ಸಾಂಸ್ಕೃತಿಕ

ಅಲ್ಲಮ ಪ್ರಭುವಿನ ವಚನಗಳು ಬದುಕನ್ನು ಪರಿಪೂರ್ಣತೆಯತ್ತ ಕೊಂಡೊಯ್ಯುತ್ತವೆ: ಭಾರತಿ ವಸ್ತ್ರದ್

ಬೀದರ್‌ನಲ್ಲಿ ನಡೆದ ಅಲ್ಲಮ ಪ್ರಭು ವಿಚಾರ ಸಂಕಿರಣ ಸಮಾರೋಪದಲ್ಲಿ ವಚನ ಸಾಹಿತ್ಯದ ಮೌಲ್ಯಗಳನ್ನು ಅನಾವರಣಗೊಳಿಸಿದ ಗಣ್ಯರು

ಬೀದರ್, ಜು.11: ಅಲ್ಲಮ ಪ್ರಭುದೇವರ ವಚನಗಳು ಮನುಷ್ಯನ ಬದುಕನ್ನು ಶೂನ್ಯದಿಂದ ಪರಿಪೂರ್ಣತೆಯತ್ತ ಕೊಂಡೊಯ್ಯುವ ಶಕ್ತಿಯನ್ನು ಹೊಂದಿವೆ ಎಂದು ಸಾಹಿತಿ ಭಾರತಿ ವಸ್ತ್ರದ್ ಅಭಿಪ್ರಾಯಪಟ್ಟರು.

ನಗರದ ಪೂಜ್ಯ ಚೆನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ವಚನಾಮೃತ ಕನ್ನಡ ಸಂಘದ ವತಿಯಿಂದ ಆಯೋಜಿಸಿದ್ದ ಮಹಾನುಭಾವಿ ಅಲ್ಲಮ ಪ್ರಭುದೇವರ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಲ್ಲಮ ಪ್ರಭುವಿನ ವಚನಗಳಲ್ಲಿ ಮಾನವೀಯತೆಯ ಮಾರ್ಗ ಅಡಗಿದೆ. ಇಂದಿನ ಸಮಾಜಕ್ಕೆ ಅವರ ಚಿಂತನೆಗಳು ಅತ್ಯಂತ ಪ್ರಸ್ತುತವಾಗಿದ್ದು, ಉತ್ತಮ ಜೀವನ ಮೌಲ್ಯಗಳನ್ನು ಬೆಳೆಸುವಲ್ಲಿ ಅವು ಮಹತ್ವದ ಪಾತ್ರ ವಹಿಸುತ್ತವೆ ಎಂದು ಅವರು ಹೇಳಿದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ಡಾ. ಗಂಗಾಂಬಿಕೆ ಅಕ್ಕ ಮಾತನಾಡಿ, ಅಲ್ಲಮ ಪ್ರಭುದೇವರ ವ್ಯಕ್ತಿತ್ವವು ಅಪರೂಪದ್ದಾಗಿದ್ದು, ಅವರ ವಿಚಾರಧಾರೆಗಳನ್ನು ಅರ್ಥೈಸಿಕೊಂಡರೆ ಜೀವನದ ದಾರಿ ಸುಗಮವಾಗುತ್ತದೆ ಎಂದು ತಿಳಿಸಿದರು.

ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಮಾತನಾಡಿ, ಜಿಲ್ಲೆಯ ಮನೆಮನೆಗೆ ವಚನ ಸಾಹಿತ್ಯದ ಕೃತಿಗಳನ್ನು ತಲುಪಿಸುವ ಉದ್ದೇಶದಿಂದ ಸಂಘವು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಶರಣರ ವಿಚಾರಧಾರೆಗಳನ್ನು ಜನಸಾಮಾನ್ಯರಿಗೆ ಪರಿಚಯಿಸುವ ಕಾರ್ಯವನ್ನು ನಿರಂತರವಾಗಿ ನಡೆಸಲಾಗುತ್ತಿದೆ ಎಂದರು.

ಕನ್ನಡ ಭಾಷೆಯ ಅಭಿವೃದ್ದಿಗೆ ಸಂಘದಿಂದ ವಿವಿಧ ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಕ್ಕಳಲ್ಲಿ ವಚನ ಸಾಹಿತ್ಯದ ಬಗ್ಗೆ ಜಾಗೃತಿ ಮೂಡಿಸಲು ಶಾಲಾ ಹಂತದಲ್ಲೇ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ರಾಜಶೇಖರ ಮಂಗಳಗಿ, ಸಾಹಿತಿಗಳಾದ ಪುಣ್ಯವತಿ ವಿಸಾಜಿ, ಜಯದೇವಿ ಯದಲಾಪುರೆ, ಪಾರ್ವತಿ ಸೋನಾರೆ, ಡಾ. ದೇವಕಿ ನಾಗೂರೆ, ಅಶೋಕ್ ಬೂದಿಹಾಳ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ನಡೆದ ಮೂರು ವಿಶೇಷ ವಿಚಾರ ಸಂಕಿರಣಗಳಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಂಶೋಧಕರು ಹಾಗೂ ವಿದ್ವಾಂಸರು ಅಲ್ಲಮ ಪ್ರಭುದೇವರ ವಚನ ಸಾಹಿತ್ಯ, ತತ್ವಚಿಂತನೆ ಮತ್ತು ಸಮಾಜಮುಖಿ ಸಂದೇಶಗಳ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಮಹೇಶ್ ಬಿರಾದಾರ್ ವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button