ತಂತ್ರಜ್ಞಾನ ಯುಗದಲ್ಲಿ ಭವಿಷ್ಯದ ಸವಾಲುಗಳಿಗೆ ವಿದ್ಯಾರ್ಥಿಗಳು ಸಿದ್ಧರಾಗಲಿ:ಸಂಸದ ರಾಧಾಕೃಷ್ಣ ದೊಡ್ಡಮನಿ

ಕಲಬುರಗಿ, ಸೆ. 10- ಕೃತಕ ಬುದ್ಧಿಮತ್ತೆ (AI), ಡಿಜಿಟಲ್ ಹಾಗೂ ಜೈವಿಕ ತಂತ್ರಜ್ಞಾನದ ಈ ವೇಗದ ಯುಗದಲ್ಲಿ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳನ್ನು ಕೇವಲ ಇಂದಿನ ಉದ್ಯೋಗಕ್ಕಷ್ಟೇ ಅಲ್ಲದೆ, ನಾಳೆಯ ಸವಾಲುಗಳು ಹಾಗೂ ಅವಕಾಶಗಳನ್ನು ಎದುರಿಸಲು ಸಿದ್ಧಗೊಳಿಸಬೇಕು ಎಂದು ಲೋಕಸಭಾ ಕ್ಷೇತ್ರ ಸಂಸದ ರಾಧಾಕೃಷ್ಣ ದೊಡ್ಡಮನಿ ಹೇಳಿದರು.
ಗುರುವಾರ ನಗರದ ಗುಲಬರ್ಗ ವಿಶ್ವವಿದ್ಯಾಲಯದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿರುವ ಗುಲಬರ್ಗಾ ವಿಶ್ವವಿದ್ಯಾಲಯದ 47ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಇಂದು ನಮ್ಮ ಮುಂದಿರುವ ಪ್ರಶ್ನೆ ವಿಶ್ವವಿದ್ಯಾಲಯ ಗತಕಾಲದಲ್ಲಿ ಎಷ್ಟು ದೂರ ಬಂದಿದೆ ಎಂದಲ್ಲ, ಬದಲಾಗಿ ಆಧುನಿಕ ಜಗತ್ತಿಗೆ ತಕ್ಕಂತೆ ಇಲ್ಲಿಂದ ಮುಂದೆ ಎಷ್ಟು ದೂರ ಸಾಗಬಲ್ಲದು ಎಂಬುದು ಮುಖ್ಯ ಎಂದರು.
1970ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರವಾಗಿ ಆರಂಭಗೊಂಡ ಈ ಸಂಸ್ಥೆಯು, 1980ರಲ್ಲಿ ಪೂರ್ಣ ಪ್ರಮಾಣದ ವಿಶ್ವವಿದ್ಯಾಲಯವಾಗಿ ಬೆಳೆದು ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ವಿಕಾಸಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ. ವಿಶ್ವವಿದ್ಯಾಲಯ 794 ಎಕರೆ ವಿಸ್ತಾರವಾದ ಕ್ಯಾಂಪಸ್ ಹೊಂದಿರುವ ಸಂಸ್ಥೆಯು ಎನ್ಎಸಿಸಿ ನಿಂದ B+ ಗ್ರೇಡ್, ಎನ್ಐಆರ್ಎಫ್ ಶ್ರೇಯಾಂಕ 200+, ಐಸಿಎಆರ್ಇ ನಿಂದ 4-ಸ್ಟಾರ್ ರೇಟಿಂಗ್ ಹಾಗೂ ಕ್ಯೂಎಸ್ ರ್ಯಾಂಕಿಂಗ್ನಲ್ಲಿ 601-650 ಶ್ರೇಣಿ ಸಾಧಿಸಿರುವುದನ್ನು ಶ್ಲಾಘಿಸಿದರು.
ವಿದ್ಯಾರ್ಥಿಗಳು ಸಂಸ್ಥೆಯ ಭಾವಿ ರಾಯಭಾರಿಗಳು. ನೀವು ಪಡೆಯುವ ಹುದ್ದೆಗಿಂತಲೂ ಸಮಾಜದಲ್ಲಿ ತರುವ ಧನಾತ್ಮಕ ಬದಲಾವಣೆಯೇ ನಿಮ್ಮ ನೈಜ ಯಶಸ್ಸು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಇದೇ ಸಂದರ್ಭದಲ್ಲಿ ಗುಲಬರ್ಗಾ ವಿವಿಯ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ನಿವೃತ್ತ ನೌಕರರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಶಶಿಕಾಂತ ಎಸ್. ಉಡಿಕೇರಿ ಅವರು ಮಾತನಾಡಿ, ವಿಶ್ವವಿದ್ಯಾಲಯದ ವಿಕಾಸಕ್ಕೆ ಶ್ರಮಿಸಿದ ಹಾಲಿ ಹಾಗೂ ನಿವೃತ್ತ ಬೋಧಕ-ಬೋಧಕೇತರ ಸಿಬ್ಬಂದಿಯ ಕೊಡುಗೆ ಅನನ್ಯ. ಸಂಸ್ಥೆಯಲ್ಲಿ ಶೈಕ್ಷಣಿಕ ವಾತಾವರಣ ಸುಧಾರಿಸಲು ನೂತನ ಕೋರ್ಸ್ಗಳು ಹಾಗೂ ಸರ್ಟಿಫಿಕೇಟ್ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದರು.
ಆರ್ಥಿಕ ಶಿಸ್ತು ಕಾಪಾಡಿಕೊಂಡು ವಿಶ್ವವಿದ್ಯಾಲಯವನ್ನು ಅಭಿವೃದ್ಧಿಯತ್ತ ಒಯ್ಯಲಾಗುತ್ತಿದೆ. ರಾಜ್ಯ ಸರ್ಕಾರದ ಹುದ್ದೆಗಳ ನೇಮಕಾತಿಯಲ್ಲಿ ನಮ್ಮ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿ ಪ್ರಥಮ ಸ್ಥಾನ ಗಳಿಸಬೇಕು. ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಸ್ಪರ್ಧಾತ್ಮಕ ಪರೀಕ್ಷೆಗಳು, ಫೆಲೋಶಿಪ್ಗಳು ಮತ್ತು ಜಾಗತಿಕ ಮಟ್ಟದ ಸಮ್ಮೇಳನಗಳಲ್ಲಿ ಯಶಸ್ಸು ಸಾಧಿಸಬೇಕು. ಹಾಗೆಯೇ ನಮ್ಮ ಪ್ರಾಧ್ಯಾಪಕರಿಗೆ ರಾಜ್ಯ-ರಾಷ್ಟ್ರ ಮಟ್ಟದ ಉನ್ನತ ಹುದ್ದೆಗಳಲ್ಲಿ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕು ಎಂದು ಆಶಿಸಿದರು.
ಗುಲಬರ್ಗಾ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಉದಯಕುಮಾರ ಪಾಟೀಲ, ಗುಲಬರ್ಗಾ ವಿ.ವಿ ವಿದ್ಯಾವಿಷಯಕ ಪರಿಷತ್ ಸದಸ್ಯ ಪ್ರೊ. ಹೂವಿನಾಭಾವಿ ಬಾಬಣ್ಣ, ಗುಲಬರ್ಗಾ ವಿಶ್ವವಿದ್ಯಾಲಯ ಕುಲಸಚಿವ ಪ್ರೊ. ರಮೇಶ ಲಂಡನಕರ್, (ಮೌಲ್ಯಮಾಪನ) ಕುಲಸಚಿವೆ ಪ್ರೊ. ಅಶ್ವಿನಿ, ವಿತಾಧಿಕಾರಿ ಜಯಾಂಬಿಕ ಉಪಸ್ಥಿತರಿದ್ದರು.



