ಹಾವನೂರು–ಗರೂರ(ಬಿ) ರಸ್ತೆ ಅಗಲೀಕರಣಕ್ಕೆ ಆಗ್ರಹಿಸಿ ಗೊಬ್ಬೂರು ಕ್ರಾಸ್‌ನಲ್ಲಿ ರಸ್ತೆ ತಡೆ ಪ್ರತಿಭಟನೆ
ವರ್ಷಗಳಿಂದ ರಸ್ತೆ ಸಮಸ್ಯೆ ಬಗೆಹರಿಸದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ; ಸಂಚಾರ ಅಸ್ತವ್ಯಸ್ತ

ಅಫಜಲಪುರ, ಜುಲೈ 15: ತಾಲ್ಲೂಕಿನ ಹಾವನೂರು ಗ್ರಾಮದಿಂದ ಗರೂರ(ಬಿ) ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯನ್ನು ಅಗಲೀಕರಣ ಮಾಡಿ ಡಾಂಬರೀಕರಣಗೊಳಿಸುವಂತೆ ಆಗ್ರಹಿಸಿ ಭೀಮ ಯುವ ಸೇನೆಯ ನೇತೃತ್ವದಲ್ಲಿ ಗ್ರಾಮಸ್ಥರು ಬುಧವಾರ ಗೊಬ್ಬೂರು(ಬಿ) ಕ್ರಾಸ್‌ನಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಹಿಳೆಯರು, ಯುವಕರು ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರಿಂದ ರಸ್ತೆ ಎರಡೂ ಬದಿಗಳಲ್ಲಿ ವಾಹನಗಳ ಉದ್ದನೆಯ ಸಾಲು ನಿರ್ಮಾಣವಾಗಿ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು.
ಭೀಮ ಯುವ ಸೇನೆಯ ಸಂಸ್ಥಾಪಕ ಅಧ್ಯಕ್ಷ ಸಂತೋಷ ಹಾವನೂರು ಮಾತನಾಡಿ, ಹಾವನೂರು–ಗರೂರ(ಬಿ) ರಸ್ತೆಯ ಅಗಲೀಕರಣದ ಕೆಲಸ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಗ್ರಾಮದ ಚಕ್ರಕಟ್ಟಿ ಬಸ್ ನಿಲ್ದಾಣದಿಂದ ಅಂಬೇಡ್ಕರ್ ನಗರದವರೆಗೆ ಮಾಸ್ಟರ್ ಪ್ಲಾನ್ ಅಡಿಯಲ್ಲಿ ರಸ್ತೆ ಅಗಲೀಕರಣ ಹಾಗೂ ಡಾಂಬರೀಕರಣ ಕಾಮಗಾರಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಸ್ತೆ ಕಿರಿದಾಗಿರುವುದರಿಂದ ಬಸ್, ಜೀಪು ಸೇರಿದಂತೆ ದೊಡ್ಡ ವಾಹನಗಳು ಎದುರುಬಂದಾಗ ಸಂಚಾರಕ್ಕೆ ತೊಂದರೆಯಾಗುತ್ತಿದೆ. ತುರ್ತು ವೈದ್ಯಕೀಯ ಸೇವೆಗಳ ವಾಹನಗಳು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರತಿನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ರೈತರು ಕೃಷಿ ಉತ್ಪನ್ನ ಸಾಗಿಸಲು ಸಹ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಈ ವೇಳೆ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಗಂಭೀರವಾಗಿದೆ. ಸರ್ಕಾರ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಪರಿಹಾರ ನೀಡಬೇಕು. ಭೀಮಾ ನದಿಗೆ ಉಜನಿ ಅಥವಾ ನಾರಾಯಣಪುರ ಜಲಾಶಯಗಳಿಂದ ನೀರು ಹರಿಸಬೇಕು ಹಾಗೂ ಬೆಳೆ ವಿಮೆ ಮೊತ್ತವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ರಸ್ತೆ ತಡೆ ಹಿನ್ನೆಲೆಯಲ್ಲಿ ಕಲಬುರಗಿ–ವಿಜಯಪುರ ಮಾರ್ಗದಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಬಳಿಕ ಪ್ರತಿಭಟನಾಕಾರರೊಂದಿಗೆ ಅಧಿಕಾರಿಗಳು ಮಾತುಕತೆ ನಡೆಸಿದ ನಂತರ ಸಂಚಾರ ಪುನಃ ಆರಂಭವಾಯಿತು.



