ಶಿಕ್ಷಣಸಮಾಜ

ಭಕ್ತಿಯ ತ್ರಿವಿಧ ದಾಸೋಹಿ ಪೂಜ್ಯ ಡಾ. ಅಪ್ಪ: ಡಾ. ಚೆನ್ನಮ್ಮ ಆಲ್ಬಾ

ಭಕ್ತಿಯೊಂದಿಗೆ ಮಾನವೀಯತೆ ಬೆಸೆದು ಸಮಾಜದ ಒಳಿತಿಗೆ ದಾಸೋಹದ ದಾರಿ ತೋರಿದ ಅಪ್ಪನವರ ಆದರ್ಶ

ಕಲಬುರಗಿ, ಆ.26: ಡಾ. ಶರಣಬಸವಪ್ಪ ಅಪ್ಪ ಅವರು ಭಕ್ತಿ ದಾಸೋಹದ ಮೂಲಕ ತ್ರಿವಿಧ ದಾಸೋಹಿ, ಮಹಾದಾಸೋಹಿ ಹಾಗೂ ಜ್ಞಾನ ದಾಸೋಹಿಯಾಗಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿದರು ಎಂದು ಶರಣಬಸವ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಚೆನ್ನಮ್ಮ ಆಲ್ಬಾ ಹೇಳಿದರು.

ನಗರದ ಅಖಿಲ ಭಾರತ ಶಿವಾನುಭವ ಮಂಟಪ, ಶರಣಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ 40 ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಮಂಗಳವಾರ ‘ಡಾ. ಶರಣಬಸವಪ್ಪ ಅಪ್ಪ ಅವರ ಭಕ್ತಿ ದಾಸೋಹ’ ವಿಷಯ ಕುರಿತು ಮಾತನಾಡಿದ ಅವರು, ಭಕ್ತಿ ದಾಸೋಹ ಎಂದರೆ ದೇವರ ಮೇಲಿನ ನಂಬಿಕೆ ಮತ್ತು ಭಕ್ತಿಯನ್ನು ಕೇವಲ ವೈಯಕ್ತಿಕ ಆರಾಧನೆಗೆ ಸೀಮಿತಗೊಳಿಸದೆ ಸೇವೆ, ಪ್ರಾರ್ಥನೆ, ಪರೋಪಕಾರ, ಮಾನವೀಯತೆ ಹಾಗೂ ಸಾಮಾಜಿಕ ಕಲ್ಯಾಣದೊಂದಿಗೆ ಬೆಸೆಯುವುದು ಎಂದರು.

ಪೂಜ್ಯ ಅಪ್ಪನವರ ಜೀವನದಲ್ಲಿ ಭಕ್ತಿ ಮತ್ತು ದಾಸೋಹ ಪರಸ್ಪರ ಪೂರಕವಾಗಿದ್ದವು. ಶರಣಬಸವೇಶ್ವರರ ಆರಾಧನೆಯೊಂದಿಗೆ ಭಕ್ತರ ಸೇವೆ ಹಾಗೂ ಸಮಾಜದ ಹಿತವನ್ನು ಅವರು ಧಾರ್ಮಿಕ ಜೀವನದ ಅವಿಭಾಜ್ಯ ಭಾಗವಾಗಿ ಕಂಡಿದ್ದರು. ‘ದೇವರ ಸೇವೆ ಎಂದರೆ ಮಾನವನ ಸೇವೆ’ ಎಂಬ ಆಶಯಕ್ಕೆ ಅವರು ಹೆಚ್ಚಿನ ಮಹತ್ವ ನೀಡಿದ್ದರು ಎಂದು ತಿಳಿಸಿದರು.

ಅಪ್ಪನವರ ಭಕ್ತಿ ಕೇವಲ ದೇವಾಲಯದ ಪೂಜೆ, ಆಚರಣೆ ಮತ್ತು ಧಾರ್ಮಿಕ ವಿಧಿವಿಧಾನಗಳಿಗೆ ಸೀಮಿತವಾಗಿರಲಿಲ್ಲ. ಭಕ್ತಿಯೊಂದಿಗೆ ಸಮಾಜದ ಒಳಿತನ್ನು ಜೋಡಿಸುವ ಪ್ರಯತ್ನ ಅವರ ಕಾರ್ಯಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿತ್ತು. ಶರಣಬಸವೇಶ್ವರ ಜಾತ್ರೆಯಂತಹ ಪ್ರಮುಖ ಧಾರ್ಮಿಕ ಸಂದರ್ಭಗಳಲ್ಲಿ ಭಕ್ತರ ಆರೋಗ್ಯ ಮತ್ತು ಸುರಕ್ಷತೆಯನ್ನೂ ಧಾರ್ಮಿಕ ಕರ್ತವ್ಯದಷ್ಟೇ ಮಹತ್ವದಿಂದ ಪರಿಗಣಿಸಿದ್ದರು ಎಂದರು.

ಕೊರೊನಾ ಸೋಂಕಿನ ಸಂದರ್ಭದಲ್ಲಿ ಭಕ್ತರು ಜಾತ್ರೆಗೆ ಬರುವ ಬದಲು ತಮ್ಮ ತಮ್ಮ ಮನೆಗಳಲ್ಲಿಯೇ ಇದ್ದು ಮಾನವಕುಲದ ಒಳಿತಿಗಾಗಿ ಪ್ರಾರ್ಥಿಸಬೇಕು ಎಂದು ಅಪ್ಪನವರು ಮನವಿ ಮಾಡಿದ್ದರು. ಇದು ಅವರ ಭಕ್ತಿ ದಾಸೋಹದ ಮಾನವೀಯ ಮುಖವನ್ನು ತೋರಿಸುತ್ತದೆ ಎಂದು ಡಾ. ಚೆನ್ನಮ್ಮ ಆಲ್ಬಾ ಹೇಳಿದರು.

ಅಪ್ಪನವರ ಭಕ್ತಿ ದಾಸೋಹದ ಪ್ರಮುಖ ಲಕ್ಷಣವೇ ಮಾನವೀಯತೆ. ಧಾರ್ಮಿಕ ಆಚರಣೆಗಳ ಜೊತೆಗೆ ಸಮಾಜದ ದುರ್ಬಲರು, ಬಡವರು ಹಾಗೂ ಅಗತ್ಯವಿರುವವರಿಗೆ ನೆರವಾಗುವ ಮನೋಭಾವವನ್ನು ಬೆಳೆಸುವುದು ಅವರ ಪರಂಪರೆಯ ಪ್ರಮುಖ ಅಂಶವಾಗಿತ್ತು. ಈ ಕಾರಣದಿಂದಲೇ ಅವರನ್ನು ಕೇವಲ ಧಾರ್ಮಿಕ ನಾಯಕರೆಂದು ಮಾತ್ರವಲ್ಲದೆ ಶಿಕ್ಷಣ ಸಂತ, ದಾಸೋಹ ಮಹಾಮನೆ ಹಾಗೂ ಮಹಾಮಹಿಮರು ಎಂದು ಗೌರವಿಸಲಾಗುತ್ತದೆ ಎಂದು ಅವರು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button