ಜಿಲ್ಲಾಸುದ್ದಿ

50 ವರ್ಷ ಕಳೆದರೂ ಕೊನೆಯಾಗದ ಜೀತ ಪದ್ಧತಿ:ನ್ಯಾಯಾಧೀಶ ಶ್ರೀನಿವಾಸ ನವಲೆ

ಕಲಬುರಗಿ, ಸೆ.03,,+ಜೀತ ಪದ್ಧತಿ ನಿರ್ಮೂಲನೆ ಕಾಯ್ದೆ 1976ರಲ್ಲಿ ಜಾರಿಗೆ ಬಂದು ಅರ್ಧ ಶತಮಾನವೇ ಕಳೆದರೂ, ಸಮಾಜದಲ್ಲಿ ಈ ಪಿಡುಗು ಇಂದಿಗೂ ಸಂಪೂರ್ಣವಾಗಿ ತೊಲಗಿಲ್ಲ. ಸಂವಿಧಾನ ನೀಡಿರುವ ಜೀವಿಸುವ ಹಕ್ಕನ್ನು ಪ್ರತಿಯೊಬ್ಬರಿಗೂ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಿದ್ದು, ಜೀತದಾಳುಗಳ ಗುರುತಿಸುವಿಕೆ, ವಿಮುಕ್ತಿ ಹಾಗೂ ಪುನರ್ವಸತಿಯಾಗಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ, ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ ಹೇಳಿದರು.

ಗುರುವಾರ ನಗರದ ಜಿಲ್ಲಾ ಪಂಚಾಯತ್ ಹೊಸ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಮಾನವ ಕಳ್ಳಸಾಗಾಣಿಕೆ ಮತ್ತು ಜೀತ ಕಾರ್ಮಿಕ ಪದ್ಧತಿ ನಿರ್ಮೂಲನೆ ಹಾಗೂ ಕಲ್ಯಾಣ ಕರ್ನಾಟಕ ಜೀತ ವಿಮುಕ್ತಿ ಒಕ್ಕೂಟದ ಧ್ವಜ ಮತ್ತು ಬಾಲ್ಯವಿವಾಹ ತಡೆ ಪೋಸ್ಟರ್ ಬಿಡುಗಡೆ ಮಾಡಿ, ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಜೀತ ಹಾಗೂ ಮಾನವ ಕಳ್ಳಸಾಗಣೆ ತಡೆಯುವುದು ಕೇವಲ ಕಾರ್ಮಿಕ ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹೊಣೆಯಲ್ಲ. ಸರ್ಕಾರದ ಎಲ್ಲಾ ಇಲಾಖೆಗಳು ಹಾಗೂ ಎನ್‌ಜಿಒ ಪ್ರತಿನಿಧಿಗಳು ಒಟ್ಟಾಗಿ ಕೆಲಸ ಮಾಡಬೇಕಿದೆ. ಇತ್ತೀಚಿಗೆ ಚಿಂಚೋಳಿ ತಾಲೂಕಿನ ಸಾಲೆ ಬೀರನಹಳ್ಳಿಯಲ್ಲಿ ಇಬ್ಬರನ್ನೂ ಜೀತ ಪದ್ದತಿಯಿಂದ ರಕ್ಷಣೆ ಮಾಡಲಾಗಿದೆ ಹಾಗೆ ಚಾಮರಾಜನಗರದಲ್ಲಿ ಕಾರ್ಮಿಕರ ಮೇಲಾದ ದೌರ್ಜನ್ಯಗಳನ್ನು ಉಲ್ಲೇಖಿಸಿದ ಅವರು, ಕನಿಷ್ಠ ವೇತನ ನೀಡದಿರುವುದೂ ಜೀತಕ್ಕೆ ಸಮಾನ ಎಂದ ಸುಪ್ರೀಂ ಕೋರ್ಟ್ ತೀರ್ಪನ್ನು ನೀಡಿದೆ ಎಂದು ತಿಳಿಸಿದರು.

.ಗ್ರಾಮೀಣ ಮಟ್ಟದಲ್ಲಿ ಪಿಡಿಒಗಳು ಜಾಗೃತಿ ಮೂಡಿಸಬೇಕು. ಬಾತ್ಮೀದಾರರು ಹಾಗೂ ಸ್ವಯಂಸೇವಾ ಸಂಸ್ಥೆಗಳ ಸುಳಿವು ಆಧರಿಸಿ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಬೇಕು. ಹೊರರಾಜ್ಯದ ಬಡ ಕಾರ್ಮಿಕರನ್ನು ಶೋಷಣೆಯಿಂದ ರಕ್ಷಿಸಿ, ಕಲಬುರಗಿಯನ್ನು ಸಂಪೂರ್ಣ ಶೋಷಣೆ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಆಡಳಿತಾತ್ಮಕ ಇಚ್ಛಾಶಕ್ತಿ ಅಗತ್ಯ ಎಂದರು.ರಾಜ್ಯ ಮಟ್ಟದ ಉನ್ನತ ಸಮಿತಿ, ಜೀತ ವಿಮುಕ್ತರ ಪುನರ್ವಸತಿ ಯೋಜನೆ, ಸದಸ್ಯ ವಿಲಿಯಂ ಕ್ರಿಸ್ಟೋಫರ್ ಅವರು ಮಾತನಾಡಿ, ಭಾರತೀಯ ಸಂವಿಧಾನದ ಪರಿಚ್ಛೇದ 21 ಪ್ರತಿಯೊಬ್ಬ ಪ್ರಜೆಗೆ ಸ್ವತಂತ್ರವಾಗಿ ಹಾಗೂ ಗೌರವಯುತವಾಗಿ ಜೀವಿಸುವ ಮೂಲಭೂತ ಹಕ್ಕನ್ನು ನೀಡಿದೆ. ಈ ಹಕ್ಕನ್ನು ಸಮಾಜದ ಕೊನೆಯ ವ್ಯಕ್ತಿಗೂ ತಲುಪಿಸುವ ನಿಟ್ಟಿನಲ್ಲಿ ಜೀತ ಪದ್ಧತಿ, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ಹಾಗೂ ಮಾನವ ಕಳ್ಳಸಾಗಾಣಿಕೆಯಂತಹ ಸಾಮಾಜಿಕ ಪಿಡುಗುಗಳ ಸಂಪೂರ್ಣ ನಿರ್ಮೂಲನೆ ಅತ್ಯಗತ್ಯ ಎಂದರು.

ಸರ್ಕಾರವು ಜಲ ಜೀವನ್ ಮಿಷನ್ ಮೂಲಕ ಮನೆ ಮನೆಗೆ ಕುಡಿಯುವ ನೀರು ಒದಗಿಸುವ ರೀತಿಯಲ್ಲೇ, ಶೋಷಿತರಿಗೆ ಸಾಮಾಜಿಕ ಭದ್ರತೆ ಸಿಗಬೇಕಿದೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಿಕ್ಷಣಕ್ಕೆ ತಂದು, ಸೂಕ್ತ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಮೂಲಕ ಹೊಸ ಜೀವನೋಪಾಯ ತೋರಿಸುವುದು ಪ್ರತಿಯೊಬ್ಬರ ಹೊಣೆಯಾಗಿದೆ. ಶೋಷಣೆಗೆ ಒಳಗಾದ ಪ್ರತಿಯೊಬ್ಬ ವ್ಯಕ್ತಿಯನ್ನು ರಕ್ಷಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕಿದೆ ಎಂದು ಹೇಳಿದರು.

ರಾಜ್ಯ ಸರ್ಕಾರವು 2024ರ ಜುಲೈನಲ್ಲಿ ಹೊರಡಿಸಿದ ಅಧಿಸೂಚನೆಯಂತೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಜೀತ ಪದ್ಧತಿಯನ್ನು ನಿಯಂತ್ರಿಸಿ ನಿರ್ಮೂಲನೆ ಮಾಡಲು ಮತ್ತು ಜಾಗೃತಿ ಮೂಡಿಸಲು ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ. ಬಾಲ್ಯವಿವಾಹ, ಜೀತ ಪದ್ಧತಿ ಹಾಗೂ ಲೈಂಗಿಕ ಶೋಷಣೆ ಮುಕ್ತ ಮಾದರಿ ಕರ್ನಾಟಕವನ್ನು ಕಟ್ಟಲು ಎಲ್ಲರೂ ಕೈಜೋಡಿಸಬೇಕೆಂದು ಎಂದರು.ಈ ಸಂದರ್ಭದಲ್ಲಿ ಎ.ಸಿ.ಪಿ ಪ್ರವೀಣ ನಾಯಕ್ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಮಹೇಶ್ ಮೇಗಣ್ಣನವರ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ವಿಶ್ವಆರಾಧ್ಯ ಕೆ. ಇಟಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಿವಶರಣಪ್ಪ, ಜೇವರ್ಗಿ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ಕವಲಗಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಹಾಳಿಮನಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ, ಮಾರ್ಗದರ್ಶಿ ಸಂಸ್ಥೆಯ ಮುಖ್ಯಸ್ಥರು ಮತ್ತು ಸಿಬ್ಬಂದಿ, ವಿವಿಧ ಎನ್‌ಜಿಒ ಉಪಸ್ತಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button