ಕುಲಪತಿಯಾಗಿ 5 ವರ್ಷ ಪೂರೈಸಿದ ಸಂಭ್ರಮ: ಪ್ರೊ. ಬಟ್ಟು ಸತ್ಯನಾರಾಯಣ ಸೇವೆಗೆ ನ್ಯಾ. ಜೋಶಿ ಶ್ಲಾಘನೆ
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಮಗ್ರ ಅಭಿವೃದ್ಧಿಗೆ ಕುಲಪತಿಗಳ ಕೊಡುಗೆ ಅಪಾರ

ಕಲಬುರಗಿ, ಆ.8: ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರ ಕಠಿಣ ಪರಿಶ್ರಮ ಹಾಗೂ ಪರಿಣಾಮಕಾರಿ ನಾಯಕತ್ವದಿಂದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಸಮಗ್ರವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದೆ ಎಂದು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರು ಶ್ಲಾಘಿಸಿದರು.
ಕೇಂದ್ರೀಯ ವಿಶ್ವವಿದ್ಯಾಲಯದ ವತಿಯಿಂದ ಶುಕ್ರವಾರ ವಿಶ್ವವಿದ್ಯಾಲಯದ ಕಾರ್ಯನಿರ್ವಹಣೆಯ ಪರಿಶೀಲನೆ ಹಾಗೂ ಪ್ರೊ. ಬಟ್ಟು ಸತ್ಯನಾರಾಯಣ ಅವರು ಐದು ವರ್ಷಗಳ ಕಾಲ ಕುಲಪತಿಯಾಗಿ ಅಧಿಕಾರ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಕುಲಪತಿಗಳು ನೀಡಿದ ಅಮೂಲ್ಯ ಕೊಡುಗೆ, ಮಾರ್ಗದರ್ಶನ ಹಾಗೂ ಸಾಧನೆಯ ಪಥವನ್ನು ವಿದ್ಯಾರ್ಥಿಗಳ ಭವಿಷ್ಯ ಮತ್ತು ದೇಶದ ಹಿತದೃಷ್ಟಿಯಿಂದ ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮುಂದುವರಿಸಿಕೊಂಡು ಹೋಗಬೇಕು ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು, ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಹಾಗೂ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಎಲ್ಲರೂ ತಂಡವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಪ್ರಧಾನಮಂತ್ರಿಗಳ ಆಶಯದಂತೆ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
2021ರ ಜುಲೈ ತಿಂಗಳಲ್ಲಿ ಕುಲಪತಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ವಿಶ್ವವಿದ್ಯಾಲಯದ ಸಮಗ್ರ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದ್ದೇನೆ. ವಿಶ್ವವಿದ್ಯಾಲಯದಲ್ಲಿ ಸಂಪನ್ಮೂಲ, ದಾಖಲೆಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೊರತೆ, ಅನುದಾನ ಲಭ್ಯತೆಯ ಸಮಸ್ಯೆ ಸೇರಿದಂತೆ ಹಲವು ಸವಾಲುಗಳಿದ್ದರೂ ಹಂತ ಹಂತವಾಗಿ ಅವುಗಳನ್ನು ಪರಿಹರಿಸಲಾಗಿದೆ. ಕಳೆದ ಐದು ವರ್ಷಗಳಲ್ಲಿ ದೇಶದ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳ ಸಾಲಿನಲ್ಲಿ ವಿಶ್ವವಿದ್ಯಾಲಯವು ಶೈಕ್ಷಣಿಕ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಬೆಳೆಯುತ್ತಿರುವುದು ಹೆಮ್ಮೆಯ ಸಂಗತಿ. ಇದಕ್ಕೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ನಿರಂತರ ಪರಿಶ್ರಮವೇ ಕಾರಣ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕುಲಪತಿಗಳ ಐದು ವರ್ಷಗಳ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಹಾಗೂ ಸಾಧನೆಗಳ ಅಂಕಿ-ಅಂಶಗಳನ್ನು ಒಳಗೊಂಡ ‘ಕುಲಪತಿಗಳ ದೂರದೃಷ್ಟಿತ್ವ: ವಿಶ್ವವಿದ್ಯಾಲಯದ ಅಭಿವೃದ್ಧಿಯ ಹೆಜ್ಜೆಗುರುತು’ ಎಂಬ ಸಾಧನಾ ವರದಿಯನ್ನು ಬಿಡುಗಡೆ ಮಾಡಲಾಯಿತು.
ಐದು ವರ್ಷಗಳ ಅಧಿಕಾರಾವಧಿಯಲ್ಲಿ ಕೈಗೊಂಡ ಶೈಕ್ಷಣಿಕ ಅಭಿವೃದ್ಧಿ, ಸಂಶೋಧನಾ ಚಟುವಟಿಕೆಗಳು, ದೇಶದ ಉನ್ನತ ಮಟ್ಟದ ಪ್ರಯೋಗಾಲಯಗಳ ಸ್ಥಾಪನೆ, ನೇಮಕಾತಿಗಳು, ಮೂಲಸೌಕರ್ಯಗಳ ಹೆಚ್ಚಳ, ಪರೀಕ್ಷಾ ಸುಧಾರಣೆಗಳು, ವಿದ್ಯಾರ್ಥಿ ಸ್ನೇಹಿ ವಾತಾವರಣ ನಿರ್ಮಾಣ, ಹಣಕಾಸು ವ್ಯವಸ್ಥೆಯ ಸುಧಾರಣೆ, ಅನುದಾನಗಳ ಸದ್ಬಳಕೆ, ಕೇಂದ್ರ ಸರ್ಕಾರದೊಂದಿಗೆ ಉತ್ತಮ ಬಾಂಧವ್ಯ ಹಾಗೂ ಆಡಳಿತದಲ್ಲಿ ಸುಧಾರಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಸಾಧನೆಗಳ ಕುರಿತು ಕಾರ್ಯಕ್ರಮದಲ್ಲಿ ಮೆಚ್ಚುಗೆ ವ್ಯಕ್ತವಾಯಿತು.
ವಿಶ್ವವಿದ್ಯಾಲಯದ ಆಡಳಿತದಲ್ಲಿ ಸುಧಾರಣೆ, ವಿದ್ಯಾರ್ಥಿಗಳ ಅಭಿವೃದ್ಧಿ, ಹಸಿರು ಕ್ಯಾಂಪಸ್ ನಿರ್ಮಾಣ ಹಾಗೂ ಜೀವವೈವಿಧ್ಯ ಉತ್ತೇಜನ, ವಿವಿಧ ರಾಜ್ಯಗಳ ವಿದ್ಯಾರ್ಥಿಗಳ ಸಮಾಗಮಕ್ಕೆ ಪೂರಕವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಹಲವು ಕಾರ್ಯಗಳ ಮೂಲಕ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಗಣ್ಯರು ಹೇಳಿದರು.
ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ ಮಾತನಾಡಿ, ಪ್ರೊ. ಬಟ್ಟು ಸತ್ಯನಾರಾಯಣ ಅವರು ವಿಶ್ವವಿದ್ಯಾಲಯದ ಅಭಿವೃದ್ಧಿ, ಸಂಶೋಧನೆ ಹಾಗೂ ಗುಣಮಟ್ಟದ ಶಿಕ್ಷಣವನ್ನು ಬೆಳೆಸಲು ಅಪಾರ ಪರಿಶ್ರಮ ಪಟ್ಟಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ ಹಾಗೂ ಕುಲಪತಿಗಳ ಕುಟುಂಬಸ್ಥರು ಉಪಸ್ಥಿತರಿದ್ದರು. ಪ್ರೊ. ಚೆನ್ನವೀರ ಆರ್.ಎಂ. ಅವರು ಸ್ವಾಗತಿಸಿದರು. ಡಾ. ವೈಷ್ಣವಿ ಕಾರ್ಯಕ್ರಮ ನಿರೂಪಿಸಿದರು. ಡಾ. ಪಂಡಿತ್ ವಂದಿಸಿದರು.



