
ಕಲಬುರಗಿ, ಆ.19: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಡೋರ್ ಕಕ್ಕಯ್ಯ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಡೋರ್ ಕಕ್ಕಯ್ಯ ಸಮಾಜದ ಸೀನಿಯರ್ ಸಿಟಿಜನ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಡಾ. ಮಹಾದೇವ ಎ. ಕಾವಳೆ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ, ಯಾದಗಿರಿ, ಬೀದರ್, ವಿಜಯಪುರ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ 2025-26ನೇ ಸಾಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಎಸ್‌ಎಸ್‌ಎಲ್‌ಸಿಯಲ್ಲಿ ಶೇ.75ಕ್ಕಿಂತ ಹೆಚ್ಚು, ಪಿಯುಸಿ ದ್ವಿತೀಯ ವರ್ಷದಲ್ಲಿ ಶೇ.70ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಲ್ಲದೆ, ಬಿಎ, ಬಿಎಸ್ಸಿ, ಬಿಕಾಂ, ಎಂಎ, ಎಂಕಾಂ, ಎಂಎಸ್ಸಿ ಸೇರಿದಂತೆ ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದವರನ್ನು ಪುರಸ್ಕರಿಸಲಾಗುವುದು ಎಂದರು.
ವೈದ್ಯಕೀಯ ಶಿಕ್ಷಣದ ಎಂ.ಬಿ.ಬಿ.ಎಸ್., ಬಿಎಎಂಎಸ್, ಬಿಎಚ್‌ಎಂಎಸ್, ಬಿಡಿಎಸ್, ಬಿಎಸ್, ಎಂಡಿ, ನರ್ಸಿಂಗ್ ಸೇರಿದಂತೆ ವಿವಿಧ ಕೋರ್ಸ್‌ಗಳಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದವರು, ಎಂಜಿನಿಯರಿಂಗ್, ಜೆಇಇ, ಐಐಟಿ-ಯುಜಿ, ನೀಟ್ ಹಾಗೂ ಸಿಎ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರು ಮತ್ತು ಹೊಸದಾಗಿ ಸರ್ಕಾರಿ ಗೆಜೆಟೆಡ್ ಹುದ್ದೆಗೆ ಆಯ್ಕೆಯಾದವರನ್ನೂ ಸನ್ಮಾನಿಸಲಾಗುವುದು ಎಂದು ಹೇಳಿದರು.
ಪುರಸ್ಕಾರಕ್ಕೆ ಅರ್ಹರಾಗಿರುವ ವಿದ್ಯಾರ್ಥಿಗಳು ಒಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಆಧಾರ್ ಕಾರ್ಡ್ ಹಾಗೂ ಅಂಕಪಟ್ಟಿಯ ಪ್ರತಿಯನ್ನು ಸಂಘದ ಕಾರ್ಯದರ್ಶಿ ಬೀರರಾಮ್ ವಿನ ಜೋಗದನಕರ್ ಅವರ ವಾಟ್ಸ್‌ಆ್ಯಪ್ ಸಂಖ್ಯೆಗೆ ಅಥವಾ ಸಂಘದ ಅಧ್ಯಕ್ಷ ಮಹಾದೇವ ಕಾವಳೆ ಅವರ ವಾಟ್ಸ್‌ಆ್ಯಪ್ ಸಂಖ್ಯೆಗೆ ಆಗಸ್ಟ್ 25ರೊಳಗೆ ಕಳುಹಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಗುಂಡಪ್ಪ ಗಾಯದನಕರ್, ಶಿವರಾಮ ಗಜಕೋಶ, ಕಾರ್ಯದರ್ಶಿ ಬೀರರಾಮ್ ಬೋಗದನಕರ್, ಸಹ ಕಾರ್ಯದರ್ಶಿ ಮನೋಹರ ಎನ್. ಗಾದರೆ, ಸಂಘಟನಾ ಕಾರ್ಯದರ್ಶಿ ಶಾಮರಾವ್ ಎಸ್. ಕಟಕ ಹಾಗೂ ಕ್ಷೇಮಲಿಂಗ ಪಿ. ಜಗರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.



