೆ ವೇಗಕ್ಕೆ ತಡೆ ಒಡ್ಡುವುದು ದಾಳಿಯ ಹಿಂದಿನ ಉದ್ದೇಶವಾಗಿದೆ ಎಂದು ದೂರಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ಅಧೀನದ ಜಾರಿ ನಿರ್ದೇಶನಾಲಯ, ಸಿಬಿಐ ಹಾಗೂ ಇತರ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.



