ಶಿಕ್ಷಣ

ಪರಿಸರ ಸಂರಕ್ಷಣೆಗಾಗಿ ಪರಿಸರ ಸ್ನೇಹಿ ಗಣೇಶನನ್ನು ಪ್ರತಿಷ್ಠಾಪಿಸಿ: ಸುಹಾಸ್ ಖಣಗೆ

ಮನೆಗಳಲ್ಲೂ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಕರೆ

ಕಲಬುರಗಿ, ಆ.27: ಇಂದಿನ ಜಾಗತಿಕ ದಿನಮಾನಗಳಲ್ಲಿ ಪರಿಸರ ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪರಿಸರ ಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು ಎಂದು ನೂತನ ವಿದ್ಯಾಲಯ ಸಂಸ್ಥೆಯ ಕ್ರೀಡಾ ಸಮಿತಿ ಅಧ್ಯಕ್ಷ ಸುಹಾಸ್ ಖಣಗೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಗರದ ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದ ಐಕ್ಯೂಎಸಿ ಸಹಯೋಗದೊಂದಿಗೆ ಲಲಿತಕಲಾ ವಿಭಾಗದ ವತಿಯಿಂದ ಆಯೋಜಿಸಿದ್ದ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕೆ ಹಾಗೂ ಮಾರಾಟ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗಣೇಶ ಹಬ್ಬದ ಆಚರಣೆ ಆಡಂಬರದಿಂದ ಕೂಡಿರದೆ ಸರಳವಾಗಿ ಹಾಗೂ ಸಮಾಜಮುಖಿ ನೆಲೆಯಲ್ಲಿ ನಡೆಯಬೇಕು. ಪರಿಸರಕ್ಕೆ ಹಾನಿಯಾಗದಂತೆ ಗಣೇಶ ಹಬ್ಬ ಆಚರಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಮನೆಗಳಲ್ಲಿಯೂ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಶಿಲ್ಪಕಲಾವಿದ ರಮೇಶ್ ಪಿ. ಬಡಿಗೇರ್ ಅವರು ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕೆಯ ಪ್ರಾತ್ಯಕ್ಷಿಕೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ದಯಾನಂದ ಎಂ. ಶಾಸ್ತ್ರಿ ಮಾತನಾಡಿ, ಬಾಲಗಂಗಾಧರ ತಿಲಕರು ಜನಸಾಮಾನ್ಯರಲ್ಲಿ ರಾಷ್ಟ್ರೀಯ ಏಕತೆಯನ್ನು ಬಲಪಡಿಸುವ ಉದ್ದೇಶದಿಂದ ಗಣೇಶ ಚತುರ್ಥಿಯನ್ನು ಆರಂಭಿಸಿದರು. ಇಂತಹ ಹಬ್ಬಗಳು ಪರಿಸರ ಸಂರಕ್ಷಣೆಯೊಂದಿಗೆ ಸಾಮಾಜಿಕ ಜಾಗೃತಿ ಮೂಡಿಸುವಂತಿರಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಮಹಾವಿದ್ಯಾಲಯದ ನಿರ್ದೇಶಕ ಗೋವಿಂದ ಪೂಜಾರಿ ಉಪಸ್ಥಿತರಿದ್ದರು.

ಎನ್.ವಿ. ಕನ್ಯಾಶಾಲೆಯ ಚಿತ್ರಕಲಾ ಶಿಕ್ಷಕ ರಾಜಕುಮಾರ ಕಾಳೆ, ಲಲಿತಕಲಾ ವಿಭಾಗದ ಉಪನ್ಯಾಸಕ ನಾಗರಾಜ ಎಸ್. ಕುಲಕರ್ಣಿ, ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ವಿವಿಧ ಪ್ರಕ್ರಿಯೆಗಳ ಚಿತ್ರಕಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ವಿದ್ಯಾರ್ಥಿನಿ ಪ್ರಿಯಾಂಕ ಜೋಶಿ ಪ್ರಾರ್ಥನಾ ಗೀತೆ ಹಾಡಿದರು. ಕಾರ್ಯಕ್ರಮದ ಆಯೋಜಕರು ಹಾಗೂ ಮಹಾವಿದ್ಯಾಲಯದ ಲಲಿತಕಲಾ ವಿಭಾಗದ ಮುಖ್ಯಸ್ಥ ಜೀವಿತೇಂದ್ರ ಜಿ. ಕೊಥಳೀಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮಲ್ಲಿನಾಥ ಎಸ್. ತಳವಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button