ಜಿಲ್ಲಾಸುದ್ದಿ

ಜೇವರ್ಗಿಯಲ್ಲಿ ಪತ್ರಿಕಾ ದಿನಾಚರಣೆ: ನೈತಿಕ ಮೌಲ್ಯಗಳನ್ನು ಕಾಪಾಡಲು ಪತ್ರಕರ್ತರಿಗೆ ಶಿವಾನಂದ ಶ್ರೀಗಳ ಕರೆ

ಸಮಾಜದ ಧ್ವನಿಯಾಗಿರುವ ಪತ್ರಕರ್ತರು ತತ್ವ, ಸಿದ್ಧಾಂತಗಳೊಂದಿಗೆ ಕಾರ್ಯನಿರ್ವಹಿಸಬೇಕು: ಗಣ್ಯರ ಅಭಿಮತ

ಜೇವರ್ಗಿ, ಆ.16: ಪತ್ರಕರ್ತರು ನೈತಿಕ ಮೌಲ್ಯಗಳನ್ನು ಕಾಪಾಡಿಕೊಂಡು ತತ್ವ ಹಾಗೂ ಸಿದ್ಧಾಂತಗಳೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಸೋನ್ನ ಮಠದ ಶಿವಾನಂದ ಶಿವಯೋಗಿಗಳು ಕರೆ ನೀಡಿದರು.

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ.) ಜೇವರ್ಗಿ ಘಟಕದ ವತಿಯಿಂದ ಪಟ್ಟಣದ ಸಜ್ಜನ್ ಮಹಿಬೂಬ್ ಫಂಕ್ಷನ್ ಹಾಲ್‌ನಲ್ಲಿ ಆಯೋಜಿಸಿದ್ದ ಭವ್ಯ ಪತ್ರಿಕಾ ದಿನಾಚರಣೆ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪತ್ರಕರ್ತರು ಸಮಾಜದ ಜವಾಬ್ದಾರಿಯನ್ನು ಅರಿತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಪತ್ರಕರ್ತರಿಗೆ ಸರ್ಕಾರ ಹೆಚ್ಚಿನ ಕಾನೂನುಬದ್ಧ ಸೌಲಭ್ಯಗಳು ಹಾಗೂ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಹೇಳಿದರು.

ಚಿಗರಳ್ಳಿ ಸಿದ್ಧ ಕಬೀರಾನಂದ ಮಹಾಸ್ವಾಮಿಗಳು ಮಾತನಾಡಿ, ಸಮಾಜದಲ್ಲಿ ಧ್ವನಿಯಿಲ್ಲದವರ ಧ್ವನಿಯಾಗಿ ಪತ್ರಕರ್ತರು ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆ ಅಮೂಲ್ಯವಾದದ್ದು. ಪತ್ರಕರ್ತರ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಯ ರಾಜ್ಯ ಕಾರ್ಯದರ್ಶಿ ರಾಜಶೇಖರ ಸಾಹು ಸೀರಿ ಅವರು ಪತ್ರಕರ್ತರ ಕರ್ತವ್ಯ, ಜವಾಬ್ದಾರಿ ಹಾಗೂ ಸಮಾಜದಲ್ಲಿ ಅವರ ಪಾತ್ರದ ಕುರಿತು ಮಾತನಾಡಿದರು.

ಶಾಸಕರು ಹಾಗೂ ಸಚಿವರ ಅನುಪಸ್ಥಿತಿಯಲ್ಲಿಯೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಮುಖಂಡ ಸೇವಾಲಾಲ್ ಸಿಂಗ್ ಅವರು ಪತ್ರಕರ್ತರ ವಿವಿಧ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು, ಶೀಘ್ರದಲ್ಲೇ ಪತ್ರಿಕಾ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಪ್ರಗತಿಪರ ಚಿಂತಕ ಭಗವಂತರಾಯ ಭೇಣ್ಣೂರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪತ್ರಿಕೆಯ ಹುಟ್ಟು, ಬೆಳವಣಿಗೆ ಹಾಗೂ ಪತ್ರಿಕೋದ್ಯಮದಲ್ಲಿನ ನೈತಿಕ ಮೌಲ್ಯಗಳ ಕುರಿತು ವಿವರಿಸಿದರು. ಪ್ರಗತಿಪರ ಚಿಂತಕ ಹಾಗೂ ಹೋರಾಟಗಾರ ಬಿ.ಎಚ್. ಮಾಲಿಪಾಟೀಲ್ ಸ್ವಾಗತಿಸಿದರು.

ಸಾಧಕರಿಗೆ ಪ್ರಶಸ್ತಿ ಪ್ರದಾನ

ಕಾರ್ಯಕ್ರಮದ ಕೊನೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಮಾಧ್ಯಮ ರತ್ನ, ಶಿಕ್ಷಣ ರತ್ನ, ಹೋರಾಟ ರತ್ನ ಹಾಗೂ ಸಮಾಜ ರತ್ನ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ.) ತಾಲೂಕು ಘಟಕದ ಅಧ್ಯಕ್ಷ ಮರಿಯಪ್ಪ ಬೇಗಾರ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರೇವಣಸಿದ್ದಪ್ಪ ಸಂಕಾಲಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಕೆ. ಬಿರಾದಾರ, ಗೌರವ ಕಾರ್ಯದರ್ಶಿಗಳಾದ ಕಲ್ಯಾಣಕುಮಾರ್ ಸಂಗಾವಿ, ಶ್ರೀಹರಿ ಕರಿಕಿಹಳ್ಳಿ, ಸಿದ್ದು ಕೇರೂರ, ಕನ್ನಡ ಜಾಗೃತಿ ಸೇನೆಯ ಜಿಲ್ಲಾಧ್ಯಕ್ಷ ಕಾಶಿನಾಥ ಮಂದೇವಾಳ, ಸಂಪಾದಕ ಮಲ್ಲಿಕಾರ್ಜುನ ಪಗಡೆ, ಭಗವಂತರಾಯ ಭೇಣ್ಣೂರ, ಸುರೇಶ್ ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button