ಶಿಕ್ಷಣ

ವಿದ್ಯಾರ್ಥಿಗಳು ಕೇವಲ ಪಠ್ಯಾಧಾರಿತ ಜ್ಞಾನಕ್ಕೆ ಸೀಮಿತಗೊಳ್ಳಬೇಡಿ: ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ

ಪ್ರಾಯೋಗಿಕ ಕೌಶಲ್ಯ, ನಾವೀನ್ಯತೆ ಮತ್ತು ನಿರಂತರ ಕಲಿಕೆಯ ಮನೋಭಾವ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ

ಕಲಬುರಗಿ, ಆ. 19: ವಿದ್ಯಾರ್ಥಿಗಳು ಕೇವಲ ಪಠ್ಯಾಧಾರಿತ ಜ್ಞಾನಕ್ಕೆ ಸೀಮಿತವಾಗದೆ, ಪ್ರಾಯೋಗಿಕ ಕೌಶಲ್ಯ, ನಾವೀನ್ಯತೆ ಹಾಗೂ ನಿರಂತರ ಕಲಿಕೆಯ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಗಣಿತ ವಿಭಾಗದ ವತಿಯಿಂದ ಕಂಪ್ಯೂಟಿಂಗ್ ಪ್ರಯೋಗಾಲಯ, ಹೈ ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ (ಎಚ್‌ಪಿಸಿ) ಪ್ರಯೋಗಾಲಯ ಹಾಗೂ ರಾಷ್ಟ್ರೀಯ ಉನ್ನತ ಗಣಿತ ಮಂಡಳಿ (ಎನ್‌ಬಿಎಚ್‌ಎಂ) ಗ್ರಂಥಾಲಯವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಬಿ.ಟೆಕ್. ಗಣಿತ ಹಾಗೂ ಕಂಪ್ಯೂಟಿಂಗ್ ವಿದ್ಯಾರ್ಥಿಗಳಿಗಾಗಿ ದೇಶ ಹಾಗೂ ವಿದೇಶಗಳಲ್ಲಿ ಲಭ್ಯವಿರುವ ವೃತ್ತಿ ಮತ್ತು ಉನ್ನತ ಶಿಕ್ಷಣದ ಅವಕಾಶಗಳ ಕುರಿತು ಮಾರ್ಗದರ್ಶನ ನೀಡುವ ‘ವೃತ್ತಿ ಮಾರ್ಗದರ್ಶಿ’ ಪುಸ್ತಕವನ್ನು ಬಿಡುಗಡೆ ಮಾಡಿದರು.

ವಿದ್ಯಾರ್ಥಿಗಳು ಹೊಸ ಚಿಂತನೆಯೊಂದಿಗೆ ನಾವೀನ್ಯತೆ, ಸಂಶೋಧನೆ ಹಾಗೂ ಉದ್ಯಮಶೀಲತೆಯ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರಬೇಕು. ಸೃಜನಶೀಲತೆ, ತಂತ್ರಜ್ಞಾನ, ಹೊಸ ಆಲೋಚನೆಗಳು ಹಾಗೂ ನವೋದ್ಯಮಗಳ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.

ಪ್ರಧಾನಮಂತ್ರಿಯವರ ‘ವಿಕಸಿತ ಭಾರತ@2047’ ಆಶಯವನ್ನು ಸಾಕಾರಗೊಳಿಸುವಲ್ಲಿ ಯುವ ಮನಸ್ಸುಗಳ ಸಂಶೋಧನೆ ಮತ್ತು ನಾವೀನ್ಯತೆ ಮಹತ್ವದ ಪಾತ್ರ ವಹಿಸಲಿದೆ ಎಂದು ಅವರು ಹೇಳಿದರು.

ಮುಂದುವರಿದ ಕಲಿಕೆ, ಸಂಶೋಧನೆ ಹಾಗೂ ಕೌಶಲ್ಯಾಭಿವೃದ್ಧಿಗಾಗಿ ಕಂಪ್ಯೂಟಿಂಗ್ ಪ್ರಯೋಗಾಲಯ, ಎಚ್‌ಪಿಸಿ ಪ್ರಯೋಗಾಲಯ ಹಾಗೂ ಎನ್‌ಬಿಎಚ್‌ಎಂ ಗ್ರಂಥಾಲಯದ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗಣಿತ ವಿಭಾಗದ ಮುಖ್ಯಸ್ಥ ಪ್ರೊ. ಜಿ. ಜನಾರ್ದನ ರೆಡ್ಡಿ ಸ್ವಾಗತಿಸಿ, ನೂತನವಾಗಿ ಸ್ಥಾಪಿಸಲಾದ ಸೌಲಭ್ಯಗಳ ಮಹತ್ವ ಹಾಗೂ ಅವುಗಳ ಶೈಕ್ಷಣಿಕ ಮತ್ತು ಸಂಶೋಧನಾ ಬಳಕೆಯ ಕುರಿತು ವಿವರಿಸಿದರು.

ಪರೀಕ್ಷಾ ನಿಯಂತ್ರಕ ಪ್ರೊ. ಭರತ್ ಕುಮಾರ್, ಭೌತ ವಿಜ್ಞಾನ ನಿಕಾಯದ ಡೀನ್ ಪ್ರೊ. ರಾಜೀವ್ ಶೇಷ ಜೋಶಿ ಹಾಗೂ ಕೇಂದ್ರ ಗ್ರಂಥಪಾಲಕ ಡಾ. ಪಿ.ಎಸ್. ಕಟ್ಟಿಮನಿ ಮಾತನಾಡಿದರು.

ಕಾರ್ಯಕ್ರಮವು ವಂದೇ ಮಾತರಂನೊಂದಿಗೆ ಆರಂಭವಾಗಿ ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಯಿತು. ಡಾ. ಮೇಘಾ ಖಂಡೇಲ್ವಾಲ್ ನಿರೂಪಿಸಿದರು. ಡಾ. ಸುಮુખ ಎಸ್. ವಂದಿಸಿದರು.

ಗಣಿತ ವಿಭಾಗದ ಡಾ. ಎನ್. ಸಂದೀಪ್, ಡಾ. ಶ್ರೀನಿವಾಸುಲು ಬಲ್ಲೆಮ್, ಡಾ. ರಂಗನಾಥ್ ಡಿ., ಡಾ. ಸಮೀರ್ ಕರ್, ಡಾ. ದೇವಿಕಾ ದಾಬ್ಕೆ, ತಾಂತ್ರಿಕ ಸಹಾಯಕ ಶ್ರೀ ಶಶಿಕಾಂತ್ ಸೇರಿದಂತೆ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button