ಜಿಲ್ಲಾಸುದ್ದಿ

ಪಿಎಂ ಮಿತ್ರ’ ಯೋಜನೆಯಡಿ ಮೆಗಾ ಟೆಕ್ಸಟೈಲ್ ಪಾರ್ಕ್ ಅಭಿವೃದ್ಧಿ; ಉದ್ಯಮಿಗಳಿಗೆ ರಫ್ತು ತರಬೇತಿ

ಕಲಬುರಗಿ, ಸೆ. 3: ಕೇಂದ್ರ ಸರ್ಕಾರದ ‘ಪಿಎಂ ಮಿತ್ರ’ ಯೋಜನೆಯಡಿ ದೇಶದಲ್ಲಿ ಸ್ಥಾಪಿಸಲಾಗುತ್ತಿರುವ ಏಳು ಮೆಗಾ ಟೆಕ್ಸಟೈಲ್ ಪಾರ್ಕ್‌ಗಳಲ್ಲಿ ಕಲಬುರಗಿಯೂ ಒಂದಾಗಿದ್ದು, ಇದನ್ನು ಬಳಸಿಕೊಂಡು ಜಿಲ್ಲೆಯನ್ನು ಪ್ರಮುಖ ಜವಳಿ ಹಾಗೂ ಕೈಗಾರಿಕಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಎಂ. ಪಪ್ಪ ಕರೆ ನೀಡಿದರು.

ನಗರದ ಕೆಜಿಟಿಟಿಐ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆ ಉತ್ತರ ವಲಯದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಜವಳಿ ವಲಯದ ಸಂಭಾವ್ಯ ರಫ್ತು ಉದ್ದಿಮೆದಾರರ ಒಂದು ದಿನದ ರಫ್ತು ಪ್ರೋತ್ಸಾಹನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.‘ಪಿಎಂ ಮಿತ್ರ’ ಯೋಜನೆಯಡಿ ಕಲಬುರಗಿಯಲ್ಲಿ 1,000 ಎಕರೆ ಪ್ರದೇಶದಲ್ಲಿ ಮೆಗಾ ಟೆಕ್ಸಟೈಲ್ ಪಾರ್ಕ್ ಅಭಿವೃದ್ಧಿಪಡಿಸಲಾಗುತ್ತಿದ್ದು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ₹200 ಕೋಟಿ ಅನುದಾನ ನೀಡಲಾಗಿದೆ. ಯೋಜನೆಯಿಂದ ಲಕ್ಷಾಂತರ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ ಎಂದು ಹೇಳಿದರು.

.ಕಲಬುರಗಿ ಭಾಗದಲ್ಲಿ ಜವಳಿ ಹಾಗೂ ಕೃಷಿ ಉತ್ಪನ್ನಗಳ ರಫ್ತಿನ ಕುರಿತು ಇನ್ನಷ್ಟು ಜಾಗೃತಿ ಮೂಡಬೇಕಿದೆ. ತೊಗರಿಬೇಳೆಗೆ ಭೌಗೋಳಿಕ ಸೂಚ್ಯಂಕ (ಜಿಐ) ಮಾನ್ಯತೆ ದೊರೆತಿದ್ದರೂ, ಇಲ್ಲಿಂದ ನೇರವಾಗಿ ವಿದೇಶಗಳಿಗೆ ರಫ್ತು ನಡೆಯುತ್ತಿಲ್ಲ. ಹೊರರಾಜ್ಯದ ಉದ್ಯಮಿಗಳು ಇಲ್ಲಿಂದ ತೊಗರಿಬೇಳೆ ಖರೀದಿಸಿ ವಿದೇಶಗಳಿಗೆ ರಫ್ತು ಮಾಡುತ್ತಿದ್ದಾರೆ ಎಂದು ಅವರು ವಿಷಾದಿಸಿದರು.“ಸ್ಥಳೀಯ ತೊಗರಿಬೇಳೆ ಹಾಗೂ ಜವಳಿ ಉತ್ಪನ್ನಗಳನ್ನು ನೇರವಾಗಿ ವಿದೇಶಿ ಮಾರುಕಟ್ಟೆಗೆ ಕೊಂಡೊಯ್ಯಲು ಜಿಲ್ಲೆಯ ಉದ್ಯಮಿಗಳು ಮುಂದಾಗಬೇಕು. ಸರ್ಕಾರ ಮತ್ತು ಜವಳಿ ಇಲಾಖೆ ಒದಗಿಸುವ ಸೌಲಭ್ಯಗಳನ್ನು ಬಳಸಿಕೊಂಡು ಕಲಬುರಗಿಯನ್ನು ಕೈಗಾರಿಕಾ ಹಬ್‌ ಆಗಿ ರೂಪಿಸಬೇಕು,” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಅಬ್ದುಲ್ ಅಜೀಂ ಮಾತನಾಡಿ, ಜಿಲ್ಲೆಯಿಂದ ಈಗಾಗಲೇ ಸಿಮೆಂಟ್, ಬೇಳೆ ಧಾನ್ಯಗಳು ಹಾಗೂ ಬೆಂಟೋನೈಟ್ ಉತ್ಪನ್ನಗಳು ರಫ್ತಾಗುತ್ತಿವೆ. ಇವುಗಳನ್ನು ನೇರವಾಗಿ ಜಾಗತಿಕ ಮಾರುಕಟ್ಟೆಗೆ ತಲುಪಿಸಲು ಉದ್ಯಮಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು.ಜವಳಿ ಉದ್ಯಮಿಗಳು ಹಾಗೂ ಸಣ್ಣ ಕೈಗಾರಿಕೆಗಳಿಗೆ ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ದೊರೆಯಲಿದೆ. ವಿಶ್ವೇಶ್ವರಯ್ಯ ಟ್ರೇಡ್ ಪ್ರಮೋಷನ್ ಕೌನ್ಸಿಲ್ (ವಿಟಿಪಿಸಿ) ಹಾಗೂ ಜವಳಿ ಇಲಾಖೆಯ ಸಹಯೋಗದಲ್ಲಿ ಉದ್ಯಮಿಗಳ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ರಫ್ತು ವ್ಯವಹಾರದ ಕುರಿತು ಸಮಗ್ರ ಮಾಹಿತಿ ನೀಡಲು ಆರು ದಿನಗಳ ರಫ್ತು ನಿರ್ವಹಣೆ ತರಬೇತಿ ಕಾರ್ಯಕ್ರಮ (ಇಎಂಟಿಪಿ) ಆಯೋಜಿಸಲಾಗುತ್ತಿದೆ. ಆಸಕ್ತ ಉದ್ಯಮಿಗಳು ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಆರಂಭಿಸಿರುವ ವಿಟಿಪಿಸಿ ಶಾಖೆಯನ್ನು ಸಂಪರ್ಕಿಸಿ ತರಬೇತಿಯ ಸದುಪಯೋಗ ಪಡೆಯಬೇಕು ಎಂದು ಹೇಳಿದರು.ಕೈಮಗ್ಗ ಮತ್ತು ಜವಳಿ ಇಲಾಖೆ ಉತ್ತರ ವಲಯದ ಜಂಟಿ ನಿರ್ದೇಶಕ ಬಿ. ವಿಠ್ಠಲರಾಜು ಮಾತನಾಡಿ, “ರಫ್ತು ವ್ಯವಹಾರ ದೊಡ್ಡ ಉದ್ಯಮಿಗಳಿಗೆ ಮಾತ್ರ ಸೀಮಿತವಲ್ಲ. ಸಣ್ಣ ಮತ್ತು ಮಧ್ಯಮ ಉದ್ಯಮಿಗಳೂ ರಫ್ತು ಮಾಡಬಹುದು. ರಫ್ತು ಮಾಡುವ ಮನಸ್ಸು ಇದ್ದರೆ ಅಗತ್ಯ ಬೆಂಬಲವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಲಿವೆ,” ಎಂದರು.

ಕೆಜಿಟಿಟಿಐ ನಿರ್ದೇಶಕ ರಾಜೇಶ ಬಾವಗಿ ಮಾತನಾಡಿ, ಕೃಷಿ ಕ್ಷೇತ್ರದ ನವೋದ್ಯಮಗಳಿಗೆ ವಿನ್ಯಾಸ ಹಾಗೂ ಸಣ್ಣ ಬಿಡಿಭಾಗಗಳ ತಯಾರಿಕೆಯಲ್ಲಿ ಸಂಸ್ಥೆಯಿಂದ ತಾಂತ್ರಿಕ ನೆರವು ನೀಡಲಾಗುತ್ತಿದೆ. ಉದ್ಯೋಗ ಸೃಷ್ಟಿ ಹೆಚ್ಚಿಸಲು ಶಿಕ್ಷಣ ಸಂಸ್ಥೆಗಳು, ಕೈಗಾರಿಕೆಗಳು ಮತ್ತು ಸರ್ಕಾರದ ನಡುವೆ ಸಹಕಾರ ಅಗತ್ಯ ಎಂದು ಹೇಳಿದರು.ಬೆಂಗಳೂರಿನ ಕೇಂದ್ರ ರೇಷ್ಮೆ ಮಂಡಳಿಯ ವಿಜ್ಞಾನಿ-ಡಿ ಡಾ. ಕುಮಾರೇಶನ್ ಅವರು ರಫ್ತು ಪ್ರಕ್ರಿಯೆ, ಖರೀದಿದಾರರ ಗುರುತಿಸುವಿಕೆ, ಮಾದರಿ ರವಾನೆ, ವೆಚ್ಚ ಲೆಕ್ಕಾಚಾರ, ಗುಣಮಟ್ಟ, ಲೇಬಲಿಂಗ್ ಹಾಗೂ ಕಸ್ಟಮ್ಸ್‌ ಕ್ಲಿಯರೆನ್ಸ್‌ ಕುರಿತು ಮಾಹಿತಿ ನೀಡಿದರು.

.ಡಿಜಿಎಫ್‌ಟಿ ರೂಪಿಸಿರುವ ‘ಟ್ರೇಡ್ ಕನೆಕ್ಟ್’ ಪೋರ್ಟಲ್‌ ಮೂಲಕ ಜಾಗತಿಕ ಖರೀದಿದಾರರನ್ನು ಸಂಪರ್ಕಿಸಬಹುದು. ‘ಇಸಿಜಿಸಿ’, ‘ಇಪಿಸಿಜಿ’ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳು ರಫ್ತುದಾರರಿಗೆ ನೆರವಾಗುತ್ತವೆ. ಸ್ಥಳೀಯ ವಿಶಿಷ್ಟ ಉತ್ಪನ್ನಗಳಿಗೆ ಜಿಐ ಮಾನ್ಯತೆ ಪಡೆಯುವುದರಿಂದ ಮಾರುಕಟ್ಟೆ ವಿಸ್ತರಣೆಗೆ ಸಹಕಾರಿಯಾಗಲಿದೆ ಎಂದು ಬೆಂಗಳೂರಿನ ರಫ್ತು ಸಲಹೆಗಾರರಾದ ನಾಗವೇಣಿ ತಿಳಿಸಿದರು.ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ರಾಘವೇಂದ್ರ ಹೊಸಮನಿ ಸ್ವಾಗತಿಸಿದರು. ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ನಿರೂಪಿಸಿದರು.ವಿಟಿಪಿಸಿ ವ್ಯವಸ್ಥಾಪಕ ಜಾಫರ್ ಅನ್ಸಾರಿ, ಕೆಕೆಸಿಸಿಐ ಅನುಜಿತ ದಂಡೋತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಉದ್ಯಮಿಗಳು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button