ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ಗೆ ತೆರೆ; ರಾಷ್ಟ್ರೀಯ ಮಟ್ಟಕ್ಕೆ 45 ತಂಡಗಳ ಆಯ್ಕೆ

ಕಲಬುರಗಿ, ಸೆ.9: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ನಿಕಾಯದ ವತಿಯಿಂದ ಆಯೋಜಿಸಿದ್ದ ವಿಶ್ವವಿದ್ಯಾಲಯ ಮಟ್ಟದ ಆಂತರಿಕ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್–2026 ಯಶಸ್ವಿಯಾಗಿ ಮುಕ್ತಾಯಗೊಂಡಿತು.
ವಿಶ್ವವಿದ್ಯಾಲಯದ ಆಂತರಿಕ ಹ್ಯಾಕಥಾನ್‌ನಲ್ಲಿ ಒಟ್ಟು 55 ತಂಡಗಳು ನೋಂದಾಯಿಸಿಕೊಂಡಿದ್ದವು. ಕಂಪ್ಯೂಟರ್ ವಿಜ್ಞಾನ, ಎಂಸಿಎ, ಗಣಿತ ಮತ್ತು ಕಂಪ್ಯೂಟಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್, ಸ್ಟ್ಯಾಟಿಸ್ಟಿಕ್ಸ್ ಹಾಗೂ ಡೇಟಾ ಅನಾಲಿಟಿಕ್ಸ್ ವಿಭಾಗಗಳ ಸುಮಾರು 246 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿವಿಧ ಸಮಸ್ಯೆಗಳ ಪರಿಹಾರ ಹಾಗೂ ವಿಷಯಾಧಾರಿತ ಮೌಲ್ಯಮಾಪನದ ಬಳಿಕ ರಾಷ್ಟ್ರೀಯ ಮಟ್ಟದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್–2026ಕ್ಕೆ 45 ತಂಡಗಳನ್ನು ಅಂತಿಮವಾಗಿ ನಾಮನಿರ್ದೇಶನ ಮಾಡಲಾಯಿತು.
ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ, ನಾವೀನ್ಯತಾ ಕೋಶ ಹಾಗೂ ಎಐಸಿಟಿಇ ಬೆಂಬಲದೊಂದಿಗೆ ನಡೆಯುವ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್, ದೇಶ ಎದುರಿಸುತ್ತಿರುವ ವಿವಿಧ ಸವಾಲುಗಳಿಗೆ ನವೀನ ಹಾಗೂ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ರೂಪಿಸಲು ವಿದ್ಯಾರ್ಥಿಗಳಿಗೆ ವೇದಿಕೆ ಒದಗಿಸುತ್ತದೆ.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ್, ಕಠಿಣ ಪರಿಶ್ರಮ, ಆತ್ಮವಿಶ್ವಾಸ, ಸಕಾರಾತ್ಮಕ ಚಿಂತನೆ, ಹೋಲಿಕೆಗಳಿಂದ ದೂರವಿರುವುದು ಹಾಗೂ ಸ್ವಯಂಶಿಸ್ತು ಯಶಸ್ಸಿನ ಪ್ರಮುಖ ಅಂಶಗಳು ಎಂದರು.
ಯಶಸ್ಸಿಗೆ ಯಾವುದೇ ಶಾರ್ಟ್‌ಕಟ್‌ಗಳಿಲ್ಲ. ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿರುವ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ವೈಫಲ್ಯಗಳಿಂದ ಪಾಠ ಕಲಿತು ಗುರಿಯತ್ತ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದರು.
‘ಯುವ ಶಕ್ತಿಯನ್ನು ನಾವೀನ್ಯತೆಯ ಶಕ್ತಿಯಾಗಿ ಪರಿವರ್ತಿಸಬೇಕು’ ಎಂದು ಕರೆ ನೀಡಿದ ಅವರು, ಯುವಜನರ ನಾಯಕತ್ವ, ನಾವೀನ್ಯತೆ ಹಾಗೂ ಉದ್ಯಮಶೀಲತೆಯನ್ನು ಉತ್ತೇಜಿಸುವ ಮೂಲಕ 2047ರ ಅಭಿವೃದ್ಧಿ ಹೊಂದಿದ ಭಾರತದ ಗುರಿ ಸಾಧನೆಗೆ ವಿದ್ಯಾರ್ಥಿಗಳು ಪ್ರಮುಖ ಕೊಡುಗೆ ನೀಡಬೇಕು ಎಂದರು.
ಆಯ್ಕೆಯಾದ ತಂಡಗಳು ಸೆ.22 ಮತ್ತು 23ರಂದು ಹೈದರಾಬಾದ್‌ನಲ್ಲಿ IEEE IES ಸೊಸೈಟಿ ಆಯೋಜಿಸುವ ಇಂಡಸ್ಟ್ರಿ–ಇನೋವೇಶನ್ ಕಾನ್ಕ್ಲೇವ್–2026ರಲ್ಲಿ ನಡೆಯುವ ಮುಂದಿನ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ನಾವೀನ್ಯತಾ ಕೋಶದ ನೋಡಲ್ ಅಧಿಕಾರಿ ಡಾ. ರೋಹಿತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ತಂಡಗಳು ಸ್ಪರ್ಧೆಗೆ ಸಿದ್ಧತೆ ನಡೆಸಲಿವೆ.
ಆಂತರಿಕ ಹಾಗೂ ಬಾಹ್ಯ ತೀರ್ಪುಗಾರರು ವಿದ್ಯಾರ್ಥಿಗಳ ನವೀನ ಆಲೋಚನೆಗಳು ಮತ್ತು ಯೋಜನೆಗಳನ್ನು ಮೌಲ್ಯಮಾಪನ ಮಾಡಿದರು. ಉತ್ತಮ ಪ್ರಯತ್ನ ಪ್ರದರ್ಶಿಸಿದ ವಿದ್ಯಾರ್ಥಿಗಳು ಹಾಗೂ ತಂಡಗಳನ್ನು ಅಭಿನಂದಿಸಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಬಾಹ್ಯ ತೀರ್ಪುಗಾರರಾಗಿ ಡಾ. ರಾಧಿಕಿಶೋರ್ ಪಾಂಡುರಂಗಿ, ಸಾಯಿ ವಿಷ್ಣು ವಿಪ್ಪಗುಂಟ, ಡೇಟಾ ಸೈನ್ಸ್ ಎಂಜಿನಿಯರ್ ಅಂಶುಮಾನ್ ದೀಕ್ಷಿತ್ ಹಾಗೂ ಶ್ರೀಕಾಂತ್ ಕಸಾನಿ ಭಾಗವಹಿಸಿದ್ದರು.
ಕಂಪ್ಯೂಟರ್ ವಿಜ್ಞಾನ ನಿಕಾಯದ ಡೀನ್ ಪ್ರೊ. ಆರ್.ಎಸ್. ಹೆಗಡೆ, ಹ್ಯಾಕಥಾನ್ ನೋಡಲ್ ಅಧಿಕಾರಿ ಡಾ. ರೋಹಿತ್ ಕುಮಾರ್ ಸೇರಿದಂತೆ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಎಸ್‌ಎಚ್ ಸದಸ್ಯರು, ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



