ನಿಜಾಮ್ ಬಾಬಾ ಅವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡುವಂತೆ ಆಗ್ರಹ
ಸಮಾಜಸೇವೆ, ಜಲ ಸಂರಕ್ಷಣೆ ಹಾಗೂ ಸಾಹಿತ್ಯ ಕ್ಷೇತ್ರದ ಸೇವೆ ಪರಿಗಣಿಸಲು ಒತ್ತಾಯ • ಸರ್ಕಾರಕ್ಕೆ ಉಲೇಮಾ ಸಂಘಟನೆ ಮನವಿ

ರಾಜ್ಯದ ಹಿರಿಯ ಸಮಾಜಸೇವಕ, ಇತಿಹಾಸ ಹಾಗೂ ಸಾಹಿತ್ಯ ಸಂರಕ್ಷಕ ಮತ್ತು ಮಾನವೀಯ ಮೌಲ್ಯಗಳ ಪ್ರತಿಪಾದಕರಾದ ಸಯ್ಯದ್ ಯದುಲ್ಲಾ ಹುಸೇನಿ (ನಿಜಾಮ್ ಬಾಬಾ) ಅವರನ್ನು ಕರ್ನಾಟಕ ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಬೇಕು ಎಂದು ಉಲೇಮಾ-ಎ-ಗುಲ್ಬರ್ಗಾ ಅಸೋಸಿಯೇಷನ್‌ನ ಸಯ್ಯದ್ ವಾಜಿದ್ ಅಲಿ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಜಾಮ್ ಬಾಬಾ ಅವರು ಸಮಾಜಸೇವೆ, ಜಲ ಸಂರಕ್ಷಣೆ, ಸಾಹಿತ್ಯ, ಸಂಸ್ಕೃತಿ ಹಾಗೂ ಐತಿಹಾಸಿಕ ಪರಂಪರೆಯ ಸಂರಕ್ಷಣೆಯಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.
2017-18ರಲ್ಲಿ ಕಲಬುರಗಿ ನಗರದಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಾದ ಸಂದರ್ಭದಲ್ಲಿ ಯಾವುದೇ ಸರ್ಕಾರಿ ಅಥವಾ ಖಾಸಗಿ ಆರ್ಥಿಕ ನೆರವಿಲ್ಲದೆ ಸುಮಾರು 600 ವರ್ಷಗಳ ಇತಿಹಾಸ ಹೊಂದಿರುವ ಪುರಾತನ ಬಾವಿಗಳನ್ನು ಪುನರುಜ್ಜೀವನಗೊಳಿಸಿ, ಪ್ರತಿದಿನ ಸಾವಿರಾರು ಲೀಟರ್ ನೀರು ಸಾರ್ವಜನಿಕರಿಗೆ ದೊರೆಯುವಂತೆ ಮಾಡಿದ ಸಾಧನೆಗಾಗಿ ಅವರು “ಕಲಬುರಗಿಯ ವಾಟರ್ ಮ್ಯಾನ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿದರು.
ಹಜರತ್ ಖ್ವಾಜಾ ಬಂದಾ ನವಾಜ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಬಡವರು ಹಾಗೂ ಅಗತ್ಯವಿರುವವರಿಗೆ ಉಚಿತ ಅನ್ನಸಂತರ್ಪಣೆ (ಲಂಗರ್) ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುತ್ತಿದ್ದು, ಜಾತಿ-ಧರ್ಮ ಭೇದವಿಲ್ಲದೆ ಎಲ್ಲರಿಗೂ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ನಿಜಾಮ್ ಬಾಬಾ ಅವರ ಕೊಡುಗೆ ಮಹತ್ವದ್ದಾಗಿದೆ. ಸೂಫಿ ಪರಂಪರೆ, ಇತಿಹಾಸ ಮತ್ತು ಅಧ್ಯಾತ್ಮಿಕ ಸಾಹಿತ್ಯವನ್ನು ಕನ್ನಡ, ಇಂಗ್ಲಿಷ್ ಹಾಗೂ ರೋಮನ್ ಇಂಗ್ಲಿಷ್ ಭಾಷೆಗಳಿಗೆ ಅನುವಾದಿಸಿ ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ಮಾಡಿದ್ದಾರೆ. ವಿವಿಧ ಸಾಮಾಜಿಕ ಮತ್ತು ಸಾರ್ವಜನಿಕ ವಿಚಾರಗಳಲ್ಲಿ ಸಮುದಾಯದ ಪರವಾಗಿ ಸರ್ಕಾರ ಹಾಗೂ ವಿವಿಧ ಸಮಿತಿಗಳ ಮುಂದೆ ಅಭಿಪ್ರಾಯ ಮಂಡಿಸುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.
ಇಂತಹ ಬಹುಮುಖ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ನಿಜಾಮ್ ಬಾಬಾ ಅವರನ್ನು ಕರ್ನಾಟಕ ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಯ್ಯದ್ ಖಾದರ್ ವಲಿ, ಮೆಹಬೂಬ್ ಶೇಖ್, ಅಕ್ಬರ್ ಅಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.



