ಶಿಕ್ಷಣ

ಪಿಡಿಎ ತಾಂತ್ರಿಕ ಕಾಲೇಜಿನಲ್ಲಿ ನಾಳೆ 14ನೇ ಪದವಿ ಪ್ರದಾನ ಸಮಾರಂಭ: ನೂತನ ಸಚಿವ ಅಜಯ್ ಸಿಂಗ್ ಭಾಗಿ

729 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ; 35 ಚಿನ್ನದ ಪದಕಗಳ ವಿತರಣೆ

ಕಲಬುರಗಿ, ಆ.27- ನಗರದ ಪೂಜ್ಯ ದೊಡ್ಡಪ್ಪ ಅಪ್ಪ ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಗಸ್ಟ್ 29ರಂದು ಬೆಳಿಗ್ಗೆ 10 ಗಂಟೆಗೆ ಪಿಡಿಎ ತಾಂತ್ರಿಕ ಕಾಲೇಜಿನ 14ನೇ ಪದವಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ರಾಜ್ಯ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ತಿಳಿಸಿದ್ದಾರೆ.

ಸಂಸ್ಥೆಯ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರಂಭದಲ್ಲಿ 2024-25ನೇ ಸಾಲಿನ 690 ಸ್ನಾತಕ ಹಾಗೂ 39 ಸ್ನಾತಕೋತ್ತರ ಸೇರಿದಂತೆ ಒಟ್ಟು 729 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಅಜಯ್ ಧರ್ಮಸಿಂಗ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ನಳಿನ್ ಅತುಲ್ ಮುಖ್ಯ ಅತಿಥಿಗಳಾಗಿ ಹಾಗೂ ಬೆಂಗಳೂರಿನ ಸುಮಿತ್ ಕನ್ಸಲ್ಟಿಂಗ್ ಮುಖ್ಯಸ್ಥ ಮತ್ತು ಪಿಡಿಎ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ಸಂದೀಪ್ ಶರ್ಮಾ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

35 ಚಿನ್ನದ ಪದಕಗಳ ಪ್ರದಾನ

2024-25ನೇ ಶೈಕ್ಷಣಿಕ ಸಾಲಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳ ಪೈಕಿ ಅತ್ಯಧಿಕ ಗ್ರೇಡ್ ಪಾಯಿಂಟ್ ಪಡೆದ ಒಟ್ಟು 19 ವಿದ್ಯಾರ್ಥಿಗಳಿಗೆ 35 ಚಿನ್ನದ ಪದಕಗಳನ್ನು ವಿತರಿಸಲಾಗುವುದು. ಕಂಪ್ಯೂಟರ್ ಸೈನ್ಸ್ ವಿಭಾಗದ ಅಬ್ದುಲ್ಲಾ ದಾನೀಶ್ ಏಳು ಚಿನ್ನದ ಪದಕಗಳನ್ನು ಪಡೆದು ‘ಚಿನ್ನದ ಹುಡುಗ’ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರವಜ್ವಲ್ ಜಿ. ಶಾಸ್ತ್ರಿ ಆರು ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಸಿವಿಲ್ ಎಂಜಿನಿಯರಿಂಗ್ ವಿಭಾಗದ ಅಭಿಷೇಕ್, ಎಲೆಕ್ಟ್ರಾನಿಕ್ಸ್ ವಿಭಾಗದ ತಲ್ಹಾ ಸುಫಿಯಾನ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ತಲ್ಹಾ ಅಮನ್ ಅಲಿ ಹಾಗೂ ಮಾಹಿತಿ ತಂತ್ರಜ್ಞಾನ ವಿಭಾಗದ ಸಾಗರ್ ತಲಾ ಎರಡು ಚಿನ್ನದ ಪದಕಗಳನ್ನು ಪಡೆದಿದ್ದಾರೆ. ವಿವಿಧ ವಿಭಾಗಗಳ 11 ವಿದ್ಯಾರ್ಥಿಗಳೂ ಚಿನ್ನದ ಪದಕಗಳಿಗೆ ಭಾಜನರಾಗಿದ್ದಾರೆ.

ಸ್ನಾತಕೋತ್ತರ ಪದವಿಯಲ್ಲಿ ಮೂರು ಚಿನ್ನದ ಪದಕಗಳನ್ನು ಇಬ್ಬರು ವಿದ್ಯಾರ್ಥಿಗಳ ನಡುವೆ ಹಂಚಲಾಗಿದ್ದು, ಇತ್ತೀಚೆಗೆ ಆರಂಭಿಸಿರುವ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ವಿಭಾಗದಲ್ಲಿ ಅತ್ಯಧಿಕ ಗ್ರೇಡ್ ಪಡೆದ ವಿದ್ಯಾರ್ಥಿನಿ ಹರಿಯಾಣ ಮೂಲದ ಉದ್ಯಮಿ ಹಾಗೂ ಪಿಡಿಎ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿನಿ ಶ್ರೀಮತಿ ಇರಾ ಅಗರ್ವಾಲ್ ಅವರಿಗೆ ಚಿನ್ನದ ಪದಕವನ್ನು ಪ್ರಾಯೋಜಿಸಲಾಗಿದೆ. ಕಂಪ್ಯೂಟರ್ ಸೈನ್ಸ್ ಮತ್ತು ವಿನ್ಯಾಸ ವಿಭಾಗದ ವಿದ್ಯಾರ್ಥಿಗೂ ಮಹಾವಿದ್ಯಾಲಯ ಚಿನ್ನದ ಪದಕವನ್ನು ಪ್ರಾಯೋಜಿಸಿದೆ.

ಇದುವರೆಗೆ ಪದವಿ ಪ್ರದಾನ ಸಮಾರಂಭಕ್ಕಾಗಿ 450ಕ್ಕೂ ಹೆಚ್ಚು ಪದವೀಧರರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದು, ಇನ್ನಷ್ಟು ಪದವೀಧರರು ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಶಶೀಲ್ ನಮೋಶಿ ತಿಳಿಸಿದರು.

ತರಬೇತಿ ಮತ್ತು ಉದ್ಯೋಗಕ್ಕೆ ಆದ್ಯತೆ

ಮಹಾವಿದ್ಯಾಲಯದಲ್ಲಿ ತರಬೇತಿ ಮತ್ತು ಉದ್ಯೋಗ ಕಲ್ಪಿಸುವ ಕಾರ್ಯ ಉತ್ತಮವಾಗಿ ನಡೆಯುತ್ತಿದೆ. ವಿದ್ಯಾರ್ಥಿಗಳ ತರಬೇತಿಗಾಗಿ 100ಕ್ಕೂ ಹೆಚ್ಚು ಗಣಕಯಂತ್ರಗಳನ್ನು ಒಂದೇ ಸೂರಿನಡಿ ಅಳವಡಿಸಲಾಗಿದ್ದು, ಡಿಜಿಟಲ್ ತರಗತಿ ಕೊಠಡಿಗಳನ್ನೂ ನಿರ್ಮಿಸಲಾಗಿದೆ. ಉದ್ಯಮ ಸಿಬ್ಬಂದಿಗೆ ಕಾರ್ಯನಿರ್ವಹಿಸಲು ಕೊಠಡಿಗಳು ಹಾಗೂ ಉದ್ಯಮಿಗಳಿಗಾಗಿ ವಿಶ್ರಾಂತಿ ಕೊಠಡಿಗಳನ್ನು ಸಹ ಕಲ್ಪಿಸಲಾಗಿದೆ.

ಪ್ರಸ್ತುತ ಪಿಡಿಎ ಕಾಲೇಜಿನ 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗಾವಕಾಶ ದೊರೆತಿದ್ದು, ಗರಿಷ್ಠ 10 ಲಕ್ಷ ರೂ. ಹಾಗೂ ಸರಾಸರಿ 3.5 ಲಕ್ಷ ರೂ. ವೇತನ ದೊರೆಯುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಮಹಾವಿದ್ಯಾಲಯಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ವಿಜ್ಞಾನ ವಿಭಾಗದ ಎಲ್ಲ ಸೀಟುಗಳು ಈಗಾಗಲೇ ಭರ್ತಿಯಾಗಿವೆ. ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗಗಳಿಗೆ ಹೆಚ್ಚುವರಿ 60 ಸೀಟುಗಳ ಮಂಜೂರಾತಿ ದೊರೆತಿದ್ದು, ಪ್ರವೇಶಾತಿ ಪ್ರಕ್ರಿಯೆ ಉತ್ತಮವಾಗಿ ನಡೆದಿದೆ ಎಂದು ತಿಳಿಸಿದರು.

ಮಹಾವಿದ್ಯಾಲಯದ ಎಐಸಿಟಿಇ ಐಡಿಯಾ ಲ್ಯಾಬ್ ಕಾರ್ಯನಿರ್ವಹಿಸುತ್ತಿದ್ದು, 100ಕ್ಕೂ ಹೆಚ್ಚು ಸಂಶೋಧನಾ ಸಾಧನಗಳನ್ನು ಹೊಂದಿದೆ. ವಿದ್ಯಾರ್ಥಿಗಳು ಪ್ರಾಯೋಗಿಕ ಚಟುವಟಿಕೆಗಳನ್ನು ನಡೆಸಲು ಇದು ಅನುಕೂಲವಾಗಿದ್ದು, ದಿನದ 12 ಗಂಟೆಗಳ ಕಾಲ ಪ್ರಯೋಗಾಲಯವನ್ನು ಬಳಸುವ ವ್ಯವಸ್ಥೆ ಮಾಡಲಾಗಿದೆ. ಕಲ್ಯಾಣ ಕರ್ನಾಟಕದ ಯಾವುದೇ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಪ್ರಯೋಗಗಳನ್ನು ನಡೆಸಲು ಅವಕಾಶ ಕಲ್ಪಿಸುವ ಉದ್ದೇಶವಿದೆ ಎಂದರು.

ಹಳೆಯ ವಿದ್ಯಾರ್ಥಿಗಳ ಕೇಂದ್ರ ಸ್ಥಾಪನೆ

ಕಳೆದ ಫೆಬ್ರವರಿಯಲ್ಲಿ ನಡೆದ ಜಾಗತಿಕ ಮಟ್ಟದ ಹಳೆಯ ವಿದ್ಯಾರ್ಥಿಗಳ ಸಮಾವೇಶದ ಉದ್ದೇಶವನ್ನು ಈಡೇರಿಸಲು ಪಿಡಿಎ ಅಲ್ಯೂಮ್ನಿ ರಿಸರ್ಚ್ ಸೆಂಟರ್ ಸ್ಥಾಪಿಸುವ ಉದ್ದೇಶವಿದ್ದು, ಈ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಶೀಘ್ರದಲ್ಲೇ ಕೇಂದ್ರವನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಶಶೀಲ್ ನಮೋಶಿ ಹೇಳಿದರು.

1976ನೇ ಬ್ಯಾಚ್‌ನ ಸುಮಾರು 20 ಹಳೆಯ ವಿದ್ಯಾರ್ಥಿಗಳು ಆಗಸ್ಟ್ 15ರಂದು ಮಹಾವಿದ್ಯಾಲಯಕ್ಕೆ ಭೇಟಿ ನೀಡಿದ್ದು, ಮುಂದಿನ ದಿನಗಳಲ್ಲಿ ತಾಂತ್ರಿಕ ಕಾರ್ಯಾಗಾರಗಳು ಹಾಗೂ ಜಾಗತಿಕ ಮಟ್ಟದ ತಾಂತ್ರಿಕ ಪ್ರಯೋಗಾಲಯಗಳನ್ನು ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ. ಇದಕ್ಕೆ ಆರ್ಥಿಕ ಮತ್ತು ತಾಂತ್ರಿಕ ಸಹಾಯ ನೀಡುವುದಾಗಿ ಹಳೆಯ ವಿದ್ಯಾರ್ಥಿಗಳು ಭರವಸೆ ನೀಡಿದ್ದಾರೆ ಎಂದರು.

ಮಹಾವಿದ್ಯಾಲಯವು ವೆಕ್ಟರ್ ಇನ್‌ಸ್ಟ್ರುಮೆಂಟ್ಸ್ ಪ್ರೈ.ಲಿ. ಹಾಗೂ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇನ್ಫಿನಿಯನ್ ಇನ್‌ಸ್ಟ್ರುಮೆಂಟ್ಸ್ ಇಂಡಿಯಾ ಲಿಮಿಟೆಡ್ ಮತ್ತು ಧಾರವಾಡದ ಐಐಐಟಿ ಜೊತೆಯಲ್ಲಿಯೂ ಒಪ್ಪಂದ ಮಾಡಿಕೊಂಡಿದ್ದು, ವಿದ್ಯಾರ್ಥಿಗಳಿಗೆ ತರಬೇತಿ ಹಾಗೂ ಹ್ಯಾಕಥಾನ್‌ಗಳನ್ನು ನಡೆಸಲಾಗುತ್ತಿದೆ. ಶಿಕ್ಷಕರಿಗೂ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಐಐಟಿ ಮದ್ರಾಸ್‌ನ ಎನ್‌ಪಿಟಿಇಎಲ್ ಮೂಲಕ ಆನ್‌ಲೈನ್ ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಿರುವ ಮಹಾವಿದ್ಯಾಲಯಕ್ಕೆ ಎನ್‌ಪಿಟಿಇಎಲ್‌ನ ವಿಶೇಷ ಸಕ್ರಿಯ ಆಸ್ಪಿರೆಂಟ್ ಪ್ರಶಸ್ತಿ ಹಾಗೂ ಎನ್‌ಪಿಟಿಎಲ್ ಕಂಟೆಂಡರ್ ಪ್ರಶಸ್ತಿ ದೊರೆತಿದೆ. ಎನ್‌ಪಿಟಿಇಎಲ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಕಾರ್ಯನಿರ್ವಹಿಸಿದ ಗಣಕತಂತ್ರಜ್ಞಾನ ವಿಭಾಗದ ಡಾ. ಜಯತ್ರಿ ಪಾಟೀಲ್ ಅವರಿಗೆ ಐಐಟಿ ಮದ್ರಾಸ್ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ರಾಜಾ ಬಿ. ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ್ ಎಸ್. ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ. ಕೈಲಾಶ್ ಬಿ. ಪಾಟೀಲ್, ಪ್ರಾಚಾರ್ಯ ಡಾ. ಎಸ್.ಆರ್. ಪಾಟೀಲ್, ಉಪಪ್ರಾಚಾರ್ಯರಾದ ಡಾ. ಎಸ್.ಆರ್. ಹೊಟ್ಟಿ, ಡಾ. ಭಾರತಿ ಹರಸೂರು, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ವಿಜಯ್ ಹಿರೇಮಠ, ಉಪ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಪದ್ಮಪ್ರಿಯಾ ಪಾಟೀಲ್, ಡಾ. ಬಾಬುರಾವ್ ಪಾಟೀಲ್, ಡಾ. ಅಶೋಕ್ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button