ಜಿಲ್ಲಾಸುದ್ದಿಧಾರ್ಮಿಕ

ಸೆ.14ರಿಂದ ಬೀದರ್‌ನಲ್ಲಿ ಸಂಭ್ರಮದ ಗಣೇಶೋತ್ಸವ ಆಚರಣೆಗೆ ನಿರ್ಧಾರ

ಐದು ದಿನಗಳ ಉತ್ಸವಕ್ಕೆ ಸರ್ವಾನುಮತದ ತೀರ್ಮಾನ; ಸೆ.18ರಂದು ಗಣೇಶ ಮೂರ್ತಿ ವಿಸರ್ಜನೆ

ಬೀದರ್, ಆ.19: 2026ರ ಗಣೇಶ ಚತುರ್ಥಿಯನ್ನು ಅದ್ಧೂರಿಯಾಗಿ ಆಚರಿಸಲು ಬೀದರ್‌ನಲ್ಲಿ ಗಣೇಶ ಮಹಾ ಮಂಡಳದ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಯಿತು. ಐತಿಹಾಸಿಕ ರಾಮಮಂದಿರದಲ್ಲಿ ನಡೆದ ಸಭೆಯಲ್ಲಿ ಈ ವರ್ಷದ ಗಣೇಶ ಚತುರ್ಥಿಯು ಸೆಪ್ಟೆಂಬರ್ 14ರಂದು ನಡೆಯಲಿದ್ದು, ಅಂದು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಸೆಪ್ಟೆಂಬರ್ 18ರಂದು ವಿಸರ್ಜನೆ ನೆರವೇರಿಸಲು ನಿರ್ಧರಿಸಲಾಯಿತು. ಇದರೊಂದಿಗೆ ಐದು ದಿನಗಳ ಸಂಭ್ರಮದ ಗಣೇಶೋತ್ಸವ ಆಚರಣೆಗೆ ಸಿದ್ಧತೆ ಕೈಗೊಳ್ಳಲಾಗುತ್ತಿದೆ.

ಗಣೇಶ ಮಹಾ ಮಂಡಳದ ಗೌರವಾಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಅಧ್ಯಕ್ಷರಾಗಿ ಚಂದ್ರಶೇಖರ ಪಾಟೀಲ ಗಾದಗಿ, ಪ್ರಧಾನ ಕಾರ್ಯದರ್ಶಿಯಾಗಿ ಬಾಬು ವಾಲಿ ಅವರನ್ನು ಆಯ್ಕೆ ಮಾಡಲಾಯಿತು.

ಗಣೇಶ ಮಹಾ ಮಂಡಳದ ಪ್ರಧಾನ ಕಾರ್ಯದರ್ಶಿ ಬಾಬು ವಾಲಿ ಮಾತನಾಡಿ, ಪ್ರತಿವರ್ಷ ಗಣೇಶೋತ್ಸವಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಪ್ರಕಾಶ ನಂದಗೌಳಿ ಹಾಗೂ ನಾಗಶೆಟ್ಟಿ ಧರಂಪೂರೆ ಅವರ ಹೆಸರನ್ನು ಈ ವರ್ಷದ ವೇದಿಕೆಗೆ ಇಡಬೇಕು ಎಂದು ಪ್ರಸ್ತಾಪಿಸಿದರು. ಇದಕ್ಕೆ ಎಲ್ಲ ಪದಾಧಿಕಾರಿಗಳು ಹಾಗೂ ಸಾರ್ವಜನಿಕ ಗಣೇಶ ಮಂಡಳಗಳ ಅಧ್ಯಕ್ಷರು ಮತ್ತು ಸದಸ್ಯರು ಸಮ್ಮತಿ ಸೂಚಿಸಿದರು.

ಐದು ದಿನಗಳ ಗಣೇಶ ಪ್ರತಿಷ್ಠಾಪನಾ ಕಾರ್ಯಕ್ರಮದ ಸಂದರ್ಭದಲ್ಲಿ ಸೆಪ್ಟೆಂಬರ್ 17ರಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ನಡೆಯಲಿದೆ. ಅಂದು ಎಲ್ಲ ಸಾರ್ವಜನಿಕ ಗಣೇಶ ಮಂಡಳಗಳು ಧ್ವಜಾರೋಹಣ ನೆರವೇರಿಸಬೇಕು. ಕಲ್ಯಾಣ ಕರ್ನಾಟಕವನ್ನು ಸ್ವಾತಂತ್ರ್ಯಗೊಳಿಸಲು ಹೋರಾಡಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಸಾರ್ವಜನಿಕರಲ್ಲಿ ಒಗ್ಗಟ್ಟು ಮೂಡಿಸಲು ದೇಶದಾದ್ಯಂತ ಗಣೇಶ ಚತುರ್ಥಿ ಆಚರಣೆಗೆ ಪ್ರೇರಣೆ ನೀಡಿದ ಬಾಲ ಗಂಗಾಧರ ತಿಲಕರ ಭಾವಚಿತ್ರಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು.

ಐದು ದಿನಗಳ ಕಾಲ ಗಣೇಶೋತ್ಸವದಲ್ಲಿ ಭಕ್ತಿ ಗೀತೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಮೆರವಣಿಗೆ ಸಂದರ್ಭದಲ್ಲಿ ಚಲನಚಿತ್ರದ ಹಾಡುಗಳನ್ನು ಬಳಸದೆ ದೇಶಭಕ್ತಿ ಮತ್ತು ದೇವರ ಭಕ್ತಿಗೀತೆಗಳನ್ನು ಮಾತ್ರ ಪ್ರಸಾರ ಮಾಡಬೇಕು ಎಂದು ಸೂಚಿಸಲಾಯಿತು. ಸಾರ್ವಜನಿಕ ಗಣೇಶ ಮಂಡಳಿಗಳಿಗೆ ಅಗತ್ಯವಿರುವ ಅನುಮತಿಗಳನ್ನು ಗಣೇಶ ಮಹಾ ಮಂಡಳದ ವತಿಯಿಂದ ಪಡೆದುಕೊಳ್ಳಲಾಗುವುದು ಎಂದು ತಿಳಿಸಲಾಯಿತು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಚಂದ್ರಶೇಖರ ಪಾಟೀಲ ಗಾದಗಿ ಮಾತನಾಡಿ, ಈ ಬಾರಿ ಗಣೇಶೋತ್ಸವವನ್ನು ಹಿಂದಿನ ವರ್ಷಗಳಿಗಿಂತಲೂ ಅದ್ಧೂರಿಯಾಗಿ ಆಚರಿಸೋಣ. ತಮ್ಮನ್ನು ಪುನರಾಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಗಣೇಶ ವಿಸರ್ಜನೆ ದಿನದಂದು ಎಲ್ಲ ಗಣೇಶ ಮಂಡಳಗಳು ನಿಗದಿತ ಸಮಯಕ್ಕೆ ಸರಿಯಾಗಿ ಗಣೇಶ ಮೂರ್ತಿಗಳನ್ನು ತರಬೇಕು ಎಂದು ಮನವಿ ಮಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ನಂದಕಿಶೋರ್ ವರ್ಮಾ ಮಾತನಾಡಿ, ಈ ವರ್ಷದ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವುದರ ಜೊತೆಗೆ ಸರ್ಕಾರದ ಎಲ್ಲ ನಿಯಮಗಳನ್ನು ಸಾಧ್ಯವಾದಷ್ಟು ಕಟ್ಟುನಿಟ್ಟಾಗಿ ಪಾಲಿಸಬೇಕು. ಯುವಕರು ಐದು ದಿನಗಳ ಕಾಲ ಶ್ರಮಿಸಿ ಜಿಲ್ಲಾಡಳಿತದ ಸೂಚನೆ ಹಾಗೂ ಸಮಯ ಪಾಲನೆ ಮಾಡಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ಗಣೇಶ ಮಹಾ ಮಂಡಳದ ವಿವಿಧ ಪದಾಧಿಕಾರಿಗಳು, ಕಾರ್ಯದರ್ಶಿಗಳು, ಸ್ವಾಗತ ಸಮಿತಿ, ನಗರ ಅಲಂಕಾರ ಸಮಿತಿ ಹಾಗೂ ಮೆರವಣಿಗೆ ಸಮಿತಿಗಳಿಗೆ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಪ್ರತಿವರ್ಷ ಗಣೇಶೋತ್ಸವಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ, ಅಗಲಿದ ಪ್ರಕಾಶ ನಂದಗೌಳಿ ಹಾಗೂ ನಾಗಶೆಟ್ಟಿ ಧರಂಪೂರೆ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಒಂದು ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button