ಸಮಾಜ

ಅನಾಚಾರ ಪದ್ಧತಿಯನ್ನು ನಾಗರಿಕ ಸಮಾಜ ತಡೆಹಿಡಿಯಬೇಕು: ನಿಂಬರ್ಗಾ

ಅನಾಥ ಮಕ್ಕಳಿಗೆ ಹಾಲು, ಹಣ್ಣು ನೀಡುವ ಮೂಲಕ ಬಸವ ಪಂಚಮಿ ಆಚರಣೆ

ಕಲಬುರಗಿ, ಆ.18: ವಿವಿಧ ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಅನಾಚಾರ ಪದ್ಧತಿಗಳನ್ನು ಆಚರಿಸುವುದನ್ನು ನಾಗರಿಕ ಸಮಾಜ ತಡೆಹಿಡಿಯಬೇಕು ಎಂದು ಸಾಮಾಜಿಕ ಹೋರಾಟಗಾರ ಅಲ್ಲಮಪ್ರಭು ನಿಂಬರ್ಗಾ ಹೇಳಿದರು.

ನಗರಪಂಚಮಿ ಹಬ್ಬದ ಅಂಗವಾಗಿ ಮಾನವ ಬಂಧುತ್ವ ವೇದಿಕೆ, ಕಲ್ಯಾಣ ಕರ್ನಾಟಕ ಜನ ಜಾಗೃತಿ ವೇದಿಕೆ, ಸ್ಲಂ ಜನರ ಸಂಘಟನೆ ಹಾಗೂ ರಕ್ಷಿತಾ ಇಂಟಿಗ್ರೇಟೆಡ್ ರೂರಲ್ ಆ್ಯಂಡ್ ಅರ್ಬನ್ ಡೆವಲಪ್‌ಮೆಂಟ್ ಸೊಸೈಟಿ ವತಿಯಿಂದ ಹಮ್ಮಿಕೊಂಡಿದ್ದ ಬಸವ ಪಂಚಮಿ ಕಾರ್ಯಕ್ರಮದ ನಿಮಿತ್ತ ಕಿವುಡ ಹಾಗೂ ಮೂಕ ವಿದ್ಯಾರ್ಥಿಗಳಿಗೆ ಹಾಲು, ಹಣ್ಣು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅನೇಕ ಅನಾಥ ಮಕ್ಕಳು ಹಾಗೂ ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇಂತಹವರನ್ನು ಗುರುತಿಸಿ ಅವರಿಗೆ ಹಾಲು, ಹಣ್ಣು ಹಾಗೂ ಉಪಹಾರ ನೀಡುವ ಮೂಲಕ ನೆರವಾಗಬೇಕು. ಇದನ್ನು ಬಿಟ್ಟು ಕೆಲವೆಡೆ ಅನಾಚಾರದ ಹೆಸರಿನಲ್ಲಿ ಹುತ್ತ, ಕಲ್ಲುಗಳಿಗೆ ಹಾಲು ಎರೆಯುವುದು ಮೂಢನಂಬಿಕೆಯಿಂದ ಕೂಡಿದ ಪದ್ಧತಿಯಾಗಿದೆ ಎಂದು ಅವರು ಹೇಳಿದರು.

ಲಕ್ಷಗಟ್ಟಲೆ ಲೀಟರ್ ಹಾಲನ್ನು ಮಣ್ಣುಪಾಲು ಮಾಡುವುದು ನಿಜಕ್ಕೂ ದುಃಖದ ಸಂಗತಿ. ದೇವರ ಹೆಸರಿನಲ್ಲಿ ಅನಾಚಾರ ನಡೆಸುವುದು ಸರಿಯಲ್ಲ. ಅದೇ ದೇವರ ಹೆಸರಿನಲ್ಲಿ ಬಡವರಿಗೆ ಹಾಲು, ಹಣ್ಣು ನೀಡಿದರೆ ಅದು ದೇವರಿಗೆ ಸಲ್ಲಿಸುವ ನಿಜವಾದ ಸೇವೆಯಾಗಬಹುದು. ಹೀಗಾಗಿ ಅರ್ಥಹೀನ ಆಚರಣೆಗಳನ್ನು ಬದಿಗೊತ್ತಿ ಸಮಾಜಮುಖಿ ಕಾರ್ಯಗಳಿಗೆ ಆದ್ಯತೆ ನೀಡಬೇಕು ಎಂದು ನಿಂಬರ್ಗಾ ಕರೆ ನೀಡಿದರು.

2018ರಲ್ಲಿ ಗದಗದ ಸಿದ್ಧಲಿಂಗ ಶಿವಯೋಗಿ ಸ್ವಾಮೀಜಿ ಅವರು ಇಂತಹ ಅನಾಚಾರ ಪದ್ಧತಿಗೆ ವಿರೋಧವಾಗಿ ಅನಾಥ ಮಕ್ಕಳಿಗೆ ಹಾಲು, ಹಣ್ಣು ವಿತರಿಸುವ ಮೂಲಕ ಜನಜಾಗೃತಿ ಮೂಡಿಸಿದ್ದರು. ಅದೇ ಆಶಯವನ್ನು ಮುಂದುವರಿಸಿಕೊಂಡು ನಾಗರಿಕ ಸಮಾಜ ಒಗ್ಗಟ್ಟಿನಿಂದ ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಗುರುಣ್ಣ ಐನಾಪುರ, ಸುರೇಶ್ ಕಟ್ಟಿಮನಿ, ಸಂಜೀವಕುಮಾರ್ ಕಾಂಬಳೆ, ಪತ್ರಕರ್ತರಾದ ಚಿದಾನಂದ ರೂಲೆ, ಮಲ್ಲಿಕಾರ್ಜುನ ಕೆರಮಗಿ, ಅರುಣಕುಮಾರ್ ತವಡೆ, ಲಕ್ಷ್ಮಣ ಪಾಳಾ, ಸಂತೋಷ ಜಾಧವ್, ಸುಮಿತ್ ಕಾಂಬಳೆ, ಬ್ರಹ್ಮಾನಂದ ಮಿಂಚ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button