ಮೂರು ಕೊಲೆ ಪ್ರಕರಣ: ಸನ್ನಡತೆ ಆಧಾರದ ಮೇಲೆ ಪರಪ್ಪನ ಅಗ್ರಹಾರದಿಂದ ಮಂದೇವಾಲದ ಸಾಯಬಣ್ಣ ನಾಟೀಕಾರ್ ಬಿಡುಗಡೆ

ಕಲಬುರ್ಗಿ, ಜು.೫- ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ, ಹಲವು ವರ್ಷಗಳಿಂದ ಬಂಧಿಯಾಗಿದ್ದ ಅಪರಾಧಿಗಳು, ಅದರಲ್ಲಿಯೂ ಹೆಚ್ಚಾಗಿ ಕೊಲೆ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾದವರಿಗೆ ಇದೀಗ ಬಿಡುಗಡೆಯ ಭಾಗ್ಯ ಸಿಕ್ಕಿದೆ. ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ಸನ್ನಡತೆ ತೋರಿ ಸೆರೆಮನೆಯಿಂದ ಬಂಧಮುಕ್ತರಾದ ೨೪ ಜೀವಾವಧಿ ಸಜಾ ಕೈದಿಗಳಿಗೆ ರಾಜ್ಯ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಬೀಳ್ಕೊಟ್ಟರು.
೨೪ ಜೀವಾವಧಿ ಸಜಾ ಕೈದಿಗಳು ಬಿಡುಗಡೆಯಾದವರಲ್ಲಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಮಂದೇವಾಲ್ ಗ್ರಾಮದ ಸಾಯಿಬಣ್ಣ ಲಿಂಗಪ್ಪ ನಾಟೀಕಾರ್ ಸಹ ಒಬ್ಬರಾಗಿದ್ದು, ಅವರ ಕೊಲೆ ಪ್ರಕರಣಗಳು ರೋಚಕವಾಗಿವೆ. ಮೂರು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅವರು ೩೭ ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಸನ್ನಡತೆ ಆಧಾರದ ಮೇಲೆ ಜೈಲಿನಿಂದ ಹೊರಬಂದಿದ್ದಾರೆ.
ಸಾಯಿಬಣ್ಣ ನಾಟೀಕಾರ್ ಅವರು ಜೈಲಿನಲ್ಲಿದ್ದಾಗಲೇ ಕಾನೂನು ಸೇರಿದಂತೆ ನಾಲ್ಕು ಪದವಿಗಳನ್ನು ಪೂರ್ಣಗೊಳಿಸಿದ್ದು, ಅವರ ಬಿಡುಗಡೆಗೆ ಎಡಿಜಿಪಿ ಅಲೋಕ್ ಕುಮಾರ್ ಅವರ ವಿಶೇಷ ಕಾಳಜಿಯೇ ಕಾರಣ ಎಂದು ಸ್ವತ: ಜೈಲಿನಿಂದ ಬಿಡುಗಡೆಯಾದ ಸಾಯಿಬಣ್ಣ ಅವರು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.
ನಾನು ಕಲಬುರ್ಗಿ ಮೂಲದ ಮಂದೇವಾಲದವನು. ಕರ್ನಾಟಕ ಸ್ಟೇಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದೆ. ಆದ್ರೆ, ಮೂರು ಜನರನ್ನು ಕೊಲೆ ಮಾಡಿ ಜೈಲು ಸೇರಿದ್ದೆ. ಈಗ ನನಗೆ ಬಿಡುಗಡೆಯಾಗಿದೆ. ಈಗ ನಾನು ನನ್ನೂರಿಗೆ ಹೋಗುವೆ. ಯಾವುದೇ ಕಾರಣಕ್ಕೂ ನನ್ನ ಗಡ್ಡವನ್ನು ತೆಗೆಸುವುದಿಲ್ಲ. ನನ್ನ ಬಿಡುಗಡೆಗೆ ಎಡಿಜಿಪಿ ಅಲೋಕಕುಮಾರ್ ಅವರೇ ಕಾರಣ. ಅವರ ಆಶೀರ್ವಾದ ನನ್ನ ಮೇಲೆ ಇದೆ ಎಂದು ಸಾಯಬಣ್ಣ ಹೇಳಿದರು.
ನಾನು ಮೊದಲು ಮದುವೆಯಾದ ಮೇಲೆ ನಾನು ಕೆಲಸಕ್ಕೆ ಹೋಗಿ ಮನೆಗೆ ಬರುವುದರೊಳಗೆ ನನ್ನ ಪತ್ನಿ ವೇಶ್ಯಾವಾಟಿಕೆಯಲ್ಲಿ ತೊಡಗುತ್ತಿದ್ದಳು. ಒಂದು ದಿನ ವ್ಯಕ್ತಿಯೊಬ್ಬನ ಜೊತೆ ಇರುವುದನ್ನು ಕಂಡೆ. ಆಗ ಆ ಕುರಿತು ಪತ್ನಿಗೆ ಕೇಳಿದಾಗ ಆಕೆ ನನ್ನ ಚಿಕ್ಕಪ್ಪನ ಮಗ ಎಂದು ಹೇಳಿದ್ದಳು. ಮತ್ತೆ ಅವರಿಬ್ಬರೂ ಮಲಗಿದ್ದನ್ನು ನೋಡಿದೆ. ಇದರಿಂದಾಗಿ ಕೋಪ ಬಂದು ಪತ್ನಿಗೆ ಹತ್ಯೆ ಮಾಡಿ ಜೈಲು ಸೇರಿದೆ ಎಂದು ನಾಟೀಕಾರ್ ಮೊದಲ ಕೊಲೆಯ ಕುರಿತು ತಿಳಿಸಿದರು.
ಹೆಂಡತಿಯನ್ನು ಕೊಂದು ಜೈಲು ಸೇರಿದ್ದ ಸಾಯಿಬಣ್ಣ ಒಂದು ವರ್ಷಗಳ ಬಳಿಕ ಜಾಮೀನಿನ ಮೇಲೆ ಹೊರಬಂದೆ. ಆದಾಗ್ಯೂ, ಜೈಲಿನಲ್ಲಿ ಪರಿಚಯ ಆದವರಿಂದ ಮತ್ತೆ ಸಂಬಂಧ ಕೂಡಿ ಬಂದಿತ್ತು. ಮಗಳನ್ನು ಮದುವೆಯಾಗಿ ಎಂದು ಜೈಲಿನಲ್ಲಿ ಪರಿಚಯವಾಗಿದ್ದವರು ಸಾಯಿಬಣ್ಣ ಅವರಿಗೆ ಹೇಳಿದ್ದರು. ಅದರಂತೆಯೇ ಒಪ್ಪಿಕೊಂಡು ನನ್ನ ವೆಚ್ಚದಲ್ಲಿಯೇ ನಾನು ಎರಡನೇ ಮದುವೆಯಾದೆ ಎಂದು ಅವರು ವಿವರಿಸಿದರು.
ಇದಾದ ಬಳಿಕ ಮೊದಲ ಪತ್ನಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಜೆಯಾಗಿತ್ತು, ಜೈಲಿಗೆ ಹೋಗುವಾಗ ಎರಡನೇ ಪತ್ನಿ ಗರ್ಭಿಣಿಯಾಗಿದ್ದಳು. ಎರಡು ವರ್ಷದ ನಂತರ ನಾನು ಪೆರೋಲ್ ಮೇಲೆ ಹೊರಬಂದಿದ್ದರು, ಆ ವೇಳೆ ಎರಡನೇ ಪತ್ನಿಗೆ ಮತ್ತೊಬ್ಬನ ಜೊತೆ ಅನೈತಿಕ ಸಂಬಂಧ ಇರೋದು ಗೊತ್ತಾಯಿತು. ಇದರಿಂದ ರೊಚ್ಚಿಗೆದ್ದ ನಾನು ಚಾಕುವಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ದುರಾದೃಷ್ಟವಶಾತ್ ಹೊಟ್ಟೆಯಲ್ಲಿದ್ದ ಮಗುವಿಗೂ ಚಾಕುವಿನ ಏಟು ಬಿದ್ದು ಸಾವನ್ನಪ್ಪಿತ್ತು. ಇದಾದ ಬಳಿಕ ತಾನು ಕೂಡ ಚಾಕು ತಿವಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಆದಾಗ್ಯೂ, ನನಗೆ ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಿದ್ದರಿಂದ ಬದುಕುಳಿದೆ ಎಂದು ಅವರು ಹೇಳಿದರು.
ಪತ್ನಿ ಮತ್ತು ಮಗು ಕೊಲೆ ಮಾಡಿದ ಹಿನ್ನೆಲೆ ಸಾಯಿಬಣ್ಣಗೆ ಜೈಲು ಶಿಕ್ಷೆ ಆಗಿತ್ತು, ಸುಮಾರು ೩೭ ವರ್ಷಗಳ ಕಾಲ ಜೈಲುವಾಸ ಅನುಭವಿಸಿ ಇದೀಗ ಸನ್ನಡತೆ ಆಧಾರದ ಮೇಲೆ ಬಿಡುಗಡೆಯಾಗಿದ್ದೇನೆ. ಇದ್ದ ಹತ್ತಾರು ಎಕರೆ ಜಮೀನು ಹೋಯ್ತು ಎಂದು ಸಾಯಿಬಣ್ಣ ಲಿಂಗಪ್ಪ ನಾಟಿಕಾರ್ ಅವರು ಕಣ್ಣೀರು ಹಾಕಿದರು



