ಜನಮನ ತಣಿಸಿದ ಕಲಬುರಗಿಯ ಯುವ ಪ್ರತಿಭೆಯ ದೇಶಭಕ್ತಿ ಗೀತೆ
ಸ್ವಾತಂತ್ರ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸವಿತಾ ವಿ. ಸ್ಥಾವರಮಠ ಅವರ ಸುಮಧುರ ಗಾಯನ

ಕಲಬುರಗಿ, ಆ.16: ಕಲಬುರಗಿಯ ಯುವ ಗಾಯಕಿ ಶ್ರೀಮತಿ ಸವಿತಾ ವಿ. ಸ್ಥಾವರಮಠ ಅವರು ಬೆಂಗಳೂರಿನಲ್ಲಿ ನಡೆದ 2026ನೇ ಸಾಲಿನ ಸ್ವಾತಂತ್ರ್ಯೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸುಮಧುರವಾಗಿ ದೇಶಭಕ್ತಿ ಗೀತೆಗಳನ್ನು ಹಾಡಿ ಜನಮನ ಸೆಳೆದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ವತಿಯಿಂದ ಶನಿವಾರ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಸಾಂಸ್ಕೃತಿಕ ಕಾರ್ಯಕ್ರಮವು ಬೆಂಗಳೂರಿನ ಕೊಣನಕುಂಟೆ ಕ್ರಾಸ್ನಲ್ಲಿರುವ ಶ್ರೀನಿಧಿ ಶ್ರೀನಿವಾಸ ದೇವಾಲಯದ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸವಿತಾ ವಿ. ಸ್ಥಾವರಮಠ ಅವರು ದೇಶಭಕ್ತಿ ಗೀತೆಗಳ ಸಂಗೀತ ಗಾಯನದ ಮೂಲಕ ಗಮನ ಸೆಳೆದರು.
‘ನದಿಗಳ ಗಿರಿಯನಗಗಳ ತಾಯೆ ಭಾರತಮಾತೆ’ ಗೀತೆಯನ್ನು ರಾಗ ಮಧುಕೌಂಸ್ನಲ್ಲಿ ಸುಶ್ರಾವ್ಯವಾಗಿ ಹಾಡಿದ ಅವರು, ಬಳಿಕ ‘ಭವ್ಯ ಭೂಮಿ ಭಾರತ ಭೂಮಿ’ ಗೀತೆಯನ್ನು ರಾಗ ಅಹಿರ್ ಭೈರವ್ನಲ್ಲಿ ಪ್ರಸ್ತುತಪಡಿಸಿದರು. ಅಂತಿಮವಾಗಿ ರಾಷ್ಟ್ರಕವಿ ಕುವೆಂಪು ಅವರ ರಚನೆಯ ‘ಭಾರತ ಭೂಮಿ ನನ್ನ ತಾಯಿ’ ಗೀತೆಯನ್ನು ರಾಗ ಕೀರವಾಣಿಯಲ್ಲಿ ಹಾಡಿ ಶ್ರೋತೃಗಳ ಮೆಚ್ಚುಗೆಗೆ ಪಾತ್ರರಾದರು.
ಸವಿತಾ ಅವರ ಗಾಯನಕ್ಕೆ ಆಕಾಶವಾಣಿ ಹಾಗೂ ದೂರದರ್ಶನದ ಬಿ-ಹೈ ಶ್ರೇಣಿಯ ಕಲಾವಿದರಾದ ಬೀದರ್ನ ಶ್ರೀಮತಿ ಪವಿತ್ರಾ ವಿಶ್ವನಾಥ ರಾಜನಾಳ ಮತ್ತು ವೀರಭದ್ರಯ್ಯ ಸ್ಥಾವರಮಠ ಭೂಸನೂರ ಅವರು ವಾದ್ಯ ಸಹಕಾರ ನೀಡಿದರು. ದೇಶಭಕ್ತಿ ಗೀತೆಗಳ ಸುಮಧುರ ಪ್ರಸ್ತುತಿಯಿಂದ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ದೊರೆಯಿತು.



