ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಸಮ್ಮೇಳನ: ಪೋಸ್ಟರ್ ಬಿಡುಗಡೆ
ಆ.20 ಮತ್ತು 21ರಂದು ಇಸಿಇ ವಿಭಾಗದಲ್ಲಿ 2ನೇ ಅಂತರರಾಷ್ಟ್ರೀಯ IEEE ಐಸಿಎಸ್ಐಪಿ-2026 ಸಮ್ಮೇಳನ

ಕಲಬುರಗಿ, ಆ.14: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ (ಇಸಿಇ) ವಿಭಾಗದ ವತಿಯಿಂದ ಆಯೋಜಿಸಲಾಗುತ್ತಿರುವ 2ನೇ ಅಂತರರಾಷ್ಟ್ರೀಯ IEEE ಐಸಿಎಸ್ಐಪಿ-2026 ಸಮ್ಮೇಳನವು ಆಗಸ್ಟ್ 20 ಮತ್ತು 21ರಂದು ಇಸಿಇ ವಿಭಾಗದಲ್ಲಿ ಎರಡು ದಿನಗಳ ಕಾಲ ನಡೆಯಲಿದೆ.
ಅಂತರರಾಷ್ಟ್ರೀಯ ಸಮ್ಮೇಳನದ ಪೂರ್ವಭಾವಿಯಾಗಿ ಅಧಿಕೃತ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಮ್ಮೇಳನದ ಪ್ರಧಾನ ಅಧ್ಯಕ್ಷರು ಹಾಗೂ ಇಸಿಇ ವಿಭಾಗದ ಮುಖ್ಯಸ್ಥ ಪ್ರೊ. ಪ್ರಮೋದ್ ಕುಮಾರ್, ಪ್ರೊ. ಪರಮೇಶ, ಹಣಕಾಸು ವಿಭಾಗದ ಅಧ್ಯಕ್ಷ ಡಾ. ನೃಸಿಂಹ ಚರಣ್ ಪ್ರಧಾನ್, ಪ್ರೊ. ವಿರೇಶ್ ಕಸಬೇಗೌಡ, ಡಾ. ಲಾಯಕ್ ಅಲಿ, ಡಾ. ಮಲ್ಲಿಕಾರ್ಜುನ ಆನಂದಹಳ್ಳಿ, ಡಾ. ನಾಗರಾಜ್ ಯಮನಕ್ಕನವರ ಸೇರಿದಂತೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಉಪಸ್ಥಿತರಿದ್ದರು.
ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಜ್ಞಾನ ವಿನಿಮಯ, ಸಹಯೋಗ ಹಾಗೂ ನಾವೀನ್ಯತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಂಶೋಧಕರು, ಶಿಕ್ಷಣ ತಜ್ಞರು, ಉದ್ಯಮ ವಲಯದ ಪರಿಣತರು ಹಾಗೂ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಗೆ ತರುವ ಇಂತಹ ಶೈಕ್ಷಣಿಕ ಸಮ್ಮೇಳನಗಳು ಅತ್ಯಂತ ಮಹತ್ವದ್ದಾಗಿವೆ ಎಂದು ಹೇಳಿದರು.
ಅದೇ ವೇಳೆ IEEE ಐಸಿಎಸ್ಐಪಿ-2026 ಸಮ್ಮೇಳನ ಯಶಸ್ವಿಯಾಗಿ ನಡೆಯಲಿ ಎಂದು ಅವರು ಸಂಘಟನಾ ತಂಡಕ್ಕೆ ಶುಭ ಹಾರೈಸಿದರು.
ಸುಧಾರಿತ ಸಂವಹನ ತಂತ್ರಜ್ಞಾನಗಳ ಕುರಿತು ಚರ್ಚೆ
‘ಅಡ್ವಾನ್ಸಿಂಗ್ ನೆಕ್ಸ್ಟ್ ಜನರೇಷನ್ ಕಮ್ಯುನಿಕೇಷನ್ ಆ್ಯಂಡ್ ಇನ್ಫರ್ಮೇಷನ್ ಪ್ರೊಸೆಸಿಂಗ್ ಫಾರ್ ಎ ಕನೆಕ್ಟೆಡ್ ಫ್ಯೂಚರ್’ ಎಂಬ ಮುಖ್ಯ ಧ್ಯೇಯವಾಕ್ಯದೊಂದಿಗೆ ಸಮ್ಮೇಳನ ನಡೆಯಲಿದೆ.
ಸಮ್ಮೇಳನದಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಖ್ಯಾತಿಯ ತಜ್ಞರಿಂದ ಮುಖ್ಯ ಭಾಷಣಗಳು ಮತ್ತು ಉಪನ್ಯಾಸಗಳು ನಡೆಯಲಿವೆ. ಅತ್ಯಾಧುನಿಕ ಸಂಶೋಧನಾ ಪ್ರಬಂಧಗಳ ಮಂಡನೆ, ಬಾಹ್ಯಾಕಾಶ ಹಾಗೂ ನವೀನ ತಂತ್ರಜ್ಞಾನಗಳ ಕುರಿತು ಚರ್ಚೆಗಳು, ನೆಟ್ವರ್ಕಿಂಗ್ ಅವಕಾಶಗಳು, ಸಂಶೋಧಕರು ಮತ್ತು ತಜ್ಞರ ಸಂವಾದ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಇದರೊಂದಿಗೆ ಇತ್ತೀಚಿನ ತಾಂತ್ರಿಕ ಬೆಳವಣಿಗೆಗಳು, ಸಂವಹನ ಕ್ಷೇತ್ರದ ನವೀನ ಮಾದರಿಗಳು ಹಾಗೂ ಸಂಶೋಧನಾ ಸಾಧನೆಗಳ ಪ್ರದರ್ಶನಕ್ಕೂ ಸಮ್ಮೇಳನದಲ್ಲಿ ಅವಕಾಶ ಕಲ್ಪಿಸಲಾಗಿದೆ.



