ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಕಲಬುರಗಿಯಲ್ಲಿ ಬಿಎಂಎಸ್ ಪ್ರತಿಭಟನೆ
ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ

ಕಲಬುರಗಿ, ಆ.17: ರಾಜ್ಯ ಸರ್ಕಾರವು ಮೇ ತಿಂಗಳಲ್ಲಿ ಹೊರಡಿಸಿರುವ ಕನಿಷ್ಠ ವೇತನದ ಅಧಿಸೂಚನೆಯನ್ನು ಯಾವುದೇ ವಿಳಂಬವಿಲ್ಲದೆ ತಕ್ಷಣ ಜಾರಿಗೆ ತರಬೇಕು ಸೇರಿದಂತೆ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತೀಯ ಮಜ್ದೂರ್ ಸಂಘದ (ಬಿಎಂಎಸ್) ಜಿಲ್ಲಾ ಘಟಕದ ವತಿಯಿಂದ ಸೋಮವಾರ ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಸರ್ದಾರ್ ವಲ್ಲಭಭಾಯಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಕಾರ್ಮಿಕರು, ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಮೇ ತಿಂಗಳಲ್ಲಿ ಹೊರಡಿಸಿರುವ ಕನಿಷ್ಠ ವೇತನದ ಅಧಿಸೂಚನೆಯನ್ನು ಹಿಂಪಡೆಯದೆ ತಕ್ಷಣ ಜಾರಿಗೆ ತರಬೇಕು. ಇಪಿಎಫ್ ಪಿಂಚಣಿಯನ್ನು ₹1,000ರಿಂದ ₹7,500ಕ್ಕೆ ಹೆಚ್ಚಿಸಬೇಕು. ಇಎಸ್ಐ ವ್ಯಾಪ್ತಿಯ ವೇತನ ಮಿತಿಯನ್ನು ₹21,000ರಿಂದ ₹42,000ಕ್ಕೆ ಹಾಗೂ ಇಪಿಎಫ್ ವೇತನ ಮಿತಿಯನ್ನು ₹15,000ರಿಂದ ₹30,000ಕ್ಕೆ ಹೆಚ್ಚಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬೋನಸ್ ಮಿತಿಯನ್ನು ₹7,000ರಿಂದ ₹18,000ಕ್ಕೆ ಹೆಚ್ಚಿಸಬೇಕು. ಉಪದಾನದ ಅವಧಿಯನ್ನು 15 ದಿನಗಳಿಂದ ಒಂದು ತಿಂಗಳಿಗೆ ಹಾಗೂ ಗರಿಷ್ಠ ಮಿತಿಯನ್ನು ₹20 ಲಕ್ಷದಿಂದ ₹40 ಲಕ್ಷಕ್ಕೆ ಹೆಚ್ಚಿಸಬೇಕು. ಇಪಿಎಫ್ ಹೆಚ್ಚುವರಿ ಪಿಂಚಣಿ ಸೌಲಭ್ಯವನ್ನು ಎಲ್ಲ ವಿಭಾಗಗಳ ಕಾರ್ಮಿಕರಿಗೂ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಅಂಗನವಾಡಿ, ಆಶಾ ಹಾಗೂ ಬಿಸಿಯೂಟ ಕಾರ್ಮಿಕರ ಮಾಸಿಕ ಗೌರವಧನ ಹೆಚ್ಚಿಸಿ ಅವರನ್ನು ಖಾಯಂಗೊಳಿಸಬೇಕು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಾರಕ್ಕೆ ಐದು ದಿನಗಳ ಕೆಲಸದ ಪದ್ಧತಿ ಜಾರಿಗೆ ತರಬೇಕು. ಆರೋಗ್ಯ ಇಲಾಖೆಯ ಒಳ ಹಾಗೂ ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕು ಎಂದು ಮನವಿ ಮಾಡಿದರು.
ಸರ್ಕಾರಿ ಇಲಾಖೆಗಳ ಒಳ ಹಾಗೂ ಹೊರಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ಕೈಬಿಡಬೇಕು. ಕಟ್ಟಡ ಕಾರ್ಮಿಕರ ಮಂಡಳಿಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ತನಿಖೆ ನಡೆಸಬೇಕು ಸೇರಿದಂತೆ ಕಾರ್ಮಿಕರ ಹಿತಾಸಕ್ತಿಗೆ ಸಂಬಂಧಿಸಿದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಭಾರತೀಯ ಮಜ್ದೂರ್ ಸಂಘದ ಜಿಲ್ಲಾಧ್ಯಕ್ಷ ಶ್ರೀಕಾಂತ ಸ್ವಾಮಿ, ಕಾರ್ಯದರ್ಶಿ ಸಂತೋಷ್ ಕುಂಗಿ, ಸಹ ಕಾರ್ಯದರ್ಶಿ ಶಿವರಾಜ್ ವಾರಿಕ್, ಹಿರಿಯರಾದ ಶಂಕರ ಸುಲೇಗಾಂವ್, ಸುಗುಣಾ ಅವಂತಿ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.



