ಸಮಾಜ

ಪತ್ರಿಕೆಗಳು ಸತ್ಯದ ಧ್ವನಿಯಾಗಿ ಸ್ವಾತಂತ್ರ್ಯ ಚಳವಳಿಗೆ ಶಕ್ತಿ ತುಂಬಿದವು: ಅಪ್ಪಾರಾವ್ ಅಕ್ಕೋಣಿ

ಬ್ರಿಟಿಷರ ದಬ್ಬಾಳಿಕೆ ಪ್ರಶ್ನಿಸಿ ರಾಷ್ಟ್ರೀಯ ಚಳವಳಿಗೆ ಜನಬೆಂಬಲ ಒಗ್ಗೂಡಿಸಿದ ಮಾಧ್ಯಮ: ಹಿರಿಯ ಪತ್ರಕರ್ತರ ಅಭಿಪ್ರಾಯ

ಕಲಬುರಗಿ, ಆ.22: ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಪತ್ರಿಕೆಗಳು ಜನರಲ್ಲಿ ರಾಷ್ಟ್ರೀಯ ಪ್ರಜ್ಞೆ, ಸ್ವಾತಂತ್ರ್ಯದ ಹಂಬಲ ಹಾಗೂ ಬ್ರಿಟಿಷರ ವಿರುದ್ಧ ಹೋರಾಟದ ಮನೋಭಾವ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದವು ಎಂದು ವಾರ್ತಾ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಅಪ್ಪಾರಾವ್ ಅಕ್ಕೋಣಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಕರ್ನಾಟಕ ಸಣ್ಣ ಮತ್ತು ಜಿಲ್ಲಾ ಪತ್ರಿಕೆಗಳ ಸಂಘದ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ‘ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪತ್ರಿಕೆಗಳ ಪಾತ್ರ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಪತ್ರಿಕೆಗಳು ಕೇವಲ ಸುದ್ದಿಗಳನ್ನು ಪ್ರಕಟಿಸುವ ಮಾಧ್ಯಮಗಳಾಗಿರಲಿಲ್ಲ. ಜನರಲ್ಲಿ ಜಾಗೃತಿ ಮೂಡಿಸುವುದು, ಬ್ರಿಟಿಷರ ದಬ್ಬಾಳಿಕೆಯನ್ನು ಪ್ರಶ್ನಿಸುವುದು ಹಾಗೂ ರಾಷ್ಟ್ರೀಯ ಚಳವಳಿಗೆ ಜನಬೆಂಬಲ ಒಗ್ಗೂಡಿಸುವ ಪ್ರಬಲ ಸಾಧನಗಳಾಗಿದ್ದವು ಎಂದರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪತ್ರಿಕೆಗಳು ವಹಿಸಿದ ಪಾತ್ರವನ್ನು ಸ್ಮರಿಸಿದ ಅವರು, ಹಿರಿಯ ಪತ್ರಕರ್ತ ವೆಂಕಟರಾವ್ ಕಾಗಲ್ಕರ್ (ವಿ.ಎನ್. ಕಾಗಲ್ಕರ್) ಅವರ ಪತ್ರಿಕಾ ಧರ್ಮ ಹಾಗೂ ಪತ್ರಿಕೋದ್ಯಮಕ್ಕೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಮಹಮ್ಮದ್ ಅಸಗರ್ ಚುಲಬುಲ್ ಮಾತನಾಡಿ, ಸಂಘದ ಬೆಳವಣಿಗೆಗೆ ತನು, ಮನ, ಧನದಿಂದ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಸಂಘದ ವತಿಯಿಂದ ವಿಭಿನ್ನ ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದನ್ನು ಅವರು ಪ್ರಶಂಸಿಸಿದರು.

ಸಂಘದ ರಾಜ್ಯ ಉಪಾಧ್ಯಕ್ಷ ಆನಂದ್ ಪಿ. ಮಣೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸಂಘಕ್ಕೆ ಮಾನ್ಯತೆ ದೊರೆತಿರುವುದಾಗಿ ತಿಳಿಸಿದರು. ಯುವ ಪತ್ರಕರ್ತರು ಹಾಗೂ ಯುವ ಸಂಪಾದಕರಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಸಂಪಾದಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸಲು ಸಂಘ ಸದಾ ಮುಂದಿರುತ್ತದೆ ಎಂದರು.

ಉರ್ದು ಪತ್ರಿಕೆಯ ಸಂಪಾದಕ ಹಾಗೂ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಜೀಜುಲ್ಲಾ ಸರ್ ಮಸ್ತ್ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಉರ್ದು ಸೇರಿದಂತೆ ವಿವಿಧ ಭಾಷೆಗಳ ಪತ್ರಿಕೆಗಳು ವಹಿಸಿದ ಮಹತ್ವದ ಪಾತ್ರವನ್ನು ವಿವರಿಸಿದರು. ಪತ್ರಿಕೆಯನ್ನು ಕನ್ನಡ, ಹಿಂದಿ ಅಥವಾ ಉರ್ದು ಎಂದು ವಿಭಜಿಸುವುದಕ್ಕಿಂತ ‘ಪತ್ರಿಕೋದ್ಯಮದ ಧ್ವನಿ’ ಎಂಬ ವಿಶಾಲ ಅರ್ಥದಲ್ಲಿ ನೋಡಬೇಕು. ಪತ್ರಿಕೆ ಎಂದರೆ ಸತ್ಯದ ಧ್ವನಿ. ಇದೇ ಧ್ವನಿ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಜನರಲ್ಲಿ ಹೋರಾಟದ ಕಿಚ್ಚು ಹೊತ್ತಿಸಿತು ಎಂದು ಹೇಳಿದರು.

ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುನ್ನವೇ ಬ್ರಿಟಿಷರ ವಿರುದ್ಧ ಜನಾಭಿಪ್ರಾಯ ರೂಪಿಸುವಲ್ಲಿ ಪತ್ರಿಕೆಗಳು ಮುಂಚೂಣಿಯಲ್ಲಿದ್ದವು. ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದವರಲ್ಲಿ ಪತ್ರಕರ್ತರೂ ಇದ್ದರು. ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಪತ್ರಿಕೆಗಳು ಸ್ವಾತಂತ್ರ್ಯ ಹೋರಾಟಕ್ಕೆ ಬಲ ತುಂಬಿದವು ಎಂದು ಅವರು ಹೇಳಿದರು.

ಕನ್ನಡ ಪತ್ರಿಕೆಗಳ ಪಾತ್ರ ಕುರಿತು ಸಂಪಾದಕ ಚಂದ್ರಕಾಂತ ಬಿರಾದಾರ್ ಮಾತನಾಡಿ, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಪತ್ರಿಕೆಗಳು ಸ್ವಾತಂತ್ರ್ಯ ಚಳವಳಿಯ ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದರು. ಪತ್ರಿಕೆಗಳ ಮೂಲಕ ರಾಷ್ಟ್ರೀಯ ಚಿಂತನೆ, ಸಾಮಾಜಿಕ ಜಾಗೃತಿ ಹಾಗೂ ಸ್ವಾತಂತ್ರ್ಯದ ಆಶಯಗಳನ್ನು ಗ್ರಾಮೀಣ ಪ್ರದೇಶಗಳಿಗೂ ತಲುಪಿಸಲಾಯಿತು ಎಂದು ವಿವರಿಸಿದರು.

ಭಾರತೀಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟದ ಉಪಾಧ್ಯಕ್ಷ ಶಂಕರ ಕೊಡ್ಲಾ ಮಾತನಾಡಿ, ಸಂಘ ಇನ್ನಷ್ಟು ಬಲಿಷ್ಠವಾಗಿ ಬೆಳೆಯಬೇಕು. ಮುಂದಿನ ದಿನಗಳಲ್ಲಿ ಇನ್ನಷ್ಟು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮಾಧ್ಯಮ ಮಾನ್ಯತಾ ಸಮಿತಿ ಸದಸ್ಯ ಗುರುರಾಜ ಕುಲಕರ್ಣಿ ಸೇರಿದಂತೆ ಹಿರಿಯ ಸಂಪಾದಕರು, ಪತ್ರಕರ್ತರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ನಾಗರಿಕರು ಭಾಗವಹಿಸಿದ್ದರು. ಬಾಬುರಾವ್ ಕೋಬಾಳ ಸ್ವಾಗತ ಗೀತೆ ಹಾಡಿದರು. ಸಿದ್ದಣ್ಣ ಯಡಳ್ಳಿ ಅತಿಥಿಗಳನ್ನು ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಹವಣೂರ ಕಾರ್ಯಕ್ರಮ ನಿರೂಪಿಸಿದರು. ಕಿರಣ್ ಪಾಟೀಲ್ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button