ಲಕ್ಷ್ಮಣ ಸವದಿರವರಿಗೆ ಸಚಿವ ಸ್ಥಾನ ನೀಡಿ ಹಿಂದುಳಿದ ಗಾಣಿಗ ಸಮಾಜಕ್ಕೆ ಪ್ರಾತಿನಿಧ್ಯ ಕೊಡಲು ಸಜ್ಜನ್ ಆಗ್ರಹ

ಕಲಬುರ್ಗಿ, ಜೂ.೨೯- ಸಚಿವ ಸಂಪುಟ ವಿಸ್ತರಣೆ ಸಂದಭದಲ್ಲಿ ಗಾಣಿಗ ಸಮಾಜಕ್ಕೆ ಪ್ರಾತಿನಿಧ್ಯ ನೀಡುವ ಭಾಗವಾಗಿ ಮಾಜಿ ಉಪ ಮುಖ್ಯಮಂತ್ರಿ, ಸಮಾಜದ ಅಗ್ರಗಣ್ಯ ನಾಯಕರೂ ಆದ ಅಥಣಿ ಕ್ಷೇತ್ರದ ಶಾಸಕ ಲಕ್ಷ್ಮಣ ಸವದಿರವರಿಗೆ ಸಚಿವ ಸ್ಥಾನ ನೀಡಿ ಹಿಂದುಳಿದ ಗಾಣಿಗ ಸಮಾಜಕ್ಕೆ ಪ್ರಾತಿನಿಧ್ಯ ನೀಡಬೇಕು ಎಂದು ಅಖಿಲ ಭಾರತ ಗಾಣಿಗರ ಸಂಘದ ನೂತನ ರಾಜ್ಯಾಧ್ಯಕ್ಷ ಸುರೇಶ್ ಆರ್. ಸಜ್ಜನ್ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಪದೇ ಪದೇ ಸಮಾಜವನ್ನು ನಿರ್ಲಕ್ಷö್ಯ ತೋರಿ ಸಚಿವ ಸ್ಥಾನ ನೀಡುವಲ್ಲಿ ಸದಾ ಅನ್ಯಾಯ ಮಾಡಿತು. ೨೦೧೮ರ ಸಮಿಶ್ರ ಸರ್ಕಾರದ ಅವಧಿಯಲ್ಲಿ ಹಾಗೂ ೨೦೧೩ ಕಾಂಗ್ರೆಸ್ ಪಕ್ಷದ ಏಕ ಮೇವ ಸರ್ಕಾರದಲ್ಲಿ ಹಾಗೂ ಈ ಹಿಂದಿನ ಅವಧಿಯಗಳಲ್ಲಿಯೂ ಸಹಿತ ಗಾಣಿಗ ಸಮಾಜಕ್ಕೆ ಸಚಿವ ಸ್ಥಾನ ನೀಡಿಲ್ಲ ಎಂದು ಆರೋಪಿಸಿದರು.
ಪ್ರಸ್ತುತದಲ್ಲಿ ಕಾಂಗ್ರೇಸ್ ಪಕ್ಷದಿಂದ ಮೂರು ಜನ ಗಾಣಿಗ ಸಮಾಜದ ಶಾಸಕರಿದ್ದು, ಅಥಣಿಯಿಂದ ಲಕ್ಷ್ಮಣ್ ಸವದಿ, ಭದ್ರಾವತಿ ಕ್ಷೇತ್ರದಿಂದ ಬಿ.ಕೆ. ಸಂಗಮೇಶ್ವರ್, ಚಿತ್ರದುರ್ಗದಿಂದ ಕೆ.ಸಿ. ವಿರೇಂದ್ರ ರವರು ಶಾಸಕರಾಗಿದ್ದು, ಮೂವರಲ್ಲಿ ಲಕ್ಷ್ಮಣ್ ಸವದಿ ಹಾಗೂ ಬಿ.ಕೆ. ಸಂಗಮೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೂರು ಜನರನ್ನು ಸಚಿವ ಸ್ಥಾನ ನೀಡುವ ಮೂಲಕ ಆ ಪಕ್ಷ ಸಮಾಜಕ್ಕೆ ಅಸ್ಥಿತ್ವವನ್ನು ನೀಡಿತ್ತು. ಆ ಸಮಯದಲ್ಲಿ ಲಕ್ಷ್ಮಣ್ ಸವದಿg, ಬಿ.ಜಿ. ಪುಟ್ಟ ಸ್ವಾಮಿ, ಎಸ್.ಕೆ. ಬೆಳ್ಳುಬ್ಬಿ ಅವರು ಸಚಿವರಾಗಿದ್ದರು. ಇದಕ್ಕೆ ಅಪವಾದ ಎಂಬAತೆ ಯಾವಾಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಅವಾಗೆಲ್ಲ ಸಮಾಜವನ್ನು ಕಡೆಗಣಿಸಿದೆ ಎಂದು ಅವರು ಖಂಡಿಸಿದರು.
ಗಾಣಿಗ ಅಭಿವೃದ್ಧಿ ನಿಗಮವನ್ನು ಶಿಘ್ರವೇ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಿ ಕನಿಷ್ಠ ೫೦೦ ಕೋಟಿ ರೂ.ಗಳ ಅನುದಾನ ನೀಡಬೇಕು ಹಾಗೂ ಕಾರ್ಯಾರಂಭ ಮಾಡಬೇಕು ಎಂದು ಒತ್ತಾಯಿಸಿದ ಅವರು, ಹಿಂದಿನ ಬಿಜೆಪಿ ಸರ್ಕಾರ ಗಾಣಿಗ ಸಮಾಜದ ರಾಜ್ಯವ್ಯಾಪಿ ಹೋರಾಟಕ್ಕೆ ಮಣಿದು ನಿಗಮ ಮಂಡಳಿ ರಚಿಸಿತ್ತು. ನಂತರ ಬಂದ ಕಾಂಗ್ರೆಸ್ ಸರ್ಕಾರವು ಅನುಷ್ಠಾನಗೊಳಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ದೂರಿದರು.
ನೂತನ ಪದಾಧಿಕಾರಿಗಳು:
ಹುಬ್ಬಳ್ಳಿ ನಗರದಲ್ಲಿ ನಡೆದ ಅಖಿಲ ಭಾರತ ಗಾಣಿಗರ ಸಂಘ ಕೇಂದ್ರ ಘಟಕ ಹುಬ್ಬಳ್ಳಿಯ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ರಾಜ್ಯ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಿಸಲಾಗಿದೆ. ನೂತನ ರಾಜ್ಯಾಧ್ಯಕ್ಷರಾಗಿ ಸುರೇಶ್ ಆರ್. ಸಜ್ಜನ್, ಕಾರ್ಯ್ಯಾಧ್ಯಕ್ಷರಾಗಿ ಅಶೋಕ ನವಲಗುಂದ ರೋಣ, ಗೌರವ ಅಧ್ಯಕ್ಷರಾಗಿ ಆರ್.ಜಿ. ಪಾಟೀಲ್ ಬಾಗಲಕೋಟ, ಕೋಶ್ಯಾಧ್ಯಕ್ಷರಾಗಿ ಜಿ. ಉಮೇಶ್ ವಿಜಯನಗರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸುರೇಶ್ ಸಜ್ಜನ್ ಅವರು ಹೇಳಿದರು.
ನೂತನ ರಾಜ್ಯ ಅಧ್ಯಕ್ಷನಾಗಿ ನಾನು ರಾಜ್ಯಾದ್ಯಂತ ಜೊತೆಗೆ ಪ್ರಥಮ ಆಧ್ಯತೆ ಭಾಗವಾಗಿ ಕಲ್ಯಾಣ ಕರ್ನಾಟದಲ್ಲಿ ಪ್ರವಾಸ ಮಾಡಿ ಸಮಾಜವನ್ನು ಸಾಮಾಜಿಕವಾಗಿ ಸಂಘಟನಾತ್ಮಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಬಲಪಡಿಸುವ ನಿಟ್ಟಿನಲ್ಲಿ ತಂಡವನ್ನು ಕಾರ್ಯೊನ್ಮುಖಗೊಳಿಸುವುದಾಗಿ ತಿಳಿಸಿದ ಅವರು, ಒಂದು ವೇಳೆ ಸಮಾಜವನ್ನು ಸರ್ಕಾರ ನಿರ್ಲಕ್ಷಿಸಿದರೆ ಹೋರಾಟ ಸಹ ರೂಪಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಶರಣಕುಮಾರ್ ಬಿಲ್ಲಾಡ್, ಶಿವಕುಮಾರ್ ಸಜ್ಜನ್, ಮಲ್ಲಿನಾಥಗೌಡ ಪಾಟೀಲ್ ಯಲಗೋಡ್, ಅಪ್ಪಾರಾವ್ ಪಾಟೀಲ್ ಅತನೂರ್, ಸಂಗಣಗೌಡ ಪಾಟೀಲ್ ಕಲ್ಲೂರ್, ಡಾ. ಕೇಶವ ಕಾಬಾ, ಶಿವಾನಂದ್ ದ್ಯಾಮಗೊಮಡ್, ಶರಣಬಸಪ್ಪ ಜೋಗೂರ್, ಶಂಕರಗೌಡ ಪಾಟೀಲ್ ಭಾಸಗಿ, ಬಸವರಾಜ್ ಪಾಟೀಲ್ ಕುಕನೂರ್, ರೇವಣಸಿದ್ದಪ್ಪ ಸಂಕಾಣಿ, ಸವಿತಾ ಸಜ್ಜನ್, ಭಾಗೀರಥಿ ಗುನ್ನಾಪೂರ್, ಮುತ್ತುರಾಜ್ ಕಣ್ಣೂರ್, ಶ್ರೀಮಂತ್ ಹಚ್ಚಡ ಮುಂತಾದವರು ಉಪಸ್ಥಿತರಿದ್ದರು.



