ಶಿಕ್ಷಣ

ಒಳ ಮೀಸಲಾತಿಯಲ್ಲಿ ಕೊಳಂಬೊ ಸಮುದಾಯಕ್ಕೆ ಅನ್ಯಾಯ: ವಿದ್ಯಾರ್ಥಿಗಳ ಪ್ರತಿಭಟನೆ

ಬಂಜಾರ, ಕೊರಚ, ಕೊರಮ, ಭೋವಿ ಸಮುದಾಯಗಳಿಗೆ ನ್ಯಾಯಯುತ ಮೀಸಲಾತಿ ಹಾಗೂ ನೇಮಕಾತಿ ರೋಸ್ಟರ್ ಜಾರಿಗೆ ಆಗ್ರಹ

ಕಲಬುರಗಿ, ಆ.21- ಎಸ್ಸಿ ಒಳಮೀಸಲಾತಿ ಜಾರಿಯಲ್ಲಿ ಕೊಳಂಬೊ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ನ್ಯಾಯಯುತ ಮೀಸಲಾತಿ ಹಾಗೂ ನೇಮಕಾತಿ ರೋಸ್ಟರ್ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಬಂಜಾರ, ಕೊರಚ, ಕೊರಮ ಮತ್ತು ಭೋವಿ ಸಮುದಾಯಗಳ ವಿದ್ಯಾರ್ಥಿಗಳ ಒಕ್ಕೂಟದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರು, ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಸಮುದಾಯಗಳನ್ನು ಎ, ಬಿ, ಸಿ ಎಂದು ಮೂರು ಗುಂಪುಗಳಾಗಿ ವರ್ಗೀಕರಿಸಿ ಒಳಮೀಸಲಾತಿ ವ್ಯವಸ್ಥೆ ಜಾರಿಗೊಳಿಸಿದೆ. ಪ್ರಸ್ತುತ ಎಸ್ಸಿ(ಸಿ) ವರ್ಗದಲ್ಲಿ ಕೊಳಂಬೊ ಸಮುದಾಯಗಳಾದ ಬಂಜಾರ, ಕೊರಚ, ಕೊರಮ ಮತ್ತು ಭೋವಿ ಸಮುದಾಯಗಳಿಗೆ ಶೇ.80ರಷ್ಟು ಹಾಗೂ ಅಲೆಮಾರಿ ಸಮುದಾಯಗಳಿಗೆ ಶೇ.20ರಷ್ಟು ಪಾಲು ನೀಡಲಾಗಿದೆ ಎಂದು ತಿಳಿಸಿದರು.

ಆದರೆ ಪ್ರಸ್ತುತ ಜಾರಿಯಲ್ಲಿರುವ ನೇಮಕಾತಿ ರೋಸ್ಟರ್ ವ್ಯವಸ್ಥೆಯಲ್ಲಿ ಅಲೆಮಾರಿ ಸಮುದಾಯಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿರುವುದರಿಂದ, ಎಸ್ಸಿ(ಸಿ) ಅಡಿಯಲ್ಲಿ ಶೇ.80ರಷ್ಟು ಪಾಲು ಹೊಂದಿರುವ ಕೊಳಂಬೊ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.

ಯಾವುದೇ ನೇಮಕಾತಿಯಲ್ಲಿ ಎಸ್ಸಿ(ಸಿ) ಅಡಿಯಲ್ಲಿ ಕೇವಲ ಒಂದು ಹುದ್ದೆ ಬಂದರೂ ಆ ಹುದ್ದೆಯನ್ನು ಮೊದಲು ಅಲೆಮಾರಿ ಸಮುದಾಯಗಳಿಗೆ ಮೀಸಲಿಡಲಾಗುತ್ತಿದೆ. ಇದರಿಂದ ಶೇ.80ರಷ್ಟು ಪಾಲು ಹೊಂದಿರುವ ಬಂಜಾರ, ಕೊರಚ, ಕೊರಮ ಮತ್ತು ಭೋವಿ ಸಮುದಾಯಗಳ ಅಭ್ಯರ್ಥಿಗಳಿಗೆ ಅವಕಾಶವೇ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಒಂದೆಡೆ ಕೊಳಂಬೊ ಸಮುದಾಯಗಳಿಗೆ ಎಸ್ಸಿ(ಸಿ) ಅಡಿಯಲ್ಲಿ ಶೇ.80ರಷ್ಟು ಪಾಲು ಇದೆ ಎಂದು ಹೇಳಲಾಗುತ್ತಿದ್ದರೂ, ಮತ್ತೊಂದೆಡೆ ಕಡಿಮೆ ಸಂಖ್ಯೆಯ ಹುದ್ದೆಗಳು ಬಂದಾಗಲೂ ಅಲೆಮಾರಿ ಸಮುದಾಯಗಳಿಗೆ ಮೊದಲ ಆದ್ಯತೆ ನೀಡುತ್ತಿರುವುದರಿಂದ ಕೊಳಂಬೊ ಸಮುದಾಯಗಳಿಗೆ ತಮ್ಮ ನಿಗದಿತ ಪಾಲಿನ ಪ್ರಯೋಜನ ವಾಸ್ತವವಾಗಿ ದೊರೆಯುತ್ತಿಲ್ಲ. ಈ ರೋಸ್ಟರ್ ವ್ಯವಸ್ಥೆಯು ಸಮಾನ ಅವಕಾಶದ ಉದ್ದೇಶಕ್ಕೆ ವಿರುದ್ಧವಾಗಿದೆ ಎಂದು ಅವರು ದೂರಿದರು.

ವಿಶೇಷವಾಗಿ ಕಡಿಮೆ ಸಂಖ್ಯೆಯ ಹುದ್ದೆಗಳು ಇರುವ ನೇಮಕಾತಿಗಳಲ್ಲಿ ಈ ಸಮಸ್ಯೆ ಮತ್ತಷ್ಟು ತೀವ್ರವಾಗುತ್ತಿದೆ. ಒಂದೆರಡು ಹುದ್ದೆಗಳು ಮಾತ್ರ ಲಭ್ಯವಿರುವ ಸಂದರ್ಭದಲ್ಲಿ ಎಸ್ಸಿ(ಸಿ) ಅಡಿಯಲ್ಲಿ ಒಂದೇ ಸಮುದಾಯಕ್ಕೆ ನಿರಂತರವಾಗಿ ಆದ್ಯತೆ ದೊರೆತರೆ, ಉಳಿದ ಸಮುದಾಯಗಳ ಅಭ್ಯರ್ಥಿಗಳಿಗೆ ತಮ್ಮ ಪಾಲಿನ ಅವಕಾಶ ಸಿಗದಂತಾಗುತ್ತದೆ ಎಂದು ಪ್ರತಿಭಟನಾಕಾರರು ಹೇಳಿದರು.

ಹಳೆಯ ಮೀಸಲಾತಿ ವ್ಯವಸ್ಥೆ ಜಾರಿಗೆ ಆಗ್ರಹ

ಪ್ರಸ್ತುತ ಒಳಮೀಸಲಾತಿ ವರ್ಗೀಕರಣವು ಸಾಮಾಜಿಕ ನ್ಯಾಯದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಈ ವ್ಯವಸ್ಥೆಯನ್ನು ಕೂಡಲೇ ರದ್ದುಗೊಳಿಸಿ ಹಿಂದಿನ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಮೀಸಲಾತಿ ವ್ಯವಸ್ಥೆ ಸಮರ್ಪಕವಾಗಿ ಜಾರಿಯಾಗದೆ ಬಾಕಿ ಉಳಿದಿರುವ ಸುಮಾರು 24 ಸಾವಿರ ಹುದ್ದೆಗಳನ್ನು ಭರ್ತಿ ಮಾಡಬೇಕು. ಜನಸಂಖ್ಯೆಗೆ ಅನುಗುಣವಾಗಿ ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣವನ್ನು ಶೇ.50ರಷ್ಟು ಹೆಚ್ಚಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಪ್ರಸ್ತುತ ಎಸ್ಸಿ ಒಳಮೀಸಲಾತಿ ಆಧಾರದ ಮೇಲೆ ರೂಪಿಸಿರುವ ಎಲ್ಲ ನೇಮಕಾತಿ ರೋಸ್ಟರ್‌ಗಳನ್ನು ಮರುಪರಿಶೀಲಿಸಬೇಕು. ಎಸ್ಸಿ(ಸಿ) ಅಡಿಯಲ್ಲಿ ಕೇವಲ ಒಂದು ಹುದ್ದೆ ಬಂದಾಗ ಅದನ್ನು ಸ್ವಯಂಚಾಲಿತವಾಗಿ ಅಲೆಮಾರಿ ಸಮುದಾಯಗಳಿಗೆ ಮಾತ್ರ ನೀಡುವ ವ್ಯವಸ್ಥೆಯನ್ನು ರದ್ದುಪಡಿಸಿ, ಕೊಳಂಬೊ ಸಮುದಾಯಗಳಿಗೂ ಅವರ ನಿಗದಿತ ಪಾಲಿನ ಅವಕಾಶ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಎಸ್ಸಿ ಒಳಮೀಸಲಾತಿ ಹಂಚಿಕೆ ಹಾಗೂ ಅದರ ಆಧಾರದ ನೇಮಕಾತಿ ರೋಸ್ಟರ್ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ, ಪಾರದರ್ಶಕವಾಗಿ ಹಾಗೂ ನ್ಯಾಯಯುತವಾಗಿ ಮರುಪರಿಶೀಲಿಸಬೇಕು. ಅಗತ್ಯವಿದ್ದಲ್ಲಿ ಪ್ರಸ್ತುತ ವ್ಯವಸ್ಥೆಯನ್ನು ಹಿಂಪಡೆದು, ಎಲ್ಲ ಎಸ್ಸಿ ಸಮುದಾಯಗಳಿಗೂ ಸಮಾನ ಅವಕಾಶ ದೊರೆಯುವಂತಹ ಹೊಸ ರೋಸ್ಟರ್ ವ್ಯವಸ್ಥೆ ರೂಪಿಸಬೇಕು ಎಂದು ಆಗ್ರಹಿಸಿದರು.

ಬಂಜಾರ, ಕೊರಚ, ಕೊರಮ ಮತ್ತು ಭೋವಿ ಸೇರಿದಂತೆ ಸಂಬಂಧಿತ ಎಲ್ಲ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಕುರಿತು ಸಮಗ್ರ ವೈಜ್ಞಾನಿಕ ಅಧ್ಯಯನ ನಡೆಸಿ, ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಬೇಕು. ಈ ಸಮುದಾಯಗಳ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳ ಶೈಕ್ಷಣಿಕ ಮತ್ತು ಉದ್ಯೋಗದ ಹಕ್ಕುಗಳನ್ನು ರಕ್ಷಿಸಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ಸರ್ಕಾರ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳದಿದ್ದರೆ, ಬಂಜಾರ, ಕೊರಚ, ಕೊರಮ ಮತ್ತು ಭೋವಿ ಸಮುದಾಯಗಳ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಸೇರಿದಂತೆ ಕಾನೂನುಬದ್ಧ, ಶಾಂತಿಯುತ ಹಾಗೂ ಪ್ರಜಾಸತ್ತಾತ್ಮಕ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button