ಇಟಲಿ ಸಾಂಸ್ಕೃತಿಕ ಕಾರ್ಯಾಗಾರಕ್ಕೆ ಕಲಬುರಗಿ ಕಲಾವಿದ ಅಯಾಜುದ್ದೀನ್ ಪಟೇಲ್

ಕಲಬುರಗಿ, ಸೆ. 5: ಅಂತರರಾಷ್ಟ್ರೀಯ ಖ್ಯಾತಿಯ ಕಲಾವಿದ ಹಾಗೂ ಛಾಯಾಗ್ರಾಹಕ ಮೊಹಮ್ಮದ್ ಅಯಾಜುದ್ದೀನ್ ಪಟೇಲ್ ಅವರನ್ನು ಇಟಲಿಯ ವೆನಿಸ್‌ನಲ್ಲಿ ಸೆ.17ರಿಂದ 20ರವರೆಗೆ ನಡೆಯಲಿರುವ ಅಂತರರಾಷ್ಟ್ರೀಯ ಸಹಯೋಗದ ಕಲಾ ಪ್ರದರ್ಶನ ಹಾಗೂ ಶಿಲ್ಪಕಲಾ ಕಾರ್ಯಾಗಾರದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ.
ಎಸ್‌ಎಂಡಿ ಫೌಂಡೇಷನ್ ಹಾಗೂ ಎಚ್‌ಯು ವೆನಿಜಿಯಾ ಸಹಯೋಗದಲ್ಲಿ ವೆನಿಸ್‌ನ ಎಚ್‌ಯು ವೆನಿಜಿಯಾ ಕ್ಯಾಂಪಿಂಗ್ ಇನ್ ಟೌನ್‌ನಲ್ಲಿ ‘ಆರ್ಟ್ ಬಿಯಾಂಡ್ ಬಾರ್ಡರ್ಸ್: ಭಾರತ ಮತ್ತು ಇಟಲಿ ನಡುವಿನ ಸೃಜನಶೀಲ ಸಂವಾದ’ ಎಂಬ ವಿಷಯದ ಕುರಿತು ಮೂರು ದಿನಗಳ ಕಾರ್ಯಾಗಾರ ಆಯೋಜಿಸಲಾಗಿದೆ.
ಈ ಕಾರ್ಯಕ್ರಮವು ಕರ್ನಾಟಕ, ಅಸ್ಸಾಂ, ಕೊಲ್ಕತ್ತಾ, ಮುಂಬೈ, ದೆಹಲಿ, ಮಧ್ಯಪ್ರದೇಶ ಹಾಗೂ ಬರೋಡಾ ಸೇರಿದಂತೆ ದೇಶದ ವಿವಿಧ ಭಾಗಗಳ 11 ಪ್ರಮುಖ ಕಲಾವಿದರು ಮತ್ತು ಯುರೋಪಿನ ಪ್ರಮುಖ ಕಲಾವಿದರನ್ನು ಒಂದೇ ವೇದಿಕೆಗೆ ತರಲಿದೆ. ಭಾಗವಹಿಸುವ ಕಲಾವಿದರಲ್ಲಿ ಕಲಬುರಗಿಯ ಅಯಾಜುದ್ದೀನ್ ಪಟೇಲ್ ಕೂಡ ಒಬ್ಬರಾಗಿದ್ದಾರೆ.
ಭಾರತೀಯ ಮತ್ತು ಯುರೋಪಿಯನ್ ಕಲಾ ಸಮುದಾಯಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವುದು, ವಿಭಿನ್ನ ಕಲಾತ್ಮಕ ದೃಷ್ಟಿಕೋನಗಳನ್ನು ಅನ್ವೇಷಿಸುವುದು ಹಾಗೂ ಸೃಜನಶೀಲ ಸಂವಾದಕ್ಕೆ ವೇದಿಕೆ ಕಲ್ಪಿಸುವುದು ಕಾರ್ಯಾಗಾರದ ಉದ್ದೇಶವಾಗಿದೆ. ಸಹಯೋಗದ ಸಭೆಗಳು, ಮುಕ್ತ ಚರ್ಚೆಗಳು ಮತ್ತು ಕಲಾ ವಿನಿಮಯದ ಮೂಲಕ ಹೊಸ ಸಾಂಸ್ಕೃತಿಕ ಸಂಬಂಧಗಳನ್ನು ಬೆಳೆಸಲು ಕಾರ್ಯಕ್ರಮ ರೂಪಿಸಲಾಗಿದೆ.
ಯುರೋಪಿನ ಕಲಾ ಕೇಂದ್ರಗಳಿಗೆ ಭೇಟಿ
ವೆನಿಸ್‌ನಲ್ಲಿ ನಡೆಯಲಿರುವ ಮೂರು ದಿನಗಳ ಕಾರ್ಯಾಗಾರದ ಜೊತೆಗೆ ಅಯಾಜುದ್ದೀನ್ ಪಟೇಲ್ ಅವರು ಸೆ.9ರಿಂದ 23ರವರೆಗೆ ಫ್ರಾನ್ಸ್, ಜರ್ಮನಿ, ನೆದರ್‌ಲ್ಯಾಂಡ್ಸ್, ಬೆಲ್ಜಿಯಂ, ಸ್ವಿಟ್ಜರ್‌ಲ್ಯಾಂಡ್ ಹಾಗೂ ಇಟಲಿಯ ಫ್ಲಾರೆನ್ಸ್ ಸೇರಿದಂತೆ ಯುರೋಪಿನ ಪ್ರಮುಖ ಸಾಂಸ್ಕೃತಿಕ ನಗರಗಳಿಗೆ 15 ದಿನಗಳ ಅಧ್ಯಯನ ಪ್ರವಾಸ ಕೈಗೊಳ್ಳಲಿದ್ದಾರೆ.
ಪ್ರವಾಸದ ವೇಳೆ ವಿಶ್ವಪ್ರಸಿದ್ಧ ವಸ್ತುಸಂಗ್ರಹಾಲಯಗಳು, ಐತಿಹಾಸಿಕ ಸ್ಮಾರಕಗಳು ಹಾಗೂ ಕಲಾ ಗ್ಯಾಲರಿಗಳಿಗೆ ಭೇಟಿ ನೀಡಲಿದ್ದಾರೆ. ಲಿಯೊನಾರ್ಡೊ ಡಾ ವಿನ್ಸಿ, ಮೈಕೆಲಾಂಜೆಲೊ, ವಿನ್ಸೆಂಟ್ ವ್ಯಾನ್ ಗಾಗ್, ರೆಂಬ್ರಾಂಟ್ ಹಾಗೂ ಪಿಕಾಸೊ ಅವರಂತಹ ವಿಶ್ವಪ್ರಸಿದ್ಧ ಕಲಾವಿದರ ಕಲಾಕೃತಿಗಳನ್ನು ನೇರವಾಗಿ ವೀಕ್ಷಿಸುವ ಅವಕಾಶ ಅವರಿಗೆ ದೊರೆಯಲಿದೆ.
ಪ್ಯಾರಿಸ್‌ನ ಲೂವ್ರ್ ಮ್ಯೂಸಿಯಂ, ಆಮ್‌ಸ್ಟರ್‌ಡ್ಯಾಮ್‌ನ ವ್ಯಾನ್ ಗಾಗ್ ಮ್ಯೂಸಿಯಂ, ವ್ಯಾಟಿಕನ್ ಸಿಟಿಯ ಸಿಸ್ಟೈನ್ ಚಾಪೆಲ್, ಫ್ಲಾರೆನ್ಸ್‌ನ ಅಕಾಡೆಮಿಯಾ ಗ್ಯಾಲರಿ ಹಾಗೂ ರೋಮ್‌ನ ಕೊಲೊಸಿಯಂ ಸೇರಿದಂತೆ ಪ್ರಮುಖ ಸಾಂಸ್ಕೃತಿಕ ತಾಣಗಳಿಗೆ ಅವರು ಭೇಟಿ ನೀಡಲಿದ್ದಾರೆ.
ದೇಶ-ವಿದೇಶಗಳಲ್ಲಿ ಕಲಾ ಸೇವೆ
ದಖನ್ ರಾಜವಂಶಗಳ ಕಲೆ, ವಾಸ್ತುಶಿಲ್ಪ ಮತ್ತು ಇತಿಹಾಸಕ್ಕೆ ಸಂಬಂಧಿಸಿದ ಸಂಶೋಧನೆ ಹಾಗೂ ಕಲಾ ಕ್ಷೇತ್ರದಲ್ಲಿ ಅಯಾಜುದ್ದೀನ್ ಪಟೇಲ್ ಅವರು ಗಮನಾರ್ಹ ಕೆಲಸ ಮಾಡಿದ್ದಾರೆ. 2014ರಲ್ಲಿ ರಾಷ್ಟ್ರೀಯ ಲಲಿತಕಲಾ ಪ್ರಶಸ್ತಿ, 2016-17ರಲ್ಲಿ ಸಂಸ್ಕೃತಿ ಸಚಿವಾಲಯದ ಸಿಸಿಆರ್‌ಟಿ ರಾಷ್ಟ್ರೀಯ ಫೆಲೋಶಿಪ್ ಹಾಗೂ 2018ರಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ಹಿರಿಯ ಫೆಲೋಶಿಪ್ ಸೇರಿದಂತೆ ಹಲವು ಗೌರವಗಳನ್ನು ಅವರು ಪಡೆದಿದ್ದಾರೆ.
ತಮ್ಮದೇ ಆದ ಕಲಾ ಗ್ಯಾಲರಿ, ವಸ್ತುಸಂಗ್ರಹಾಲಯ ಹಾಗೂ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿರುವ ಅವರು, ಈ ಹಿಂದೆ ಅಮೆರಿಕ, ಲಂಡನ್, ರಷ್ಯಾ, ಟರ್ಕಿ, ಚೀನಾ, ಕೀನ್ಯಾ, ಹಾಂಕಾಂಗ್, ಮಕಾವು, ಈಜಿಪ್ಟ್, ಜೋರ್ಡಾನ್, ಉಜ್ಬೇಕಿಸ್ತಾನ್, ಕಿರ್ಗಿಸ್ತಾನ್, ಶ್ರೀಲಂಕಾ, ಬಾಂಗ್ಲಾದೇಶ, ಭೂತಾನ್ ಸೇರಿದಂತೆ ಹಲವು ದೇಶಗಳಿಗೆ ಭೇಟಿ ನೀಡಿ ಕಲಾ ಮತ್ತು ಸಾಂಸ್ಕೃತಿಕ ಅಧ್ಯಯನ ನಡೆಸಿದ್ದಾರೆ.
ಅಯಾಜುದ್ದೀನ್ ಪಟೇಲ್ ಅವರ ಅಂತರರಾಷ್ಟ್ರೀಯ ಕಲಾ ಪ್ರವಾಸಕ್ಕೆ ಕಲಾವಿದ ಸ್ನೇಹಿತರಾದ ರಾಜಶೇಖರ್ ಶರ್ಮಣ್ಣ, ಟಿ. ದೇವೇಂದ್ರ, ರೆಹಮಾನ್ ಪಟೇಲ್ ಸೇರಿದಂತೆ ಹಲವರು ಶುಭ ಹಾರೈಸಿದ್ದಾರೆ.



