ಜಿಲ್ಲಾಸುದ್ದಿ

ಗಾಣದ ಕಣ್ಣಪ್ಪನವರು ಆಧ್ಯಾತ್ಮದ ಉನ್ನತಿ ಸಾಧಿಸಿದ ಶರಣರು: ಹೂಗಾರ

ಕಲಬುರಗಿ, ಸೆ.2- ಅಹಂಕಾರವನ್ನು ತೊರೆದು ಗುಹೇಶ್ವರನಲ್ಲಿ ಸಂಪೂರ್ಣ ಶರಣಾಗುವ ಸಂದೇಶವನ್ನು ಗಾಣದ ಕಣ್ಣಪ್ಪನವರ ವಚನಗಳು ಸಾರುತ್ತವೆ. ಹೀಗಾಗಿ ಅವರು ಆಧ್ಯಾತ್ಮಿಕ ಉನ್ನತಿ ಸಾಧಿಸಿದ ಶರಣರು ಎಂದು ಸಂತೋಷ ಹೂಗಾರ ಹೇಳಿದರು.

ರಾಮತೀರ್ಥ ನಗರದ ಆಂಜನೇಯ ಕಾಲೊನಿಯಲ್ಲಿರುವ ಅರುಣಕುಮಾರ್ ಕಲಶೆಟ್ಟಿಯವರ ಮನೆ ಆವರಣದಲ್ಲಿ ವಚನೋತ್ಸವ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಶರಣ ದರ್ಶನ ಉಪನ್ಯಾಸ ಮಾಲಿಕೆಯಲ್ಲಿ ಗಾಣದ ಕಣ್ಣಪ್ಪನವರ ಕುರಿತು ಉಪನ್ಯಾಸ ನೀಡಿದ ಅವರು ಮಾತನಾಡಿದರು.

ಗಾಣದ ಕಣ್ಣಪ್ಪ ಶರಣರ ವಚನಗಳು ಆಳವಾದ ತಾತ್ವಿಕ ಚಿಂತನೆ ಹಾಗೂ ಮಾರ್ಮಿಕ ಅರ್ಥವನ್ನು ಹೊಂದಿವೆ. ಪ್ರತಿಯೊಂದು ವಚನವೂ ಆತ್ಮಸಾಕ್ಷಾತ್ಕಾರ, ಭಕ್ತಿ ಮತ್ತು ಶರಣತತ್ವದ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಅವು ಜೀವನದ ನಿಜವಾದ ಗುರಿಯ ಕಡೆಗೆ ದಾರಿಯನ್ನು ತೋರಿಸುತ್ತವೆ ಎಂದು ಹೇಳಿದರು.

12ನೇ ಶತಮಾನದ ನಂತರವೂ ಸಾಹಿತ್ಯ ಕ್ಷೇತ್ರದಲ್ಲಿ ಗಾಣದ ಕಣ್ಣಪ್ಪನವರ ಉಲ್ಲೇಖ ಕಂಡುಬರುತ್ತದೆ. ಶರಣ ಸಾಹಿತ್ಯದಲ್ಲಿ ಅವರಿಗೆ ವಿಶಿಷ್ಟ ಸ್ಥಾನವಿದೆ ಎಂಬುದು ತಿಳಿದುಬರುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಕೃಷಿ ಅಧಿಕಾರಿ ಬಸವರಾಜ ಎನ್. ಪುಣ್ಯಶೆಟ್ಟಿ ಮಾತನಾಡಿ, ಆಗಿನ ಶರಣರ ಅನುಭವ ಮಂಟಪವೇ ಇಂದಿನ ಭಾರತದ ಸಂಸತ್ ಭವನದಂತಿತ್ತು. ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ ಅಪಾರವಾಗಿದೆ ಎಂದು ಅಭಿಪ್ರಾಯಪಟ್ಟರು.

ಕಲ್ಯಾಣಪ್ಪ ಬಿರಾದಾರ ಓಂಕಾರ ನಡೆಸಿಕೊಟ್ಟರು. ಬಸವರಾಜ ಧೂಳಾಗುಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರುಣಕುಮಾರ್ ಕಲಶೆಟ್ಟಿ ಸ್ವಾಗತಿಸಿದರು. ಶಿವರಾಜ ಅಂಡಗಿ ಕಾರ್ಯಕ್ರಮ ನಿರೂಪಿಸಿದರು. ವಿನೋದ ಜನೇವರಿ ವಂದಿಸಿದರು.

ಕಾರ್ಯಕ್ರಮದಲ್ಲಿ ಪಂಡಿತರಾಯ ಕಲಶೆಟ್ಟಿ, ಮೈನಾ ಬಾಯಿ ಕಲಶೆಟ್ಟಿ, ಗುರುಸ್ವಾಮಿ, ಶರಣರಾಜ ಕಲಶೆಟ್ಟಿ, ಮಹಾಂತೇಶ ನಿಂಬರ್ಗಾ, ಶರಣು ವಗ್ಗಾಲೆ, ಶಾಂತಾ, ಚಂದ್ರಕಲಾ, ಮಹಾಂತಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button