ಹಾಗರಗುಂಡಗಿ ಕೆರೆಗೆ ಪ್ರಾಯೋಗಿಕವಾಗಿ ನೀರು ತುಂಬಿಸುವ ಕಾರ್ಯ ಆರಂಭ; ರೈತರ ಕನಸು ನನಸಿನತ್ತ
ಸುಮಾರು ₹11 ಕೋಟಿ ವೆಚ್ಚದ ಕೆರೆ ಕಾಮಗಾರಿ ಅಂತಿಮ ಹಂತದಲ್ಲಿ; ಶೀಘ್ರದಲ್ಲೇ ಸಚಿವರ ಸಮ್ಮುಖದಲ್ಲಿ ಲೋಕಾರ್ಪಣೆ

ಕಲಬುರಗಿ, ಆ.2: ಅಫಜಲಪುರ ಮತಕ್ಷೇತ್ರದ ಕಲಬುರಗಿ ತಾಲೂಕಿನ ಹಾಗರಗುಂಡಗಿ ಗ್ರಾಮದ ಜನರ ಹಲವು ವರ್ಷಗಳ ಕನಸಾಗಿದ್ದ 156 ಎಕರೆ ವ್ಯಾಪ್ತಿಯ ಕೆರೆಗೆ ಪ್ರಾಯೋಗಿಕವಾಗಿ ನೀರು ತುಂಬಿಸುವ ಕಾರ್ಯಕ್ಕೆ ಭಾನುವಾರ ಚಾಲನೆ ನೀಡಲಾಯಿತು. ಸುಮಾರು ₹11 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಕೆರೆಯ ಕಾಮಗಾರಿಯನ್ನು ಮಾಜಿ ಸಚಿವ ಎಸ್.ಕೆ. ಕಾಂತ್ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ್ ಎಂ.ವೈ. ಪಾಟೀಲ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅರುಣಕುಮಾರ್ ಎಂ.ವೈ. ಪಾಟೀಲ, ಕೆರೆ ನಿರ್ಮಾಣವೆಂದರೆ ಕೇವಲ ನೀರು ಸಂಗ್ರಹಿಸುವ ಕಾಮಗಾರಿ ಮಾತ್ರವಲ್ಲ, ಅದು ರೈತರ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕುವ ಯೋಜನೆಯಾಗಿದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗುವುದರೊಂದಿಗೆ ಕೃಷಿಗೆ ಜೀವನಾಡಿಯಾಗಲಿದೆ. ಮುಂದಿನ ಪೀಳಿಗೆಗೂ ಅಮೂಲ್ಯ ಕೊಡುಗೆಯಾಗಿ ಈ ಯೋಜನೆ ಉಳಿಯಲಿದೆ ಎಂದು ಹೇಳಿದರು.
ಕಾಮಗಾರಿ ಸಂಪೂರ್ಣ ಪೂರ್ಣಗೊಂಡ ಬಳಿಕ ಹಾಗರಗುಂಡಗಿ ಗ್ರಾಮದ ಕೊಪ್ಪಳ ಮಠದ ಅಭಿನವ ಗವಿ ಸಿದ್ದೇಶ್ವರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಜಲಸಂಪನ್ಮೂಲ ಹಾಗೂ ಸಣ್ಣ ನೀರಾವರಿ ಸಚಿವ ರಾಮಲಿಂಗಾರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಎಂ.ವೈ. ಪಾಟೀಲ ಹಾಗೂ ಇತರ ಗಣ್ಯರ ಉಪಸ್ಥಿತಿಯಲ್ಲಿ ಕೆರೆಯನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಿ ರೈತ ಬಂಧುಗಳಿಗೆ ಸಮರ್ಪಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಕೆ. ಕಾಂತ್, ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಗ್ರಾಮದ ಪ್ರಮುಖರು, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ರೈತರು ಉಪಸ್ಥಿತರಿದ್ದರು.



