ಸಮಾಜ

ಕಲಬುರಗಿಯಲ್ಲಿ ನಾಳೆ ಮಾಲಾ ಕಣ್ಣಿಯವರ ಅಭಿನಂದನಾ ಸಮಾರಂಭ: ಐವರಿಗೆ ನಾರಿಶಕ್ತಿ ಪ್ರಶಸ್ತಿ

ಅಭಿನಂದನಾ ಕಾರ್ಯಕ್ರಮದ ಅಂಗವಾಗಿ ನೇತ್ರದಾನ, ದೇಹದಾನ ಹಾಗೂ 5 ಸಾವಿರ ಸಸಿ ನೆಡುವ ಕಾರ್ಯಕ್ರಮ

ಕಲಬುರಗಿ, ಆ.16: ನಗರದ ಪತ್ರಿಕಾ ಭವನದಲ್ಲಿ ಆಗಸ್ಟ್ 18ರಂದು ಬೆಳಿಗ್ಗೆ 11 ಗಂಟೆಗೆ ಸಮಾಜ ಸೇವಕಿ, ಪರಿಸರ ಪ್ರೇಮಿ ಹಾಗೂ ಜನಪರ ನಾಯಕಿ ಮಾಲಾ ಕಣ್ಣಿ ಅವರ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರಿಗೆ ನಾರಿಶಕ್ತಿ ಪ್ರಶಸ್ತಿ ಪ್ರದಾನ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ್ ಎಂ.ವೈ. ಪಾಟೀಲ್ ಉದ್ಘಾಟಿಸಲಿದ್ದಾರೆ. ಡಾ. ಗುರುಪಾದಲಿಂಗ ಮಹಾಶಿವಯೋಗಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಶರಣಬಸವೇಶ್ವರ ಸಂಸ್ಥಾನದ ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್. ಅಪ್ಪ ಅವರು ದಿವ್ಯ ನೇತೃತ್ವ ವಹಿಸಲಿದ್ದಾರೆ ಎಂದರು.

ಶರಣಬಸವೇಶ್ವರ ವಿಶ್ವವಿದ್ಯಾಲಯದ ಕುಲಸಚಿವೆ ಡಾ. ಲಕ್ಷ್ಮೀ ಪಾಟೀಲ್ ಮಾಕಾ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಸಂತೋಷ್ ಪಾಟೀಲ್ ಸರಡಗಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜೇಂದ್ರ ಪಾಟೀಲ್ ರೇವೂರ್, ಡಾ. ಸದಾನಂದ ಪೆರ್ಲ, ಬಾಬುರಾವ್ ಯಡ್ರಾಮಿ, ಡಾ. ರವಿಕಾಂತ್ ಎಸ್. ಖ್ಯಾತನಾಳ್ ಹಾಗೂ ಶ್ರೀನಿವಾಸ ಮರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಲೋಕೋಪಯೋಗಿ ಇಲಾಖೆಯ ನೌಕರರ ಸಂಘದ ಜಿಲ್ಲಾಧ್ಯಕ್ಷ ಶರಣರಾಜ್ ಚಪ್ಪರಬಂದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸುರೇಶ ಬಡಿಗೇರ್ ತಿಳಿಸಿದರು.

ಇದೇ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಡಾ. ರಾಜೇಶ್ವರಿ ರೆಡ್ಡಿ, ಸಮಾಜ ಸೇವಕಿ ಶ್ರೀಮತಿ ಆರತಿ ತಿವಾರಿ, ಶಿಕ್ಷಣ ಕ್ಷೇತ್ರದ ಡಾ. ಲತಾದೇವಿ ಸಿದ್ದಪ್ಪ ಕರಿಕಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕ್ಷೇತ್ರದ ಶ್ರೀಮತಿ ಅಂಬಿಕಾ ಎನ್‌ಜಿ ಹಾಗೂ ಕಲಾ ಕ್ಷೇತ್ರದ ಶ್ರೀಮತಿ ಮೀನಾಕ್ಷಿ ಗುಟ್ಟೇದಾರ್ ಅವರಿಗೆ ನಾರಿಶಕ್ತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಸಮಾಜಮುಖಿ ಕಾರ್ಯಕ್ರಮಗಳು

ಮಾಲಾ ಕಣ್ಣಿಯವರ ಅಭಿನಂದನಾ ಸಮಾರಂಭದ ಅಂಗವಾಗಿ ಈಗಾಗಲೇ 25 ಮಂದಿ ನೇತ್ರದಾನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಮತ್ತಷ್ಟು 25 ಮಂದಿ ನೇತ್ರದಾನಕ್ಕೆ ನೋಂದಾಯಿಸಿಕೊಳ್ಳುವ ನಿರೀಕ್ಷೆಯಿದೆ. ಅಲ್ಲದೆ 10 ಮಂದಿ ದೇಹದಾನ ಮಾಡಲು ಮುಂದೆ ಬಂದಿದ್ದಾರೆ ಎಂದು ತಿಳಿಸಿದರು.

ಈ ಎಲ್ಲ ಸಮಾಜಮುಖಿ ಕಾರ್ಯಗಳನ್ನು ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿನ ಸಹಯೋಗದಲ್ಲಿ ನೆರವೇರಿಸಲಾಗುವುದು. ಪರಿಸರ ಸಂರಕ್ಷಣೆಯ ಉದ್ದೇಶದಿಂದ ಸುಮಾರು 5 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ಮಾಲಾ ಕಣ್ಣಿಯವರು ಈಗಾಗಲೇ ಗ್ರಾಮೀಣ ಶಾಲೆಗಳಲ್ಲಿ ಸುಮಾರು ಒಂದು ಸಾವಿರ ಸಸಿಗಳನ್ನು ನೆಟ್ಟಿದ್ದಾರೆ ಎಂದು ಸುರೇಶ ಬಡಿಗೇರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಲ್ಯಾಣಕುಮಾರ್ ಶೀಲವಂತ್, ಸ್ವಾತಿ ಮಹಾಗಾಂವಕರ್, ಜಯಶ್ರೀ ಜೈನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button