ಡಾ. ಅಜಯಸಿಂಗ್ ಅವರಿಗೆ ಸಚಿವ ಸ್ಥಾನಕ್ಕಾಗಿ ೧೦೧ ಸಿಡಿಗಾಯಿ ಒಡೆದು ಹರಕೆ
ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ಒತ್ತಾಯ; ಜನಸೇವೆಯನ್ನು ಪರಿಗಣಿಸುವಂತೆ ಮನವಿ

ಕಲಬುರಗಿ, ಜುಲೈ ೧೩: ಜೇವರ್ಗಿ ಕ್ಷೇತ್ರದ ಶಾಸಕರೂ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರೂ ಆಗಿರುವ ಡಾ. ಅಜಯಸಿಂಗ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಜೇವರ್ಗಿಯ ಕಲ್ಕತ್ತಾಯಿ ದೇವಾಲಯದಲ್ಲಿ ೧೦೧ ಸಿಡಿಗಾಯಿ ಒಡೆದು ಹರಕೆ ಸಲ್ಲಿಸಲಾಗಿದೆ ಎಂದು ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸೇವಾ ಟ್ರಸ್ಟ್ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಪಂಡಿತ ಸಿದ್ರಾಮಪ್ಪ ಎಂ. ಪೊಲೀಸ್ ಪಾಟೀಲ ತಿಳಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಅಜಯಸಿಂಗ್ ಅವರು ಜೇವರ್ಗಿ ಕ್ಷೇತ್ರದ ಜನಪ್ರಿಯ ಶಾಸಕರಾಗಿದ್ದು, ಸತತವಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದ್ದರಿಂದ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದರು.
ಡಾ. ಅಜಯಸಿಂಗ್ ಅವರು ತಮ್ಮ ರಾಜಕೀಯ ಜೀವನದಲ್ಲಿ ಜನಸೇವೆಗೆ ಆದ್ಯತೆ ನೀಡುತ್ತಾ ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಭಾಗದ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಜನರ ಮೆಚ್ಚುಗೆ ಗಳಿಸಿದ್ದಾರೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿ, ಸಾಮಾಜಿಕ ನ್ಯಾಯ ಹಾಗೂ ಪ್ರಾದೇಶಿಕ ಸಮತೋಲನದ ದೃಷ್ಟಿಯಿಂದ ಡಾ. ಅಜಯಸಿಂಗ್ ಅವರಿಗೆ ಸಚಿವ ಸ್ಥಾನ ನೀಡುವುದು ಅಗತ್ಯವಾಗಿದೆ. ಅವರ ಆಡಳಿತ ಅನುಭವ, ಪ್ರಾಮಾಣಿಕತೆ ಹಾಗೂ ಸಾರ್ವಜನಿಕ ಸೇವೆಯನ್ನು ಪರಿಗಣಿಸಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದ ಅಭಿವೃದ್ಧಿಗೆ ಅವರ ಅನುಭವ ಮತ್ತು ನಾಯಕತ್ವ ಅಗತ್ಯವಾಗಿದ್ದು, ಸಚಿವ ಸಂಪುಟದಲ್ಲಿ ಅವರಿಗೆ ಸ್ಥಾನ ನೀಡುವುದು ಕಲ್ಯಾಣ ಕರ್ನಾಟಕ ಭಾಗದ ಜನರ ಬಹುಕಾಲದ ನಿರೀಕ್ಷೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಬಸವರಾಜಗೌಡ ಮಾಳಿಪಾಟೀಲ, ಗೊಲ್ಲಾಳಪ್ಪ ಬಿ. ಹಚ್ಚುಡ, ಶಿವಪ್ಪಣ್ಣ ಶರ್ಮಾ ಕುಕನೂರು, ಚಂದ್ರಶೇಖರ ತೋನಸನಹಳ್ಳಿ, ಬಸವರಾಜ ಬಿರಾದಾರ, ಮಹಾಂತೇಶ್ವರ ಶರ್ಮಾ ಕುಕನೂರು, ಶಿವಾನಂದ ಎಸ್. ಪೊಲೀಸ್ ಪಾಟೀಲ ಕುಕನೂರು, ಶಿವಾನಂದ ಮಂದೇವಾಳ, ಸಂತೋಷ ನಂದಗಿರಿಮಠ, ಬಲಭೀಮ ನೆಲೋಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



