ವಿಕಸಿತ ಭಾರತ ನಿರ್ಮಾಣಕ್ಕೆ ಯುವಜನತೆ ಸಕ್ರಿಯವಾಗಿ ಕೊಡುಗೆ ನೀಡಲಿ: ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ
ಕೆಸಿಯು ಆವರಣದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ; 5 ಕಿ.ಮೀ. ಬೃಹತ್ ತಿರಂಗಾ ಯಾತ್ರೆ

ಕಲಬುರಗಿ, ಆ.15: 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣ ಮಾಡುವಲ್ಲಿ ಶಿಕ್ಷಣ ಸಂಸ್ಥೆಗಳು ಹಾಗೂ ಯುವ ಸಮುದಾಯದ ಮೇಲೆ ವಿಶೇಷ ಜವಾಬ್ದಾರಿ ಮತ್ತು ಮಹತ್ವದ ಪಾತ್ರವಿದೆ. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಸಕ್ರಿಯವಾಗಿ ಪ್ರಧಾನಿ ಅವರ ವಿಕಸಿತ ಭಾರತ @2047ರ ಆಶಯದ ಸಾಕಾರಕ್ಕೆ ಕೊಡುಗೆ ನೀಡಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಕರೆ ನೀಡಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಆಡಳಿತ ಭವನದಲ್ಲಿ ಶನಿವಾರ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, 1947ರ ಭಾರತದ ಸ್ಥಿತಿಗೂ ಇಂದಿನ ಭಾರತದ ಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿದೆ. ಶಿಕ್ಷಣ, ವಿಜ್ಞಾನ, ಮಾಹಿತಿ ತಂತ್ರಜ್ಞಾನ, ವೈದ್ಯಕೀಯ, ರಕ್ಷಣಾ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದೇಶ ಗಮನಾರ್ಹ ಪ್ರಗತಿ ಸಾಧಿಸುತ್ತಿದೆ ಎಂದರು.
ಶಿಕ್ಷಣ ಸಂಸ್ಥೆಗಳು ಕೇವಲ ಪದವಿ ನೀಡುವ ಕೇಂದ್ರಗಳಾಗದೆ ಗುಣಮಟ್ಟದ ಶಿಕ್ಷಣ, ಸಂಶೋಧನೆ, ನಾವೀನ್ಯತೆ, ಸೃಜನಶೀಲತೆ ಹಾಗೂ ಜ್ಞಾನ ಸೃಷ್ಟಿಯ ಕೇಂದ್ರಗಳಾಗಬೇಕು. ಪ್ರಾಧ್ಯಾಪಕರು ಕೂಡ ನಿರಂತರವಾಗಿ ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನವೀಕರಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಯುವಜನತೆಯೇ ದೇಶದ ಶಕ್ತಿಯಾಗಿದ್ದು, ಗುಣಮಟ್ಟದ ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಸೂಕ್ತ ಅವಕಾಶಗಳ ಮೂಲಕ ಅವರನ್ನು ರಾಷ್ಟ್ರ ನಿರ್ಮಾಣ ಮತ್ತು ಉದ್ಯೋಗ ಸೃಷ್ಟಿಯ ಶಕ್ತಿಯಾಗಿ ರೂಪಿಸಬೇಕಾಗಿದೆ. ಕೇಂದ್ರ ಸರ್ಕಾರದ ವಿವಿಧ ಸೌಲಭ್ಯಗಳು ಹಾಗೂ ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕುಲಪತಿ ಮನವಿ ಮಾಡಿದರು.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕುಲಪತಿ ಅವರ ನೇತೃತ್ವದಲ್ಲಿ ಆಡಳಿತ ಭವನದಿಂದ ವಿಶ್ವವಿದ್ಯಾಲಯದ ಮುಖ್ಯ ದ್ವಾರದವರೆಗೆ ಸುಮಾರು 5 ಕಿ.ಮೀ. ಉದ್ದದ ಬೃಹತ್ ತಿರಂಗಾ ಯಾತ್ರೆ ನಡೆಯಿತು. ಯಾತ್ರೆಯುದ್ದಕ್ಕೂ ವಿದ್ಯಾರ್ಥಿಗಳು ದೇಶಭಕ್ತಿ ಘೋಷಣೆಗಳನ್ನು ಮೊಳಗಿಸಿದರು.
ವಿಶ್ವವಿದ್ಯಾಲಯದ ಬಹುಉಪಯೋಗಿ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ‘ವಂದೇ ಮಾತರಂ’ ಗೀತೆಗೆ 150 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಭಾಷಾವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಕೋಟ ಸಾಯಿಕೃಷ್ಣ ಅವರು ವಿಶೇಷ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ದೇಶಭಕ್ತಿ ಹಾಗೂ ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಶ್ವವಿದ್ಯಾಲಯದ ಆವರಣದಲ್ಲಿ ಕುಲಪತಿ ಅವರ ನೇತೃತ್ವದಲ್ಲಿ ಸಸಿ ನೆಡುವ ಕಾರ್ಯಕ್ರಮವೂ ನಡೆಯಿತು.
ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ್, ಕಾರ್ಯಕ್ರಮ ಸಂಯೋಜಕ ಪ್ರೊ. ಬಸವರಾಜ ಎಂ. ಕುಬಕಡ್ಡಿ, ಡಾ. ಗಣಪತಿ ಬಿ. ಸಿನ್ನೂರ, ಡಾ. ರಂಗನಾಥಂ ಗಂಗಿನೇನಿ ಸೇರಿದಂತೆ ವಿವಿಧ ನಿಕಾಯಗಳ ಡೀನ್ಗಳು, ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ. ವೈಷ್ಣವಿ ಹಾಗೂ ಡಾ. ಶ್ರೀಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.



