ನಕಲಿ ಪಿಎಚ್ಡಿ ಪದವಿ ಪ್ರಕರಣದ ಸಮಗ್ರ ತನಿಖೆಗೆ ಅಟ್ಟೂರ್ ಆಗ್ರಹ
ನಕಲಿ ಪದವಿ ನೀಡಿದ ವಿಶ್ವವಿದ್ಯಾಲಯಗಳ ಮೇಲೂ ಕ್ರಮ ಕೈಗೊಳ್ಳಬೇಕು; ಉನ್ನತ ಶಿಕ್ಷಣದ ಗುಣಮಟ್ಟದ ಬಗ್ಗೆ ಕಳವಳ

ಕಲಬುರಗಿ, ಜು.24: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಗೆ ನಕಲಿ ಪಿಎಚ್ಡಿ ಪದವಿ ಪ್ರಮಾಣಪತ್ರಗಳನ್ನು ಸಲ್ಲಿಸಿರುವ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ನಕಲಿ ಪದವಿ ನೀಡಿದ ವಿಶ್ವವಿದ್ಯಾಲಯಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜನಪರ ಹೋರಾಟಗಾರ ಹಾಗೂ ನ್ಯಾಯವಾದಿ ಹನುಮಂತರಾಯ ಅಟ್ಟೂರ್ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ನಕಲಿ ಪಿಎಚ್ಡಿ ಪ್ರಮಾಣಪತ್ರ ಸಲ್ಲಿಸಿ ಉದ್ಯೋಗ ಪಡೆದಿರುವ ಅತಿಥಿ ಉಪನ್ಯಾಸಕರು ತಮ್ಮ ಪವಿತ್ರ ವೃತ್ತಿಗೆ ದ್ರೋಹ ಎಸಗಿದ್ದಾರೆ. ಇಂತಹವರು ವಿದ್ಯಾರ್ಥಿಗಳ ಭವಿಷ್ಯವನ್ನು ಹೇಗೆ ರೂಪಿಸಬಲ್ಲರು ಎಂಬ ಪ್ರಶ್ನೆ ಉದ್ಭವಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ನಕಲಿ ದಾಖಲೆ ಸಲ್ಲಿಸಿದ ಉಪನ್ಯಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ಆದರೆ ನಕಲಿ ಪಿಎಚ್ಡಿ ಪದವಿ ನೀಡಿದ ವಿಶ್ವವಿದ್ಯಾಲಯಗಳ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನೂ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಎಷ್ಟು ವರ್ಷಗಳಿಂದ ಇಂತಹ ನಕಲಿ ಪದವಿ ಪ್ರಮಾಣಪತ್ರಗಳು ನೀಡಲಾಗುತ್ತಿವೆ, ಎಷ್ಟು ಮಂದಿಗೆ ಅವುಗಳನ್ನು ವಿತರಿಸಲಾಗಿದೆ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಿ, ಸಂಬಂಧಪಟ್ಟ ಎಲ್ಲರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದ ವಿವಿಧ ವಿಭಾಗಗಳಲ್ಲಿ ಪತ್ತೆಯಾಗಿರುವ ನಕಲಿ ಪದವಿ ಪ್ರಕರಣಗಳಲ್ಲಿ ಕಲಬುರಗಿ ವಿಭಾಗದಲ್ಲೇ ಅತಿ ಹೆಚ್ಚು 154 ಮಂದಿ ನಕಲಿ ಪ್ರಮಾಣಪತ್ರ ಸಲ್ಲಿಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಉನ್ನತ ಶಿಕ್ಷಣದ ಗುಣಮಟ್ಟ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸುತ್ತವೆ ಎಂದು ಅವರು ಹೇಳಿದರು.
ನಕಲಿ ಪದವಿ ನೀಡುವ ವಿಶ್ವವಿದ್ಯಾಲಯಗಳು ಯಾವ ರಾಜ್ಯದಲ್ಲಿದ್ದರೂ ಅವುಗಳ ವಿರುದ್ಧ ನಿರ್ದಾಕ್ಷಿಣ್ಯ ತನಿಖೆ ನಡೆಸಿ, ಕಠಿಣ ಕ್ರಮ ಕೈಗೊಳ್ಳಬೇಕು. ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಕಟ್ಟುನಿಟ್ಟಿನ ವ್ಯವಸ್ಥೆಯನ್ನು ರೂಪಿಸುವ ಅಗತ್ಯವಿದೆ ಎಂದು ಹನುಮಂತರಾಯ ಅಟ್ಟೂರ್ ಒತ್ತಾಯಿಸಿದರು.



