ಶಿಕ್ಷಣ

ಜೀವನದ ಸವಾಲುಗಳನ್ನು ಎದುರಿಸುವ ಶಿಕ್ಷಣ ಅಗತ್ಯ: ಡಾ. ಮೃತ್ಯುಂಜಯ ರುಮಾಲೆ

ಮಕ್ಕಳಲ್ಲಿ ಆತ್ಮವಿಶ್ವಾಸ, ಮೌಲ್ಯ ಶಿಕ್ಷಣ ಮತ್ತು ಜೀವನ ಕೌಶಲ್ಯ ಬೆಳೆಸುವ ಶಿಕ್ಷಣಕ್ಕೆ ಒತ್ತು ನೀಡಿದ ಡಾ. ಮೃತ್ಯುಂಜಯ ರುಮಾಲೆ

ಬೀದರ್, ಜು.11: ಮಕ್ಕಳಿಗೆ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಶಿಕ್ಷಣ ನೀಡುವುದು ಅತ್ಯಗತ್ಯ ಎಂದು ವಿಜಯನಗರ ಕಾಲೇಜಿನ ನಿವೃತ್ತ ಕನ್ನಡ ಸಹ ಪ್ರಾಧ್ಯಾಪಕ ಡಾ. ಮೃತ್ಯುಂಜಯ ರುಮಾಲೆ ಹೇಳಿದರು.

ಜನಸೇವಾ ಶಿಶು ಮಂದಿರ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ದ್ವಾದಶಮಾನೋತ್ಸವ ಅಂಗವಾಗಿ ನಗರದ ಪ್ರತಾಪನಗರದಲ್ಲಿರುವ ಜನಸೇವಾ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದಿನ ದಿನಗಳಲ್ಲಿ ನಿರುತ್ಸಾಹ, ಒತ್ತಡ ಮತ್ತು ವಿವಿಧ ಸಾಮಾಜಿಕ ಸಮಸ್ಯೆಗಳ ಪರಿಣಾಮವಾಗಿ ಅನೇಕ ಯುವಕರು ಆತ್ಮಹತ್ಯೆಯಂತಹ ದುರ್ಘಟನೆಗಳತ್ತ ಸಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದರು.

ಇಂತಹ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಮಕ್ಕಳ ಮತ್ತು ಯುವಜನರ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ಆದ್ದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ, ಸ್ವಾಭಿಮಾನ, ಸ್ವಾವಲಂಬನೆ ಮತ್ತು ಅಹಿಂಸಾತ್ಮಕ ಜೀವನ ಮೌಲ್ಯಗಳನ್ನು ಬೆಳೆಸುವ ಸಂಸ್ಕಾರವನ್ನು ಮನೆ, ಶಾಲೆ ಹಾಗೂ ಸಮಾಜ ಒಟ್ಟಾಗಿ ರೂಪಿಸಬೇಕು ಎಂದು ಸಲಹೆ ನೀಡಿದರು.

ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ಅನೇಕ ಸಾಫ್ಟ್‌ವೇರ್ ಇಂಜಿನಿಯರ್‌ಗಳ ಪೋಷಕರು ವೃದ್ಧಾಶ್ರಮಗಳಲ್ಲಿ ಜೀವನ ಸಾಗಿಸುತ್ತಿರುವುದು ನೋವಿನ ಸಂಗತಿಯಾಗಿದೆ. ಮಕ್ಕಳು ತಮ್ಮ ಪೋಷಕರ ಸೇವೆ ಮಾಡುವ ಮೂಲಕ ಜೀವನದ ನೈತಿಕ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.

ಸರ್ವಜ್ಞ ಹಾಗೂ ಬಸವಣ್ಣನವರ ವಚನಗಳನ್ನು ಉಲ್ಲೇಖಿಸಿದ ಅವರು, ಉತ್ತಮ ಬದುಕಿನ ಸೂತ್ರಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜನಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಷ್ಠಾನದ ಹಿರಿಯ ನಿರ್ದೇಶಕ ಬಿ.ಎಸ್. ಕುದುರೆ ಅಧ್ಯಕ್ಷತೆ ವಹಿಸಿದ್ದರು.

ಶಾಲೆಯ ಆಡಳಿತಾಧಿಕಾರಿ ಸೌಭಾಗ್ಯವತಿ, ಪ್ರೌಢಶಾಲೆಯ ಮುಖ್ಯಶಿಕ್ಷಕ ರಾಹುಲ್ ಎಂ., ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ನೀಲಮ್ಮ ಚಾಮರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸತೀಶ್ ಚಿಮ್ಮಾ ನಿರೂಪಿಸಿದರು.

Related Articles

Leave a Reply

Your email address will not be published. Required fields are marked *

Back to top button