ಶಿಕ್ಷಣ

ಮಾಸ್ತಿ ಸಾಹಿತ್ಯದ ಮೂಲಕ ಗ್ರಾಮೀಣ ಮಕ್ಕಳಲ್ಲಿ ಕನ್ನಡದ ಕಲರವ

ಕನಕ ವಿದ್ಯಾಪೀಠ ಶಾಲೆಯಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಬದುಕು, ಬರಹ ಮತ್ತು ಸಾಹಿತ್ಯ ಪರಿಚಯ ಕಾರ್ಯಕ್ರಮ

ಚಿತ್ತಾಪುರ: ತಾಲೂಕಿನ ನಾಲವಾರ ಹೋಬಳಿ ವ್ಯಾಪ್ತಿಯ ನಾಲವಾರ ಸ್ಟೇಷನ್‌ನಲ್ಲಿರುವ ಕನಕ ವಿದ್ಯಾಪೀಠ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಬದುಕು, ಬರಹ ಹಾಗೂ ಸಾಹಿತ್ಯದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಆರಂಭದಲ್ಲಿ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮೂಲಕ ಗೌರವ ಸಮರ್ಪಿಸಲಾಯಿತು. ಕನ್ನಡ ನಾಡು, ನುಡಿ, ಭಾಷೆ ಹಾಗೂ ಸಂಸ್ಕೃತಿಯ ಮೇಲಿನ ಅಭಿಮಾನವನ್ನು ಗಣ್ಯರು ವ್ಯಕ್ತಪಡಿಸಿದರು. ವೇದಿಕೆಯಲ್ಲಿದ್ದ ಗಣ್ಯರನ್ನು ನಾಲವಾರ ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಕನ್ನಡ ಶಾಲು ಹೊದಿಸಿ ಸತ್ಕರಿಸಿದರು.

ಮಾಸ್ತಿ ಸಾಹಿತ್ಯದ ಕುರಿತು ವಿಶೇಷ ಉಪನ್ಯಾಸ

ಯುವ ಕವಯಿತ್ರಿ ರೂಪಾ ಪೂಜಾರಿ ಅವರು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಸಾಹಿತ್ಯ ಸಾಧನೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮಾಸ್ತಿಯವರು ಸಣ್ಣ ಕಥೆಯನ್ನು ಪ್ರಮುಖ ಸಾಹಿತ್ಯ ಪ್ರಕಾರವನ್ನಾಗಿ ಆರಿಸಿಕೊಂಡು ‘ಶ್ರೀನಿವಾಸ’ ಎಂಬ ಕಾವ್ಯನಾಮದಲ್ಲಿ ನೂರಾರು ಕಥೆಗಳನ್ನು ರಚಿಸಿದ್ದರು. ಅವರ ಕಥೆಗಳಲ್ಲಿ ಮಾನವೀಯ ಅಂತಃಕರಣ, ವಿಶಿಷ್ಟ ಕಥನ ತಂತ್ರ ಹಾಗೂ ಬದುಕಿನ ನೈಜ ಚಿತ್ರಣ ಕಾಣಬಹುದಾಗಿದೆ ಎಂದು ವಿವರಿಸಿದರು.

ಸಣ್ಣ ಕಥೆಗಳ ಜನಕರೆಂದೇ ಖ್ಯಾತರಾದ ಮಾಸ್ತಿಯವರು “ಕಥೆ ಹೇಳುವುದು ಒಂದು ಪುಣ್ಯದ ಕೆಲಸ” ಎಂಬ ಭಾವನೆ ಹೊಂದಿದ್ದರು. ಸಣ್ಣ ಕಥೆಗಳ ಜೊತೆಗೆ ಕಾದಂಬರಿ, ಕಾವ್ಯ, ಜೀವನಚರಿತ್ರೆ, ನಾಟಕ ಹಾಗೂ ಅನುವಾದ ಕ್ಷೇತ್ರಗಳಲ್ಲಿಯೂ ಅವರು ಅಪಾರ ಕೊಡುಗೆ ನೀಡಿದ್ದಾರೆ. ‘ಚಿಕವೀರ ರಾಜೇಂದ್ರ’, ‘ಚನ್ನಬಸವನಾಯಕ’, ‘ಭಾರತತೀರ್ಥ’, ‘ಆದಿಕವಿ ವಾಲ್ಮೀಕಿ’, ‘ಶ್ರೀರಾಮ ಪಟ್ಟಾಭಿಷೇಕ’ ಸೇರಿದಂತೆ ಹಲವು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ ಎಂದು ಹೇಳಿದರು.

‘ಚಿಕವೀರ ರಾಜೇಂದ್ರ’ ಕಾದಂಬರಿಗೆ ಮಾಸ್ತಿಯವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದ್ದು, ಅವರ ಆತ್ಮಕಥನ ‘ಭಾವ’ ಮೂರು ಸಂಪುಟಗಳಲ್ಲಿ ಪ್ರಕಟವಾಗಿದೆ. ‘ಕಾಕನಕೋಟೆ’ ಕೃತಿ ಚಲನಚಿತ್ರವಾಗಿ ಜನಪ್ರಿಯತೆ ಗಳಿಸಿದೆ. ವಿವಿಧ ವಿಶ್ವವಿದ್ಯಾಲಯಗಳ ಗೌರವ ಪದವಿಗಳು, ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷತೆ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಅವರಿಗೆ ಸಂದಿವೆ ಎಂದು ತಿಳಿಸಿದರು.

ಜೀವನಪರ್ಯಂತ ಕನ್ನಡ ಸೇವೆ ಮಾಡಿದ ಮಾಸ್ತಿಯವರನ್ನು “ಮಾಸ್ತಿ ಎಂದರೆ ಕನ್ನಡದ ಆಸ್ತಿ” ಎಂದು ಗೌರವದಿಂದ ಕರೆಯಲಾಗುತ್ತದೆ. ಅಧಿಕಾರ ಮತ್ತು ಗೌರವಗಳು ದೊರೆತರೂ ಬಾಲ್ಯದ ಬಡತನವನ್ನು ಮರೆಯದೆ, ಕನ್ನಡ ಸಾಹಿತ್ಯ ಹಾಗೂ ಸಮಾಜಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಧೀಮಂತ ವ್ಯಕ್ತಿತ್ವ ಅವರದು ಎಂದು ರೂಪಾ ಪೂಜಾರಿ ಅಭಿಪ್ರಾಯಪಟ್ಟರು.

ರೈತರ ಸಂಕಷ್ಟ ಬಿಂಬಿಸಿದ ಕವನ ವಾಚನ

ಶಿವಲೀಲಾ ತುನ್ನೂರ ಅವರು ರೈತರ ಸಂಕಷ್ಟವನ್ನು ಬಿಂಬಿಸುವ ಕವನ ವಾಚನ ಮಾಡಿದರು. ಮಳೆಯ ಮಹತ್ವ ಹಾಗೂ ರೈತರ ಬದುಕು ಮಳೆಯ ಮೇಲೆ ಎಷ್ಟು ಅವಲಂಬಿತವಾಗಿದೆ ಎಂಬುದನ್ನು ಭಾವಪೂರ್ಣ ಸಾಲುಗಳ ಮೂಲಕ ಮನಮುಟ್ಟುವಂತೆ ವ್ಯಕ್ತಪಡಿಸಿದರು.

ಕಸಾಪ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಲು ಆಗ್ರಹ

ನಾಲವಾರ ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಸಿದ್ದು ಮಳಬಾ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳನ್ನು ನಡೆಸಲು ಸರ್ಕಾರಿ ಆವರಣಗಳಲ್ಲಿ ನಿರ್ಬಂಧ ಹೇರಬಾರದು ಎಂದು ಆಗ್ರಹಿಸಿದರು. ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಬೆಳವಣಿಗೆಗಾಗಿ ನಡೆಯುವ ಇಂತಹ ಕಾರ್ಯಕ್ರಮಗಳಿಗೆ ಸರ್ಕಾರ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ರಣಧೀರ ಹೊಸ್ಮನಿ ಮಾತನಾಡಿದರು.

ನಾಲವಾರ ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಂಜುನಾಥ ಎಸ್. ನಾಯ್ಕಲ್ ಆಶಯ ನುಡಿಗಳನ್ನಾಡಿ, ಗ್ರಾಮೀಣ ಮಟ್ಟದಲ್ಲಿಯೂ ಮಕ್ಕಳಲ್ಲಿ ಕನ್ನಡ ಸಾಹಿತ್ಯದ ಅರಿವು ಮೂಡಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಹೇಳಿದರು. ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಬೆಳೆಸುವುದು ಎಲ್ಲರ ಜವಾಬ್ದಾರಿ ಎಂದರು. ಮಕ್ಕಳೊಂದಿಗೆ ಹಾಸ್ಯಮಯವಾಗಿ ಸಂವಾದ ನಡೆಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ರಂಗೋಲಿ ಸ್ಪರ್ಧೆ

ಕಾರ್ಯಕ್ರಮದ ಅಂಗವಾಗಿ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಸಿಂಧು ಪ್ರಥಮ ಹಾಗೂ ಜಾನ್ವೀ ದ್ವಿತೀಯ ಸ್ಥಾನ ಪಡೆದರು. ವಿಜೇತರಿಗೆ ಪ್ರಮಾಣಪತ್ರ ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾದ ಹರಿಶ್ಚಂದ್ರ ಚವ್ಹಾಣ, ಇಬ್ರಾಹಿಂ ಸೇಠ, ಸಿದ್ದುಗೌಡ ಕುರಾಳ, ರಾಜೇಂದ್ರ ಎನ್. ಕೊಲ್ಲೂರು, ರೋಹಿತ ಸಾಹೇಬ್, ಮಲ್ಲೇಶಿ ಸೊಂಟೇನರ್ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಶಿಕ್ಷಕ ಉದಯಕುಮಾರ ಸ್ವಾಗತಿಸಿದರು. ನಾಲವಾರ ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಅರುಣಕುಮಾರ ಸುಣಗಾರ ವಂದನಾರ್ಪಣೆ ಸಲ್ಲಿಸಿದರು. ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ. ಹಡಪದ ಹಾಗೂ ಸುಗೂರ ಎನ್. ನಿರೂಪಿಸಿದರು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಅಭಿಮಾನ ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ ಎಂಬ ಅಭಿಪ್ರಾಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.

Related Articles

Leave a Reply

Your email address will not be published. Required fields are marked *

Back to top button