ಕಲೆಸಾಂಸ್ಕೃತಿಕ

ನೃತ್ಯದಿಂದ ಮಕ್ಕಳಲ್ಲಿ ಸಂಸ್ಕಾರ ಬೆಳೆಸಲು ಸಾಧ್ಯ: ಡಾ. ಶಶಿಧರ ನರೇಂದ್ರ

ನೃತ್ಯ ಕೇವಲ ಮನರಂಜನೆಯ ಕಲೆಯಲ್ಲ; ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಜೀವನಮೌಲ್ಯಗಳನ್ನು ಪರಿಚಯಿಸುವ ಮಾಧ್ಯಮ

ಕಲಬುರಗಿ, ಆ.16: ನೃತ್ಯಾಭ್ಯಾಸದಿಂದ ಮಕ್ಕಳಲ್ಲಿ ಶಿಸ್ತು, ಏಕಾಗ್ರತೆ, ಸಮಯಪ್ರಜ್ಞೆ, ಗುರು-ಹಿರಿಯರ ಗೌರವ ಹಾಗೂ ಉತ್ತಮ ಸಂಸ್ಕಾರಗಳನ್ನು ಬೆಳೆಸಲು ಸಾಧ್ಯ. ನೃತ್ಯ ಕಲಿಯುವ ಮಕ್ಕಳು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಜೀವನಮೌಲ್ಯಗಳನ್ನು ಅರಿತುಕೊಳ್ಳುವುದರ ಜೊತೆಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾರೆ ಎಂದು ಸಂಸ್ಕಾರ ಭಾರತಿಯ ಕರ್ನಾಟಕ ಉತ್ತರ ಪ್ರಾಂತದ ಪ್ರಧಾನ ಕಾರ್ಯದರ್ಶಿ ಡಾ. ಶಶಿಧರ ನರೇಂದ್ರ ಹೇಳಿದರು.

ಸಂಸ್ಕಾರ ಭಾರತಿ ಹಾಗೂ ನೂಪುರ ಸಂಸ್ಕೃತಿ ನೃತ್ಯ ಮತ್ತು ಸಂಗೀತ ಸಂಸ್ಥೆಯ ಸಹಯೋಗದಲ್ಲಿ ನಗರದ ಮರಾಠಿ ಸಾಹಿತ್ಯ ಮಂಡಳಿಯ ಆವರಣದಲ್ಲಿ ನಡೆದ ಗುರು ವಂದನಾ, ನಟರಾಜ ಪೂಜನೆ ಹಾಗೂ ಗೆಜ್ಜೆ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೃತ್ಯವು ಕೇವಲ ಮನರಂಜನೆಯ ಕಲೆಯಲ್ಲ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಮಕ್ಕಳಿಗೆ ಪರಿಚಯಿಸುವ ಮಹತ್ವದ ಕಲಾ ಮಾಧ್ಯಮವಾಗಿದೆ ಎಂದು ಹೇಳಿದರು.

ನೃತ್ಯ ಹಾಗೂ ಸಂಗೀತದಂತಹ ಕಲೆಗಳು ಮಕ್ಕಳಲ್ಲಿ ಆತ್ಮವಿಶ್ವಾಸ, ಶಿಸ್ತು ಮತ್ತು ಸೃಜನಶೀಲತೆಯನ್ನು ಬೆಳೆಸುತ್ತವೆ. ಇಂತಹ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸುವುದರಿಂದ ಅವರ ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಂಗೀತ ಕಲಾವಿದೆ ಹಾಗೂ ಶಾರದಾ ಸಂಗೀತ ಕೇಂದ್ರದ ಅಧ್ಯಕ್ಷೆ ಸಂಗೀತ ಶಿಕ್ಷಕಿ ಸುನಂದಾ ಸಾಲವಾಡಗಿ ಅವರ ನೇತೃತ್ವದಲ್ಲಿ ತಬಲಾ ವಾದಕ ರಾಘವೇಂದ್ರ ಕುಲಕರ್ಣಿ ಅವರ ಸಹಕಾರದೊಂದಿಗೆ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಪ್ರಾಧ್ಯಾಪಕಿ ಸುನಂದಾ ಕುಲಕರ್ಣಿ ಹಾಗೂ ಸುನಂದಾ ಸಾಲವಾಡಗಿ ಅವರನ್ನು ಗುರು ವಂದನೆಯ ನಿಮಿತ್ತ ಸನ್ಮಾನಿಸಲಾಯಿತು.

ನೂಪುರ ಸಂಸ್ಕೃತಿ ನೃತ್ಯ ಮತ್ತು ಸಂಗೀತ ಸಂಸ್ಥೆಯ ಅಧ್ಯಕ್ಷೆ ವಿದುಷಿ ಸೌಖ್ಯಾ ಕುಲಕರ್ಣಿ ಹಾಗೂ ಪ್ರವೀಣ ಕುಲಕರ್ಣಿ ಅವರು ವಿವಿಧ ಕಲಾವಿದರನ್ನು ಸನ್ಮಾನಿಸಿದರು. ಸರ್ವೋತ್ತಮ ಸತಾಳಕರ, ಲೀಲಾವತಿ ಕುಲಕರ್ಣಿ, ಹಿರಿಯ ಸಾಹಿತಿ ಸರ್ವೋತ್ತಮ ಸತಾಳಕರ, ನಾರಾಯಣ ಜೋಶಿ, ದತ್ತಾತ್ರೇಯ ಸಬನೀಸ್, ಸುನಂದಾ ಸಬನೀಸ್, ವರಲಕ್ಷ್ಮೀ ಕುಲಕರ್ಣಿ, ಪಿಡ್ಡಪ್ಪ ಜಾಲಗಾರ, ಪ್ರವೀಣ ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಗುರುಗಳಿಗೆ ಗೌರವ ಸಲ್ಲಿಸುವುದರ ಜೊತೆಗೆ ನೃತ್ಯ ವಿದ್ಯಾರ್ಥಿಗಳಿಂದ ಗೆಜ್ಜೆ ಪೂಜೆ ಹಾಗೂ ನೃತ್ಯ ಪ್ರದರ್ಶನ, ಸಂಗೀತ ಕಾರ್ಯಕ್ರಮಗಳು ನಡೆದಿದ್ದು, ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.

Related Articles

Leave a Reply

Your email address will not be published. Required fields are marked *

Back to top button