ಜಿಲ್ಲಾಸುದ್ದಿ

ಸಾರ್ವಜನಿಕ ಶಿಕ್ಷಣ ರಕ್ಷಣೆಗೆ ಫುಲೆ ಆದರ್ಶಗಳೇ ಸ್ಫೂರ್ತಿ: ಆರ್.ಕೆ. ವೀರಭದ್ರಪ್ಪ

ಕಲಬುರಗಿ, ಸೆ. 5: ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ರಕ್ಷಣೆಗೆ ಮಹಾತ್ಮ ಜ್ಯೋತಿಬಾ ಫುಲೆ ಅವರ ಆದರ್ಶಗಳೇ ನಮಗೆ ಸ್ಫೂರ್ತಿಯಾಗಬೇಕು ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್‌ (ಎಐಡಿಎಸ್‌ಒ) ರಾಜ್ಯ ಉಪಾಧ್ಯಕ್ಷ ಆರ್.ಕೆ. ವೀರಭದ್ರಪ್ಪ ಹೇಳಿದರು.

ನಗರದ ಜಗತ್ ವೃತ್ತದಲ್ಲಿರುವ ಪತ್ರಿಕಾ ಭವನದಲ್ಲಿ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯ ವತಿಯಿಂದ ಆಯೋಜಿಸಿರುವ ಎರಡು ದಿನಗಳ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯಾನಂತರ ದೇಶವನ್ನು ಆಳಿದ ಸರ್ಕಾರಗಳು ಶಿಕ್ಷಣ ಕ್ಷೇತ್ರದಲ್ಲಿ ನೈತಿಕ ಮೌಲ್ಯಗಳನ್ನು ಕಡೆಗಣಿಸಿವೆ. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿರುವ ಸಾಹಿತ್ಯ, ಕಲೆ, ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳಿಗೆ ಅಗತ್ಯ ಪ್ರೋತ್ಸಾಹ ನೀಡಲಾಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಶಿಕ್ಷಣದಲ್ಲಿ ಅವೈಜ್ಞಾನಿಕ ವಿಚಾರಗಳನ್ನು ಬಿಂಬಿಸುವುದು, ಇತಿಹಾಸವನ್ನು ತಿರುಚುವುದು ಹಾಗೂ ಜಾತೀಯತೆ ಮತ್ತು ಕೋಮುವಾದದ ವಿಷಬೀಜಗಳನ್ನು ಬಿತ್ತುವ ಪ್ರಯತ್ನಗಳು ನಡೆಯುತ್ತಿವೆ. ಇದರಿಂದ ಯುವಜನತೆ ದಾರಿ ತಪ್ಪುವ ಅಪಾಯವಿದೆ ಎಂದು ವೀರಭದ್ರಪ್ಪ ಆತಂಕ ವ್ಯಕ್ತಪಡಿಸಿದರು.

ಕಾರ್ಪೊರೇಟ್ ಉದ್ಯಮಿಗಳ ಕೋಟ್ಯಂತರ ರೂಪಾಯಿ ಸಾಲ ಮನ್ನಾ ಮಾಡುವ ಸರ್ಕಾರಗಳು ಸಾರ್ವಜನಿಕ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಸೃಷ್ಟಿಗೆ ಅಗತ್ಯ ಅನುದಾನ ನೀಡಲು ಹಿಂದೇಟು ಹಾಕುತ್ತಿವೆ. ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ಉಳಿಸಿ ಬೆಳೆಸುವ ಮೂಲಕವೇ ಸಮಾನತೆಯ ಸಮಾಜ ನಿರ್ಮಿಸಲು ಸಾಧ್ಯ ಎಂದು ಅವರು ಹೇಳಿದರು.

ಶಿಕ್ಷಣದಿಂದ ಸಾಮಾಜಿಕ ಪರಿವರ್ತನೆ ಸಾಧ್ಯ ಎಂಬ ನಂಬಿಕೆಯಿಂದ ಮಹಾತ್ಮ ಜ್ಯೋತಿಬಾ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆ ಅವರು ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಹೋರಾಟ ನಡೆಸಿದರು. ಹೆಣ್ಣುಮಕ್ಕಳು ಹಾಗೂ ಶೋಷಿತ ಸಮುದಾಯಗಳಿಗೆ ಅಕ್ಷರ ಕಲಿಸಲು ಮುಂದಾದ ಸಾವಿತ್ರಿಬಾಯಿ ಫುಲೆ ಅವರಿಗೆ ಎದುರಾದ ಅವಮಾನ, ವಿರೋಧಗಳ ನಡುವೆಯೂ ಅವರು ತಮ್ಮ ಶೈಕ್ಷಣಿಕ ಹೋರಾಟವನ್ನು ನಿಲ್ಲಿಸಲಿಲ್ಲ. ಅವರ ತ್ಯಾಗ ಮತ್ತು ಹೋರಾಟ ಇಂದಿನ ಯುವಜನತೆಗೆ ಮಾದರಿಯಾಗಬೇಕು ಎಂದರು.

ಶಿಕ್ಷಣವೇ ಹೋರಾಟದ ಶಕ್ತಿ

ಶಿಬಿರದ ಮೊದಲ ದಿನದ ಮೊದಲ ಅಧಿವೇಶನದಲ್ಲಿ ‘ಮಹಾನ್ ವ್ಯಕ್ತಿಗಳ ಆದರ್ಶ ಮತ್ತು ಮೌಲ್ಯಗಳು’ ವಿಷಯ ಕುರಿತು ಎಐಡಿಎಸ್‌ಒ ರಾಜ್ಯ ಉಪಾಧ್ಯಕ್ಷ ಹನುಮಂತ ಎಸ್.ಹೆಚ್. ಮಾತನಾಡಿದರು.

ಶಿಕ್ಷಣವು ವ್ಯಕ್ತಿಗೆ ಧೈರ್ಯ, ಕರುಣೆ ಹಾಗೂ ಅನ್ಯಾಯದ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ. ಸಾವಿತ್ರಿಬಾಯಿ ಫುಲೆ ಅವರು ಹೆಣ್ಣುಮಕ್ಕಳು ಹಾಗೂ ಶೋಷಿತ ಸಮುದಾಯಗಳಿಗೆ ಶಿಕ್ಷಣ ನೀಡಲು ಮುಂದಾದ ಸಂದರ್ಭದಲ್ಲಿ ಹಲವು ರೀತಿಯ ವಿರೋಧಗಳನ್ನು ಎದುರಿಸಿದರೂ, ತಮ್ಮ ಹೋರಾಟದಿಂದ ಹಿಂದೆ ಸರಿಯಲಿಲ್ಲ ಎಂದು ಹೇಳಿದರು.

ಜ್ಯೋತಿಬಾ ಫುಲೆ ಅವರು ಪ್ರತಿಯೊಬ್ಬರಿಗೂ ಉನ್ನತ ಹಾಗೂ ಸಾರ್ವತ್ರಿಕ ಶಿಕ್ಷಣ ದೊರೆಯಬೇಕು ಎಂಬ ಆಶಯದೊಂದಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಶಿಕ್ಷಣ ಮತ್ತು ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಇಂತಹ ಮಹನೀಯರ ಆದರ್ಶಗಳನ್ನು ಯುವಜನತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ನೇತಾಜಿ ಸುಭಾಷ್‌ಚಂದ್ರ ಬೋಸ್, ಭಗತ್‌ಸಿಂಗ್ ಸೇರಿದಂತೆ ಹಲವು ಮಹಾನ್ ನಾಯಕರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಅವರ ಹೋರಾಟದ ಬದುಕು ಹಾಗೂ ಆದರ್ಶಗಳಿಂದ ಯುವಜನತೆ ಪ್ರೇರಣೆ ಪಡೆಯಬೇಕು ಎಂದರು.

ಶಿಬಿರದಲ್ಲಿ ಹಾಡು, ನಾಟಕ, ಸಿನಿಮಾ, ಆಟೋಟ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಎರಡನೇ ದಿನ ‘ಸಾಮಾಜಿಕ ಬದಲಾವಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ’ ವಿಷಯ ಕುರಿತು ಎಐಡಿಎಸ್‌ಒ ರಾಜ್ಯ ಉಪಾಧ್ಯಕ್ಷ ಅಭಯ ದಿವಾಕರ್ ಚರ್ಚೆ ನಡೆಸಲಿದ್ದಾರೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷ ತುಳಜಾರಾಮ್ ಎನ್.ಕೆ., ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್ ದೇವದುರ್ಗ, ಜಿಲ್ಲಾ ಉಪಾಧ್ಯಕ್ಷರಾದ ಪ್ರೀತಿ ದೊಡ್ಡಮನಿ, ಗೋವಿಂದ ಯಾಳವಾರ್, ನಾಗರಾಜ ರಾವೂರ್, ಜಿಲ್ಲಾ ಸಮಿತಿ ಸದಸ್ಯರಾದ ಯುವರಾಜ್, ರಾಹುಲ್, ದೇವರಾಜ್, ಬಾಬು, ಬೃಂದಾ, ಸೃಷ್ಟಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button