ಎ.ಎಸ್.ಡಿ.ಡಿ. ಮತದಾರರ ಪಟ್ಟಿ ಪರಿಶೀಲನೆಗೆ ಆಗಸ್ಟ್ 3-4ರಂದು ಶಹಾಬಾದದಲ್ಲಿ ವಾರ್ಡ್ವಾರು ಸಭೆ
51,187 ಎ.ಎಸ್.ಡಿ.ಡಿ. ಮತದಾರರ ನಿಖರತೆ ಪರಿಶೀಲನೆಗೆ ವಿಶೇಷ ಸಭೆ; ಬಾಕಿ ಗಣತಿ ನಮೂನೆಗಳನ್ನು ತಕ್ಷಣ ಸಲ್ಲಿಸಲು ಮನವಿ

ಕಲಬುರಗಿ, ಆ.2: ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್.ಐ.ಆರ್.) ಪ್ರಕ್ರಿಯೆಯ ಅಂಗವಾಗಿ ಎ.ಎಸ್.ಡಿ.ಡಿ. (ಗೈರು, ಸ್ಥಳಾಂತರ, ನಿಧನ ಹಾಗೂ ಡುಪ್ಲಿಕೇಟ್) ಎಂದು ಗುರುತಿಸಲಾದ ಮತದಾರರ ಮಾಹಿತಿಯ ನಿಖರತೆ ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಆಗಸ್ಟ್ 3 ಮತ್ತು 4ರಂದು ಶಹಾಬಾದ ಹೋಬಳಿ ವ್ಯಾಪ್ತಿಯಲ್ಲಿ ವಾರ್ಡ್ವಾರು ಸಭೆಗಳನ್ನು ಆಯೋಜಿಸಲಾಗಿದೆ ಎಂದು ಮತದಾರರ ನೋಂದಣಾಧಿಕಾರಿ ಹಾಗೂ ಉಪ ವಿಭಾಗದ ಹಿರಿಯ ಸಹಾಯಕ ಆಯುಕ್ತ ಸಾಹಿತ್ಯ ಆಲದಕಟ್ಟಿ ತಿಳಿಸಿದ್ದಾರೆ.
ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ ಗ್ರಾಮಾಂತರ ಕ್ಷೇತ್ರದ ಒಟ್ಟು 23,71,542 ಮತದಾರರಲ್ಲಿ 51,187 ಮತದಾರರನ್ನು ಎ.ಎಸ್.ಡಿ.ಡಿ. ಪಟ್ಟಿಯಲ್ಲಿ ಗುರುತಿಸಲಾಗಿದೆ. ಇದರಲ್ಲಿ 7,176 ನಿಧನ, 37,068 ಸ್ಥಳಾಂತರ, 2,968 ಈಗಾಗಲೇ ಬೇರೆಡೆ ನೋಂದಣಿ ಹಾಗೂ 355 ಇತರೆ ಪ್ರಕರಣಗಳಾಗಿವೆ ಎಂದು ವಿವರಿಸಿದರು.
ಇದುವರೆಗೆ 2,18,741 ಗಣತಿ ನಮೂನೆಗಳನ್ನು ಮೊಬೈಲ್ ತಂತ್ರಾಂಶದ ಮೂಲಕ ಡಿಜಿಟೈಸ್ ಮಾಡಲಾಗಿದ್ದು, ಇದು ಶೇ.79.58ರಷ್ಟು ಪ್ರಗತಿಯನ್ನು ಸಾಧಿಸಿದೆ. ಎ.ಎಸ್.ಡಿ.ಡಿ. ಪಟ್ಟಿಯಲ್ಲಿರುವ ಮತದಾರರ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ಗ್ರಾಮ ಹಾಗೂ ವಾರ್ಡ್ ಮಟ್ಟದಲ್ಲಿ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಹೋಬಳಿ ವ್ಯಾಪ್ತಿಯಂತೆ ಕಮಲಾಪುರದಲ್ಲಿ 6,101, ಮಹಾಗಾಂವದಲ್ಲಿ 8,770, ನರೋಣಾದಲ್ಲಿ 4,789, ಅವರಾದ ಬಿ.ನಲ್ಲಿ 5,768, ಕಲಬುರಗಿ ಹೋಬಳಿಯಲ್ಲಿ 3,553 ಹಾಗೂ ಶಹಾಬಾದ ಹೋಬಳಿಯಲ್ಲಿ 22,206 ಮತದಾರರು ಎ.ಎಸ್.ಡಿ.ಡಿ. ಪಟ್ಟಿಯಲ್ಲಿದ್ದಾರೆ. ಶಹಾಬಾದ ಹೋಬಳಿಯ 50 ಮತಗಟ್ಟೆಗಳಲ್ಲಿ ಈ ಸಭೆಗಳು ನಡೆಯಲಿವೆ ಎಂದು ಹೇಳಿದರು.
ಇನ್ನೂ ಕೆಲ ಮತದಾರರು ಗಣತಿ ನಮೂನೆಗಳನ್ನು ಪಡೆದು ಹಿಂದಿರುಗಿಸಿಲ್ಲ. ಅಂತಹವರು ಕೊನೆಯ ದಿನಾಂಕದವರೆಗೆ ಕಾಯದೆ ತಕ್ಷಣವೇ ಭರ್ತಿ ಮಾಡಿದ ನಮೂನೆಯನ್ನು ಸಂಬಂಧಿತ ಬಿ.ಎಲ್.ಓ. ಅವರಿಗೆ ಸಲ್ಲಿಸಬೇಕು ಎಂದು ಅವರು ಮನವಿ ಮಾಡಿದರು. ಎ.ಎಸ್.ಡಿ.ಡಿ. ಮತದಾರರು ಹೆಚ್ಚಿರುವ 161 ಮತಗಟ್ಟೆಗಳಲ್ಲಿ ಪಟ್ಟಿಯನ್ನು ಸಾರ್ವಜನಿಕರ ವೀಕ್ಷಣೆಗೆ ಪ್ರದರ್ಶಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಪಟ್ಟಿಯಲ್ಲಿ ಯಾವುದೇ ತಪ್ಪು ಕಂಡುಬಂದರೆ ಬಿ.ಎಲ್.ಓ. ಅಥವಾ ಇ.ಆರ್.ಓ. ಗಮನಕ್ಕೆ ತಂದು ತಿದ್ದುಪಡಿ ಮಾಡಿಸಿಕೊಳ್ಳುವಂತೆ ಸಾರ್ವಜನಿಕರು, ರಾಜಕೀಯ ಪಕ್ಷಗಳು ಹಾಗೂ ಬಿ.ಎಲ್.ಎ.ಗಳಿಗೆ ಅವರು ಕರೆ ನೀಡಿದರು.
ಒಬ್ಬ ಮತದಾರರ ಹೆಸರು ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಇರುವುದಾದರೆ ಕಾನೂನಿನ ಪ್ರಕಾರ ಅದು ಮಾನ್ಯವಲ್ಲ. ಆದ್ದರಿಂದ ಮತದಾರರು ತಾವು ಸಾಮಾನ್ಯವಾಗಿ ವಾಸಿಸುವ ಹಾಗೂ ಮತ ಚಲಾಯಿಸಲು ಬಯಸುವ ಕ್ಷೇತ್ರದಲ್ಲೇ ತಮ್ಮ ಹೆಸರನ್ನು ಉಳಿಸಿಕೊಳ್ಳುವಂತೆ ಅಗತ್ಯ ನಮೂನೆಗಳನ್ನು ತಕ್ಷಣ ಸಲ್ಲಿಸಬೇಕು ಎಂದು ಅವರು ತಿಳಿಸಿದರು.
ರಾಜ್ಯ ಸರ್ಕಾರದ ನಿರ್ದೇಶನದಂತೆ ಎಸ್.ಐ.ಆರ್. ಪರಿಷ್ಕರಣೆ ಸಂದರ್ಭದಲ್ಲಿ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಮನೆಬಾಗಿಲಿಗೆ ಜಾತಿ ಪ್ರಮಾಣ ಪತ್ರ ವಿತರಿಸುವ ಕಾರ್ಯ ಆರಂಭಿಸಲಾಗಿದೆ. ಅಗತ್ಯವಿರುವವರಿಗೆ ನಿವಾಸಿ ಪ್ರಮಾಣ ಪತ್ರಗಳನ್ನೂ ನೀಡಲಾಗುತ್ತಿದೆ. ಈ ದಾಖಲೆಗಳು ಮತದಾರರ ಹೆಸರು ಸೇರ್ಪಡೆ ಪ್ರಕ್ರಿಯೆಗೆ ಸಹಕಾರಿಯಾಗಲಿವೆ ಎಂದು ಸಾಹಿತ್ಯ ಆಲದಕಟ್ಟಿ ಹೇಳಿದರು.
2002ರ ಎಸ್.ಐ.ಆರ್. ಪಟ್ಟಿಯಲ್ಲಿ ಸ್ವಂತ ಹೆಸರು ಅಥವಾ ಸಂಬಂಧಿಕರ ಹೆಸರು ಇಲ್ಲದಿದ್ದರೂ ಸಹ ಸಂಬಂಧಿತ ಕಾಲಂ ಭರ್ತಿ ಮಾಡಿ ಅರ್ಜಿ ಸಲ್ಲಿಸಿದರೆ ಅವರ ಹೆಸರನ್ನು ಕರಡು ಮತದಾರರ ಪಟ್ಟಿಯಲ್ಲಿ ಸೇರಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಲಬುರಗಿ ತಹಶೀಲ್ದಾರ ಕೆ. ಆನಂದಶೀಲ, ಕಮಲಾಪುರ ತಹಶೀಲ್ದಾರ ಮೊಹಮ್ಮದ್ ಮೋಸಿನ್ ಹಾಗೂ ಶಹಾಬಾದ ತಹಶೀಲ್ದಾರ ನೀಲಪ್ರಭಾ ಉಪಸ್ಥಿತರಿದ್ದರು.



