ಜಿಲ್ಲಾಸುದ್ದಿ

ಕೆಕೆಆರ್‌ಟಿಸಿಯ ಮೃತ ನೌಕರರ ಕುಟುಂಬಗಳಿಗೆ ತಲಾ ₹12.50 ಲಕ್ಷ ಪರಿಹಾರ

ಮೃತ ನೌಕರರ 18 ಕುಟುಂಬಗಳಿಗೆ ಆಂತರಿಕ ಗುಂಪು ವಿಮಾ ಯೋಜನೆಯಡಿ ಪರಿಹಾರಧನ; ಕುಟುಂಬಗಳ ಭವಿಷ್ಯಕ್ಕೆ ಹಣ ಬಳಸಿಕೊಳ್ಳುವಂತೆ ಮನವಿ

ಕಲಬುರಗಿ, ಆ.24: ಕರ್ತವ್ಯ ನಿರ್ವಹಿಸುವ ವೇಳೆ ಅಕಾಲಿಕವಾಗಿ ಮೃತಪಟ್ಟ ಹಾಗೂ ಅಪಘಾತದಲ್ಲಿ ಜೀವ ಕಳೆದುಕೊಂಡ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕರು ಮತ್ತು ನೌಕರರ 18 ಕುಟುಂಬಗಳಿಗೆ ತಲಾ ₹12.50 ಲಕ್ಷ ಪರಿಹಾರಧನ ವಿತರಿಸಲಾಗಿದೆ. ಸುತ್ತೋಲೆ-2021ರ ಅನ್ವಯ ಎರಡು ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರಧನವನ್ನೂ ನೀಡಲಾಗಿದೆ ಎಂದು ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ್ ಎಂ.ವೈ. ಪಾಟೀಲ ತಿಳಿಸಿದರು.

ನಗರದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಂತರಿಕ ಗುಂಪು ವಿಮಾ ಯೋಜನೆಯಡಿ ಮೃತ ನೌಕರರ ಅವಲಂಬಿತ ಕುಟುಂಬಗಳಿಗೆ ಪರಿಹಾರಧನದ ಚೆಕ್‌ಗಳನ್ನು ಹಸ್ತಾಂತರಿಸಿ ಅವರು ಮಾತನಾಡಿದರು.

ಸಂಸ್ಥೆಯು ಕೇವಲ ಉದ್ಯೋಗ ನೀಡುವ ಸ್ಥಳವಲ್ಲ, ಅದೊಂದು ಕುಟುಂಬದಂತೆ ಕಾರ್ಯನಿರ್ವಹಿಸುತ್ತದೆ. ನೌಕರರ ಹಠಾತ್ ಅಗಲಿಕೆಯಿಂದ ಕುಟುಂಬಗಳು ಎದುರಿಸುವ ನೋವು ಅವರದ್ದಷ್ಟೇ ಅಲ್ಲ, ಸಂಸ್ಥೆಯದ್ದೂ ಆಗಿದೆ. ಮೃತ ನೌಕರರ ಕುಟುಂಬಸ್ಥರಿಗೆ ನಿಯಮಾನುಸಾರ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲು ಸಂಸ್ಥೆ ಸಂಪೂರ್ಣ ಬದ್ಧವಾಗಿದೆ ಎಂದು ಅರುಣಕುಮಾರ್ ಪಾಟೀಲ ಹೇಳಿದರು.

ಪರಿಹಾರವಾಗಿ ದೊರೆತ ಹಣವನ್ನು ಮಧ್ಯವರ್ತಿಗಳ ಮಾತಿಗೆ ಮರುಳಾಗದೆ ಸುರಕ್ಷಿತವಾಗಿ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟು, ಮಕ್ಕಳ ಶಿಕ್ಷಣ ಹಾಗೂ ಕುಟುಂಬದ ಭವಿಷ್ಯಕ್ಕೆ ಬಳಸಿಕೊಳ್ಳುವಂತೆ ಅವರು ಕುಟುಂಬಸ್ಥರಿಗೆ ಸಲಹೆ ನೀಡಿದರು.

ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಡಾ. ಬಿ. ಸುಶೀಲಾ ಮಾತನಾಡಿ, ಸೇವೆಯಲ್ಲಿದ್ದಾಗ ಸಿಬ್ಬಂದಿಯನ್ನು ಕಳೆದುಕೊಂಡಿರುವುದು ಅತ್ಯಂತ ದುಃಖದ ಸಂಗತಿಯಾಗಿದೆ. ಅವರ ಅಗಲಿಕೆಯಿಂದ ಉಂಟಾದ ಶೂನ್ಯವನ್ನು ತುಂಬಲು ಸಾಧ್ಯವಿಲ್ಲ. ಆದರೆ ಅವರ ಕುಟುಂಬಗಳ ಭವಿಷ್ಯ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಆಂತರಿಕ ಗುಂಪು ವಿಮಾ ಯೋಜನೆಯಡಿ ಪರಿಹಾರಧನವನ್ನು ತಲುಪಿಸಲಾಗುತ್ತಿದೆ ಎಂದು ತಿಳಿಸಿದರು.

ಇತ್ತೀಚೆಗೆ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ನಿಗಮದ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದು, ಹಲವು ಪ್ರಯಾಣಿಕರು ಗಾಯಗೊಂಡಿದ್ದರು. ಘಟನೆ ನಡೆದ ತಕ್ಷಣ ನಿಗಮದ ಅಧ್ಯಕ್ಷರು ಆಸ್ಪತ್ರೆಗಳಿಗೆ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ಹೇಳಿದ್ದರು. ಗಾಯಗೊಂಡ ಪ್ರಯಾಣಿಕರ ಸಂಪೂರ್ಣ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ನಿಗಮದ ವತಿಯಿಂದಲೇ ಭರಿಸಲಾಗಿದ್ದು, ಸಂತ್ರಸ್ತ ಕುಟುಂಬಗಳಿಗೆ ನಿಗಮವು ಸದಾ ನೈತಿಕ ಹಾಗೂ ಆರ್ಥಿಕ ಬೆಂಬಲವಾಗಿ ನಿಲ್ಲಲಿದೆ ಎಂದು ಡಾ. ಸುಶೀಲಾ ಹೇಳಿದರು.

ಮುಖ್ಯ ಕಾರ್ಮಿಕ ಕಲ್ಯಾಣ ಅಧಿಕಾರಿ ಸುನೀಲಕುಮಾರ್ ಚೇಂದ್ರಗಿ ಮಾತನಾಡಿ, ಸಂಸ್ಥೆಯಲ್ಲಿ 2008ರಿಂದ ಆಂತರಿಕ ಗುಂಪು ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಸಿಬ್ಬಂದಿಯ ಕ್ಷೇಮಾಭಿವೃದ್ಧಿಗೆ ನಿರಂತರವಾಗಿ ಶ್ರಮಿಸಲಾಗುತ್ತಿದೆ. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾದ ಯೋಜನೆ ಇದೀಗ ₹12.50 ಲಕ್ಷ ಪರಿಹಾರ ಸೌಲಭ್ಯ ಒದಗಿಸುವ ಮಟ್ಟಕ್ಕೆ ವಿಸ್ತರಿಸಿದೆ ಎಂದು ತಿಳಿಸಿದರು.

ಸಂಸ್ಥೆಯ ಆಡಳಿತ ಮಂಡಳಿಯು ಬ್ಯಾಂಕ್‌ಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಅನ್ವಯ ಕರ್ತವ್ಯದಲ್ಲಿರುವಾಗ ಅಥವಾ ವೈಯಕ್ತಿಕ ಅಪಘಾತದಲ್ಲಿ ಮೃತಪಟ್ಟ ಚಾಲಕರು ಹಾಗೂ ಸಿಬ್ಬಂದಿಯ ಕುಟುಂಬಗಳಿಗೆ ₹1 ಕೋಟಿಯ ಭದ್ರತಾ ವಿಮೆ ಸೌಲಭ್ಯ ಒದಗಿಸಲಾಗುತ್ತಿದೆ. ಸಾಮಾನ್ಯವಾಗಿ ಮೃತಪಟ್ಟ ಸಿಬ್ಬಂದಿಯ ಕುಟುಂಬಗಳಿಗೆ ₹5ರಿಂದ ₹6 ಲಕ್ಷದವರೆಗೆ ಸಹಾಯಧನ ದೊರೆಯಲಿದೆ ಎಂದು ಅವರು ತಿಳಿಸಿದರು.

ಸಂಸ್ಥೆಯಿಂದ ದೊರೆಯುವ ಪರಿಹಾರ ಮೊತ್ತವನ್ನು ಅನಗತ್ಯ ವೆಚ್ಚಗಳಿಗೆ ಬಳಸದೆ, ಕುಟುಂಬದ ಭವಿಷ್ಯ ಮತ್ತು ಮಕ್ಕಳ ಶಿಕ್ಷಣಕ್ಕಾಗಿ ಸುರಕ್ಷಿತವಾಗಿ ವಿನಿಯೋಗಿಸಬೇಕು ಎಂದು ಸುನೀಲಕುಮಾರ್ ಚೇಂದ್ರಗಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕೆಕೆಆರ್‌ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷಕುಮಾರ, ಮುಖ್ಯ ಯಾಂತ್ರಿಕ ಎಂಜಿನಿಯರ್ ಸಂತೋಷಕುಮಾರ, ಮುಖ್ಯ ಲೆಕ್ಕಪತ್ರ ಅಧಿಕಾರಿ ಹಾಗೂ ಹಣಕಾಸು ಸಲಹೆಗಾರ ಬಸವರಾಜ ಬೆಳಗಾವಿ, ಮುಖ್ಯ ಭದ್ರತೆ ಮತ್ತು ಜಾಗೃತಿ ಅಧಿಕಾರಿ ಬಸಪ್ಪ ಗುರಿಕಾರ, ಮುಖ್ಯ ಸಿಬ್ಬಂದಿ ಮತ್ತು ಸುರಕ್ಷತಾ ಅಧಿಕಾರಿ ಜಗದೀಶ್, ಅನ್ವರ್ ಜಾವಿದ್ ಸೇರಿದಂತೆ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button