ಜಿಲ್ಲಾಸುದ್ದಿ

ಭೀಮಾ ನದಿಗೆ ಭಾರೀ ನೀರಿನ ಹರಿವು: ಐದು ತಾಲೂಕುಗಳಿಗೆ ಹೈ ಅಲರ್ಟ್, ಎಚ್ಚರಿಕೆಯಿಂದಿರಲು ಜಿಲ್ಲಾಧಿಕಾರಿ ಮನವಿ

ಮಹಾರಾಷ್ಟ್ರದ ಉಜ್ಜನಿ ಹಾಗೂ ವೀರ ಜಲಾಶಯಗಳಿಂದ ನೀರು ಬಿಡುಗಡೆ; ನದಿ ತೀರದ ಗ್ರಾಮಗಳ ನಿವಾಸಿಗಳು ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ.

ಕಲಬುರಗಿ, ಜು. 31: ಮಹಾರಾಷ್ಟ್ರ ರಾಜ್ಯದ ಉಜ್ಜನಿ ಜಲಾಶಯದಿಂದ 80,000 ಕ್ಯೂಸೆಕ್ ಹಾಗೂ ವೀರ ಜಲಾಶಯದಿಂದ 63,323 ಕ್ಯೂಸೆಕ್ ಸೇರಿ ಒಟ್ಟು 1,43,323 ಕ್ಯೂಸೆಕ್ ನೀರನ್ನು ಭೀಮಾ ನದಿಗೆ ಹರಿಬಿಡುತ್ತಿರುವ ಹಿನ್ನೆಲೆಯಲ್ಲಿ ನದಿಯಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನದಿ ತೀರದ ಗ್ರಾಮಗಳ ನಿವಾಸಿಗಳು ಹಾಗೂ ಸಾರ್ವಜನಿಕರು ಅತ್ಯಂತ ಎಚ್ಚರಿಕೆಯಿಂದಿರಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಇಕ್ರಮ್ ಶರೀಫ್ ಮನವಿ ಮಾಡಿದ್ದಾರೆ.

ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್‌ನಿಂದ ಶನಿವಾರ ಸುಮಾರು 44,000 ಕ್ಯೂಸೆಕ್ ನೀರನ್ನು ಭೀಮಾ ನದಿಗೆ ಹರಿಸಲಾಗುತ್ತಿದ್ದು, ಅಗತ್ಯವಿದ್ದಲ್ಲಿ ಇನ್ನಷ್ಟು ಗೇಟ್‌ಗಳನ್ನು ತೆರೆದು ಹೆಚ್ಚಿನ ಪ್ರಮಾಣದ ನೀರನ್ನು ಬಿಡುಗಡೆ ಮಾಡುವ ಸಾಧ್ಯತೆಯೂ ಇದೆ. ಇದರಿಂದ ಅಫಜಲಪುರ, ಜೇವರ್ಗಿ, ಶಹಾಬಾದ್, ಕಲಬುರಗಿ ಹಾಗೂ ಚಿತ್ತಾಪುರ ತಾಲೂಕುಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ನದಿ ತೀರದ ಗ್ರಾಮಗಳ ಜನರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಜಿಲ್ಲಾಡಳಿತ ಸಾರ್ವಜನಿಕರಿಗೆ ಹಲವು ಸುರಕ್ಷತಾ ಸೂಚನೆಗಳನ್ನು ನೀಡಿದೆ. ಯಾವುದೇ ಕಾರಣಕ್ಕೂ ಭೀಮಾ ನದಿ ಹಾಗೂ ಅದರ ಉಪನದಿಗಳ ಬಳಿ ತೆರಳಬಾರದು. ಜಾನುವಾರುಗಳನ್ನು ನದಿ ತೀರದಲ್ಲಿ ಮೇಯಿಸಲು ಅಥವಾ ನೀರು ಕುಡಿಸಲು ಕರೆದೊಯ್ಯಬಾರದು. ಮಕ್ಕಳು ನದಿ ತೀರಕ್ಕೆ ಹೋಗದಂತೆ ಪೋಷಕರು ವಿಶೇಷ ನಿಗಾ ವಹಿಸಬೇಕು. ತಗ್ಗು ಪ್ರದೇಶಗಳಲ್ಲಿ ವಾಸಿಸುವವರು ಸ್ಥಳೀಯ ಆಡಳಿತ ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಮೀನುಗಾರರು ಭೀಮಾ ನದಿಯಲ್ಲಿ ಮೀನುಗಾರಿಕೆ ಸೇರಿದಂತೆ ಯಾವುದೇ ಚಟುವಟಿಕೆ ನಡೆಸಬಾರದು. ತುರ್ತು ಪರಿಸ್ಥಿತಿ ಎದುರಾದರೆ ತಕ್ಷಣ ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಅಥವಾ ತಾಲೂಕು ಆಡಳಿತವನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.

ಇದಲ್ಲದೆ, ಸಾರ್ವಜನಿಕರು ನದಿ ದಂಡೆಯಲ್ಲಿ ಅನಗತ್ಯವಾಗಿ ಸಂಚರಿಸುವುದು, ನದಿಯೊಳಗೆ ಇಳಿಯುವುದು, ನದಿಯನ್ನು ದಾಟಲು ಪ್ರಯತ್ನಿಸುವುದು ಹಾಗೂ ನದಿ ತೀರದಲ್ಲಿ ಅಥವಾ ನದಿಯ ಸಮೀಪ ಸೆಲ್ಫಿ ತೆಗೆಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button