ಶಿಕ್ಷಣ

ಸಮವಸ್ತ್ರ ಶಿಸ್ತು, ಸಮಾನತೆ ಮತ್ತು ಜವಾಬ್ದಾರಿಯ ಸಂಕೇತ: ಕಮಾಂಡರ್ ವಿ.ಎನ್.ಎಲ್. ರೆಡ್ಡಿ

ಬೀದರ್‌ನ ಸರಸ್ವತಿ ಶಾಲೆಯಲ್ಲಿ ಸಮವಸ್ತ್ರ ದಿನಾಚರಣೆ; ವಿದ್ಯಾರ್ಥಿಗಳಿಗೆ ಶಿಸ್ತು, ದೇಶಸೇವೆ ಮತ್ತು ಮೌಲ್ಯಗಳ ಸಂದೇಶ

ಬೀದರ್, ಜು.11: ಸಮವಸ್ತ್ರವು ಕೇವಲ ಉಡುಗೆಯಲ್ಲ; ಅದು ಶಿಸ್ತು, ಸಮಾನತೆ, ಜವಾಬ್ದಾರಿ ಮತ್ತು ಗೌರವದ ಸಂಕೇತವಾಗಿದೆ ಎಂದು ಭಾರತೀಯ ವಾಯುಪಡೆಯ ಕಮಾಂಡರ್ ವಿ.ಎನ್.ಎಲ್. ರೆಡ್ಡಿ ಹೇಳಿದರು.

ನಗರದ ಸರಸ್ವತಿ ಶಿಕ್ಷಣ ಅಭಿವೃದ್ಧಿ ಸಮಿತಿ (ರಿ) ವತಿಯಿಂದ ನಡೆಸಲ್ಪಡುವ ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಮವಸ್ತ್ರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, “ನಾನು ಈ ಕಾರ್ಯಕ್ರಮದ ಅತಿಥಿಯಲ್ಲ, ಸಮವಸ್ತ್ರ ಧರಿಸಿರುವ ಕಾರಣ ಈ ಕಾರ್ಯಕ್ರಮದ ಒಂದು ಭಾಗವಾಗಿದ್ದೇನೆ” ಎಂದು ಹೇಳಿದರು.

ಸಮವಸ್ತ್ರವು ಸಮಾಜದ ಎಲ್ಲ ವರ್ಗದವರನ್ನೂ ಸಮಾನವಾಗಿ ಕಾಣುವ ಮನೋಭಾವವನ್ನು ಬೆಳೆಸುತ್ತದೆ. ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಇದರ ಪಾತ್ರ ಮಹತ್ವದ್ದಾಗಿದೆ. ಶಾಲೆಯಲ್ಲಿ ದೊರೆಯುವ ಉತ್ತಮ ಶಿಕ್ಷಣವನ್ನು ಸದ್ಬಳಕೆ ಮಾಡಿಕೊಂಡು ಏಕಾಗ್ರತೆಯಿಂದ ಅಧ್ಯಯನ ಮಾಡಬೇಕು. ಜೀವನದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡು ಶಿಸ್ತು, ನೈತಿಕತೆ ಮತ್ತು ಮೌಲ್ಯಗಳನ್ನು ಅಳವಡಿಸಿಕೊಂಡರೆ ಯಶಸ್ಸು ಸಾಧಿಸಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ದೇಶಕ್ಕೆ ಯುದ್ಧ ವಿಮಾನ ಚಾಲಕರನ್ನು ನೀಡುವ ವಿಶಿಷ್ಟ ಕೇಂದ್ರವಾಗಿರುವ ಬೀದರ್ ಹೆಮ್ಮೆಪಡುವಂತದ್ದು. ವಿದ್ಯಾರ್ಥಿಗಳು ತಮ್ಮ ಬೌದ್ಧಿಕ ಸಾಮರ್ಥ್ಯವನ್ನು ವೃದ್ಧಿಸಿಕೊಂಡು ದೇಶಸೇವೆಗೆ ಸಿದ್ಧರಾಗಬೇಕು. ಭವಿಷ್ಯದಲ್ಲಿ ತಮ್ಮ ಸಾಧನೆಯ ಮೂಲಕ ದೇಶ, ಸಮಾಜ ಹಾಗೂ ಶಾಲೆಗೆ ಕೀರ್ತಿ ತರಬೇಕು ಎಂದು ಅವರು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಪ್ರೊ. ಎಸ್.ಬಿ. ಸಜ್ಜನಶೆಟ್ಟಿ ಮಾತನಾಡಿ, ಸಮವಸ್ತ್ರವು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯಪಾಲನೆ ಮತ್ತು ಜವಾಬ್ದಾರಿಯ ಮನೋಭಾವ ಬೆಳೆಸುತ್ತದೆ. ಸಮಾಜದ ವಿವಿಧ ಹಿನ್ನೆಲೆಯ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಸಮಾನವಾಗಿ ಕಾಣುವಂತೆ ಮಾಡುವಲ್ಲಿ ಸಮವಸ್ತ್ರದ ಮಹತ್ವ ಅಪಾರವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಹನುಮಂತರಾವ್ ಪಾಟೀಲ್ ಉಪಸ್ಥಿತರಿದ್ದರು. ಸಹಶಿಕ್ಷಕಿ ಅರುಣಾಕುಮಾರಿ ಪಾಟೀಲ್ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಇಂದುಮತಿ ಮೇತ್ರೆ ದೇಶಭಕ್ತಿ ಗೀತೆ ಹಾಡಿದರು. ಮುಖ್ಯಗುರು ಊರ್ಮಿಳಾ ಬಕ್ಷಿ ವಂದನಾರ್ಪಣೆ ಸಲ್ಲಿಸಿದರು. ದೈಹಿಕ ಶಿಕ್ಷಕ ನಾಮದೇವ ರಾಠೋಡ್ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button