ರಾಜಕೀಯಸಮಾಜ

ಒಂದು ಸಚಿವ ಸ್ಥಾನ, ಒಂದು ವಿಧಾನ ಪರಿಷತ್ ಸದಸ್ಯತ್ವ ನೀಡಿ: ಭೋವಿ ಸಮಾಜದ ಆಗ್ರಹ

12 ಲಕ್ಷ ಜನಸಂಖ್ಯೆ ಹೊಂದಿರುವ ಭೋವಿ ಸಮಾಜಕ್ಕೆ ಸಚಿವ ಸಂಪುಟ ಮತ್ತು ವಿಧಾನ ಪರಿಷತ್‌ನಲ್ಲಿ ಸಮರ್ಪಕ ರಾಜಕೀಯ ಪ್ರಾತಿನಿಧ್ಯ ನೀಡುವಂತೆ ಸರ್ಕಾರಕ್ಕೆ ಮನವಿ.

ಕಲಬುರಗಿ, ಜು.25: ರಾಜ್ಯದಲ್ಲಿ ಸುಮಾರು 12 ಲಕ್ಷ ಜನಸಂಖ್ಯೆ ಹೊಂದಿರುವ ಭೋವಿ ಸಮಾಜಕ್ಕೆ ಸಚಿವ ಸಂಪುಟದಲ್ಲಿ ಒಂದು ಸಚಿವ ಸ್ಥಾನ ಹಾಗೂ ವಿಧಾನ ಪರಿಷತ್‌ನಲ್ಲಿ ಒಂದು ಸದಸ್ಯತ್ವ ನೀಡುವಂತೆ ಭೋವಿ ವಡ್ಡರ ಸಮಾಜದ ಜಿಲ್ಲಾ ಅಧ್ಯಕ್ಷ ಸಿದ್ರಾಮ್ ದಂಡಗುಲಕರ್ ಸರ್ಕಾರವನ್ನು ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ವಿಧಾನಸಭೆ ಹಾಗೂ 2024ರ ಲೋಕಸಭೆ ಚುನಾವಣೆಯಲ್ಲಿ ಭೋವಿ ಸಮಾಜದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬೆಂಬಲ ನೀಡಿದ್ದರು. ಸಮಾಜದ ಬೆಂಬಲದ ಹೊರತಾಗಿಯೂ ಸಚಿವ ಸಂಪುಟದಲ್ಲಿ ಸಮರ್ಪಕ ಪ್ರಾತಿನಿಧ್ಯ ದೊರಕದಿರುವುದು ಬೇಸರದ ಸಂಗತಿಯಾಗಿದೆ ಎಂದು ಹೇಳಿದರು.

ವಿಧಾನಸಭೆ ಚುನಾವಣೆಯಲ್ಲಿ ಭೋವಿ ಸಮಾಜಕ್ಕೆ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್ ನೀಡಲಾಗಿದ್ದು, ಅವುಗಳಲ್ಲಿ ಮೂವರು ಶಾಸಕರಾಗಿ ಆಯ್ಕೆಯಾಗಿದ್ದರು. ಹಿಂದಿನ ಸಚಿವ ಸಂಪುಟದಲ್ಲಿ ಶಿವರಾಜ್ ತಂಗಡಗಿ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಹೊಸದಾಗಿ ರಚನೆಯಾದ ಸಚಿವ ಸಂಪುಟದಲ್ಲಿ ಭೋವಿ ಸಮಾಜಕ್ಕೆ ಅವಕಾಶ ನೀಡದಿರುವುದು ಅನ್ಯಾಯವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸಮಾಜಕ್ಕೆ ಆಗಿರುವ ಈ ಅನ್ಯಾಯವನ್ನು ಸರಿಪಡಿಸಲು ಶಿವರಾಜ್ ತಂಗಡಗಿ, ಎ.ಸಿ. ಶ್ರೀನಿವಾಸ್ ಅಥವಾ ವೆಂಕಟೇಶ್ ಪಾವಗಡ ಅವರಲ್ಲಿ ಯಾರಿಗಾದರೂ ಸಚಿವ ಸ್ಥಾನ ನೀಡಬೇಕು. ಜೊತೆಗೆ, ಹಿಂದೆ ನೀಡಿದ್ದ ಭರವಸೆಯಂತೆ ಭೋವಿ ಸಮಾಜಕ್ಕೆ ಒಂದು ವಿಧಾನ ಪರಿಷತ್ ಸದಸ್ಯ ಸ್ಥಾನವನ್ನು ಕೂಡಲೇ ನೀಡಬೇಕು ಎಂದು ಒತ್ತಾಯಿಸಿದರು.

ಇತ್ತೀಚೆಗೆ ನಡೆದ ವಿಧಾನ ಪರಿಷತ್ ಸದಸ್ಯರ ಆಯ್ಕೆ ಪ್ರಕ್ರಿಯೆಯಲ್ಲೂ ಭೋವಿ ಸಮಾಜವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದ ಅವರು, ಸಮಾಜದ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಅರ್ಹ ವ್ಯಕ್ತಿಗೆ ವಿಧಾನ ಪರಿಷತ್ ಸದಸ್ಯತ್ವ ನೀಡುವ ಮೂಲಕ ಸಮಾಜಕ್ಕೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ನಿಂಗಣ್ಣ ದೇವರಕರ್, ತಿಪ್ಪಣ್ಣ ಒಡೆಯರಾಜ್, ರಾಜು ಮಿಸ್ಟ್ರಿ, ಈರಣ್ಣ ರಾವೂರಕರ್, ಕನಕಪ್ಪ ದಂಡಗುಲಕರ್, ಮೋಹನ್ ವೀರ, ರಮೇಶ್ ಪವಾರ್, ವಿಜಯಕುಮಾರ್, ಭೀಮಾಶಂಕರ್ ಭಂಕರ್, ನಾಗೇಂದ್ರರಾವ್, ಶ್ರೀಹರಿ ಜಾಧವ್ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button