ಪೆಟ್ರೋಲ್ ಪಂಪ್‌ವರೆಗೆ ದಾರಿದೀಪ ಅಳವಡಿಕೆಗೆ ಆಗ್ರಹ: ಆ.25ರಂದು ರಾಮಮಂದಿರ ಕ್ರಾಸ್‌ನಲ್ಲಿ ರಸ್ತೆ ತಡೆ
ಕತ್ತಲಿನಿಂದ ಅಪಘಾತ, ದರೋಡೆ ಭೀತಿ; ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ

ಕಲಬುರಗಿ, ಆ.18: ನಗರದ ರಾಮಮಂದಿರ ಸರ್ಕಲ್‌ನಿಂದ ಇಂಡಿಯನ್ ಪೆಟ್ರೋಲ್ ಪಂಪ್‌ವರೆಗೆ ಇರುವ ರಸ್ತೆಯಲ್ಲಿ ದಾರಿದೀಪಗಳನ್ನು ಕೂಡಲೇ ಕಾರ್ಯಗತಗೊಳಿಸಿ ಸಾರ್ವಜನಿಕರು, ಪ್ರಯಾಣಿಕರು, ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಬೇಕು. ಬೇಡಿಕೆ ಈಡೇರದಿದ್ದರೆ ಆಗಸ್ಟ್ 25ರಂದು ರಾಮಮಂದಿರ ಕ್ರಾಸ್‌ನಲ್ಲಿ ರಸ್ತೆ ತಡೆ ನಡೆಸಲಾಗುವುದು ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಪವನಕುಮಾರ್ ಬಿ. ವಳಕೇರಿ ಎಚ್ಚರಿಸಿದ್ದಾರೆ.
ಈ ಕುರಿತು ನಗರದ ವೆಂಕಟೇಶ ನಗರದಲ್ಲಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ಅನುಷ್ಠಾನ ಘಟಕದ ಯೋಜನಾ ನಿರ್ದೇಶಕರಿಗೆ ಮತ್ತೊಮ್ಮೆ ಪತ್ರ ಬರೆದಿರುವ ಅವರು, ರಾಮಮಂದಿರ ಸರ್ಕಲ್‌ನಿಂದ ಇಂಡಿಯನ್ ಪೆಟ್ರೋಲ್ ಪಂಪ್‌ವರೆಗೆ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಸುಮಾರು 24 ದಾರಿದೀಪಗಳ 11 ಕಂಬಗಳಿಗೆ ಬಲ್ಬ್‌ಗಳನ್ನು ಅಳವಡಿಸಿ ಬೆಳಕಿನ ವ್ಯವಸ್ಥೆ ಕಲ್ಪಿಸಿದರೆ ಸಾರ್ವಜನಿಕರು, ಪಾದಚಾರಿಗಳು ಹಾಗೂ ಬೆಂಗಳೂರು, ಮೈಸೂರು, ಧಾರವಾಡ ಸೇರಿದಂತೆ ವಿವಿಧ ನಗರ ಮತ್ತು ಗ್ರಾಮಗಳಿಗೆ ಬಸ್ ಮೂಲಕ ಸಂಚರಿಸುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಈ ರಸ್ತೆಯ ಬಹುತೇಕ ಭಾಗ ಕತ್ತಲಿನಿಂದ ಕೂಡಿದ್ದು, ರಾತ್ರಿ ವೇಳೆ ಸಾರ್ವಜನಿಕರು ಹಾಗೂ ವಾಹನ ಸವಾರರು ಆತಂಕದಿಂದ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕತ್ತಲಿನ ಪ್ರಯೋಜನ ಪಡೆದು ದರೋಡೆ ಸೇರಿದಂತೆ ಇತರ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆಯಿದ್ದು, ಇಂತಹ ಘಟನೆಗಳು ಸಂಭವಿಸಿದರೆ ಸಾರ್ವಜನಿಕರ ಜತೆಗೆ ಪೊಲೀಸ್ ಇಲಾಖೆಯವರಿಗೂ ಹೆಚ್ಚುವರಿ ತೊಂದರೆ ಉಂಟಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸದೆ, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ರಾಮಮಂದಿರ ಸರ್ಕಲ್‌ನಿಂದ ಇಂಡಿಯನ್ ಪೆಟ್ರೋಲ್ ಪಂಪ್‌ವರೆಗೆ ಇರುವ ದಾರಿದೀಪಗಳ ಕಂಬಗಳಿಗೆ ಕೂಡಲೇ ಬಲ್ಬ್‌ಗಳನ್ನು ಅಳವಡಿಸಿ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಪವನಕುಮಾರ್ ವಳಕೇರಿ ಒತ್ತಾಯಿಸಿದ್ದಾರೆ.
ಈ ಕುರಿತು ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ದೂರವಾಣಿ ಮೂಲಕ ಈಗಾಗಲೇ ಮಾಹಿತಿ ನೀಡಿದ್ದರೂ, ಇದುವರೆಗೆ ದಾರಿದೀಪಗಳ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೆಟ್ರೋಲ್ ಪಂಪ್‌ನಿಂದ ಕೋಟನೂರಿನ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿವರೆಗೆ ಮಾತ್ರ ದಾರಿದೀಪಗಳ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಮಮಂದಿರ ಸರ್ಕಲ್‌ನಿಂದ ಇಂಡಿಯನ್ ಪೆಟ್ರೋಲ್ ಪಂಪ್‌ವರೆಗೆ ದಾರಿದೀಪಗಳ ವ್ಯವಸ್ಥೆಯನ್ನು ಕೂಡಲೇ ಕಾರ್ಯಗತಗೊಳಿಸಬೇಕು. ಇಲ್ಲವಾದರೆ ಆಗಸ್ಟ್ 25ರಂದು ರಾಮಮಂದಿರ ಕ್ರಾಸ್‌ನಲ್ಲಿ ರಸ್ತೆ ತಡೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಪವನಕುಮಾರ್ ಬಿ. ವಳಕೇರಿ ಎಚ್ಚರಿಸಿದ್ದಾರೆ.



